ಕನ್ನಡಪ್ರಭ ವಾರ್ತೆ ಯಳಂದೂರು
ತಾಲೂಕಿನ ಗೌಡಹಳ್ಳಿ-ಮಲಾರಪಾಳ್ಯ ಗ್ರಾಮಗಳ ಸುತ್ತಮುತ್ತ ಒಂಟಿ ಹುಲಿ ಓಡಾಡುತ್ತಿದ್ದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.ಗೌಡಹಳ್ಳಿ-ಮಲಾರಪಾಳ್ಯ ಅವಳಿ ಗ್ರಾಮಗಳು ಬಿಳಿಗಿರಿ ರಂಗನಾಥಸ್ವಾಮಿ ಹುಲಿರಕ್ಷಿತಾರಣ್ಯದ ಯಳಂದೂರು ವಲಯಕ್ಕೆ ಸೇರಿದ ಕಾಡಂಚಿನ ಗ್ರಾಮಗಳಾಗಿವೆ. ಅರಣ್ಯಕ್ಕೆ ಹೊಂದಿಕೊಂಡಂತೆಯೇ ನೂರಾರು ಎಕರೆ ಕೃಷಿ ಭೂಮಿ ಇದ್ದು, ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆಯುವುದರಿಂದ ಈ ಭಾಗದಲ್ಲಿ ರೈತರ ಸಂಚಾರ ಅಧಿಕವಾಗಿದೆ. ಅರಣ್ಯದಿಂದ ಕೃಷಿ ಭೂಮಿಯತ್ತ ಆನೆಗಳು ಬರದಂತೆ ಕಂದಕ ನಿರ್ಮಾಣ ಮಾಡಿರುವುದರಿಂದ ಆನೆಗಳ ಹಾವಳಿ ಇಲ್ಲವಾಗಿದೆ. ಆದರೆ ಕಾಟಿಗಳು, ಜಿಂಕೆಗಳಂತೂ ಕೃಷಿ ಭೂಮಿಯತ್ತ ಬರುವುದು ಸಹಜವಾದರೂ ರೈತರು ಆ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಇದೀಗ ಈ ಭಾಗದ ಆಮೆಕೆರೆ ಬೀಟ್ ವ್ಯಾಪ್ತಿಯ ಜಮೀನುಗಳ ಸುತ್ತಮುತ್ತ ಹುಲಿ ಕಾಣಿಸಿಕೊಂಡಿರುವುದರಿಂದ ರೈತರು ಹಾಗೂ ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಕರು ತಿಂದು ಹೋಯಿತೇ ಹುಲಿ?:ಮಲಾರಪಾಳ್ಯ ಗ್ರಾಮದ ಮಡಿವಾಳ ಬೀದಿಯ ಮಹದೇವಶೆಟ್ಟಿ ಎಂಬ ರೈತರ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಲಾಗಿದ್ದ ಸುಮಾರು ಒಂದು ವರ್ಷದ ಕರುವೊಂದನ್ನು ಹೊತ್ತೊಯ್ದು ಅಲ್ಲಿಂದ ಸುಮಾರು ನೂರು ಮೀಟರ್ ದೂರದಲ್ಲಿ ಕರುವನ್ನು ಸಂಪೂರ್ಣ ಭಕ್ಷಿಸಿ ತಲೆ ಹಾಗೂ ಕಾಲುಗಳನ್ನು ಮಾತ್ರ ಬಿಟ್ಟು ಹೋಗಿತ್ತು. ಈ ವಿಷಯ ಕಾಡ್ಗಿಚ್ಚಿನಂತೆ ಹಬ್ಬಿ ಆತಂಕಕ್ಕೆ ಹುಟ್ಟಿಸಿತ್ತು. ಕರು ತಿಂದದ್ದು ಹುಲಿಯೋ, ಚಿರತೆಯೋ ಎಂಬ ಚರ್ಚೆ ನಡೆಯುತ್ತಿದೆ. ಮಲಾರಪಾಳ್ಯ ಸಮೀಪದ ಶಿವನ ದೇವಸ್ಥಾನದ ಸಮೀಪ ಹುಲಿ ಓಡಾಡಿದ್ದು ಅದರ ವಿಡಿಯೋ ಮೊಬೈಲ್ ಗಳಲ್ಲಿ ಸೆರೆಯಾಗಿದೆ. ನಂತರ ಮಲಾರಪಾಳ್ಯದ ಮಹದೇವಶೆಟ್ಟಿಯವರ ಕರು ತಿಂದಿರುವುದು ಈ ಹುಲಿಯೇ ಎನ್ನಲಾಗುತ್ತಿದೆ.ಇದರ ನಡುವೆಯೇ ಶನಿವಾರ ಬೆಳಿಗ್ಗೆ ಮಲಾರಪಾಳ್ಯದಿಂದ ಒಂದು ಕಿ.ಮೀ ದೂರದಲ್ಲಿರುವ ರಸ್ತೆಯಂಚಿನಲ್ಲಿ ಉಳುಮೆ ಮಾಡಿರುವ ಚಿಕ್ಕಣ್ಣ, ನೀಲಯ್ಯ ಎಂಬುವವರ ಜಮೀನಿನಲ್ಲಿ ಹುಲಿಯ ಹೆಜ್ಜೆ ಗುರುತು ಕಂಡು ಬಂದಿದೆ. ಅಲ್ಲದೇ ಜಮೀನಿಗೆಂದು ಹೊರಟಿದ್ದ ರೈತರಿಬ್ಬರು ಬೆಳ್ಳಂಬೆಳಿಗ್ಗೆ ಆನೆ ಕಂದಕ ದಾಟಿ ಮದ್ದೂರು ಗುಡ್ಡ ಹತ್ತಿ ಹುಲಿ ಹೋಗುತ್ತಿರುವುದನ್ನು ಗಮನಿಸಿದ್ದು, ಈ ವಿಚಾರ ಚರ್ಚೆಯಾಗುತ್ತಿದ್ದಂತೆ ಸ್ಥಳೀಯರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಗ್ರಾಮದೊಳಕ್ಕೇ ಹುಲಿ ನುಗ್ಗಿ ಕರುವೊಂದನ್ನು ಹೊತ್ತೊಯ್ದು ತಿಂದಿದ್ದು ಈ ವಿಷಯ ಅರಣ್ಯ ಇಲಾಖೆಗೆ ಗೊತ್ತಾಗಿದೆ. ನಂತರ ಒಂದೆರಡು ದಿನಗಳ ಕಾಲ ಜೀಪಿನಲ್ಲಿ ಬಂದು ಬೀಟ್ ಹಾಕಿ ಹೋಗಿದ್ದಾರೆಂಬುದನ್ನು ಹೊರತುಪಡಿಸಿದರೆ ಗಂಭೀರ ಕ್ರಮಕ್ಕೆ ಮುಂದಾಗಿಲ್ಲ. ಕರು ತಿಂದಿರುವುದು ಹುಲಿಯೋ ಚಿರತೆಯೋ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಒಮ್ಮೆ ರುಚಿ ಕಂಡ ಮೇಲೆ ಈಗಾಗಲೇ ಕರು ತಿಂದಿರುವ ಸುತ್ತಮುತ್ತ ಯಾವ ಕ್ಷಣದಲ್ಲಾದರೂ ಬೇಟೆಗಾರ ಪ್ರಾಣಿ ಮತ್ತೆ ಬರುವ ಸಾಧ್ಯತೆ ಇರುತ್ತದೆ. ಈ ವಿಚಾರ ಗೊತ್ತಿದ್ದರೂ ಅರಣ್ಯ ಇಲಾಖೆಯವರು ಬೋನು ಇಟ್ಟು ಭಕ್ಷಕ ಪ್ರಾಣಿಯನ್ನು ಹಿಡಿಯುವ ಪ್ರಯತ್ನವನ್ನಂತೂ ಈವರೆಗೂ ಮಾಡಿಲ್ಲ.ಕಾಡು ಪ್ರಾಣಿಗಳು ಸತ್ತು ಹೋದರೆ ಸಂಬಂಧಿಸಿದ ರೈತರು, ಸ್ಥಳೀಯರ ಮೇಲೆ ಅನುಮಾನಗೊಂಡು ವಿಚಾರಣೆ ನಡೆಸಿ ತೊಂದರೆ ಕೊಡುವ ಅರಣ್ಯ ಇಲಾಖೆ ಹುಲಿ ಪತ್ತೆಯಾಗಿ ಈಗಾಗಲೇ ಕರು ತಿಂದಿದೆ ಎಂದು ಸ್ಥಳೀಯವಾಗಿ ಚರ್ಚೆ ಹಾಗೂ ಹುಲಿ ಓಡಾಟದ ವಿಡಿಯೋ ವೈರಲ್ ಆದರೂ ಇದುವರೆಗೂ ಹುಲಿ ಹಿಡಿಯುವ ಕಾರ್ಯಾಚರಣೆಗೆ ಮುಂದಾಗಿಲ್ಲ
ಮಲಾರಪಾಳ್ಯದಿಂದ ಸುಮಾರು ನಾಲ್ಕು ಕಿ.ಮೀ ದೂರದವರೆಗೆ ಆಮೆಕೆರೆ ರಸ್ತೆಯಲ್ಲಿ ನಿತ್ಯವೂ ಎಂಟರಿಂದ ಹತ್ತು ಜನರು ವಾಕಿಂಗ್ ಮಾಡುತ್ತೇವೆ. ಬೆಳಿಗ್ಗೆಯಿಂದ ಸಂಜೆವರೆಗೆ ಈ ರಸ್ತೆಯಲ್ಲಿ ನೂರಾರು ರೈತರು ಓಡಾಡುತ್ತಾರೆ. ಸ್ಥಳೀಯ ರೈತರು ಹುಲಿ ಓಡಾಟವನ್ನು ಗಮನಿಸಿದ್ದಾರೆ. ಕಂಡುಬಂದಿರುವ ಹೆಜ್ಜೆ ಗುರುತು ಹುಲಿಯದ್ದೋ ಚಿರತೆಯದ್ದೋ ಸ್ಪಷ್ಟತೆಯಿಲ್ಲ. ಆದರೆ ಅರಣ್ಯ ಇಲಾಖೆ ಹುಲಿ ಅಥವಾ ಚಿರತೆಯನ್ನು ಹಿಡಿಯುವ ಕಾರ್ಯಾಚರಣೆಯನ್ನು ಶೀಘ್ರವೇ ಪ್ರಾರಂಭಿಸುವುದು ಉತ್ತಮ. ಗೌಡಹಳ್ಳಿ ಮಹೇಶ್, ವಕೀಲ