ಹುಬ್ಬಳ್ಳಿ:
ಹುಬ್ಬಳ್ಳಿ-ಧಾರವಾಡ ಮಹಾನಗರ ಸೇರಿದಂತೆ ಜಿಲ್ಲಾದ್ಯಂತ ಬರೋಬ್ಬರಿ 6 ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ಜಿಲ್ಲೆಯಲ್ಲಿ ಮತದಾನ ದಿನ ಸಿವಿಲ್ ಪೊಲೀಸರು, ರಾಜ್ಯ ಆರ್ಮ್ ಪೊಲೀಸರು, ಕೆಎಸ್‌ಆರ್‌ಪಿ, ಗೃಹರಕ್ಷಕ ಸೇರಿ ಒಟ್ಟು 2200 ಪೊಲೀಸರು ಭದ್ರತೆ ಒದಗಿಸಲಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಾರ್ಯಾಲಯ ತಿಳಿಸಿದೆ.ಇನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ಮತದಾನ ದಿನ ಒಟ್ಟು 4000 ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ. ಯಾವುದೇ ರೀತಿ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಸಿಬ್ಬಂದಿಗಳಿಗೆ ಸರಿಯಾದ ವ್ಯವಸ್ಥೆ ಮಾಡಲಾಗಿದೆ. ಊಟ, ನೀರು ಅವರಿಗೆ ಉಳಿದುಕೊಳ್ಳಲು ಎಲ್ಲ ರೀತಿ ವ್ಯವಸ್ಥೆ ಆಗಿದೆ. ಸೂಕ್ಷ್ಮ, ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚಿನ ಪೊಲೀಸ್ ಭದ್ರತೆ, ಶಾಂತಿಯುತ ಮಾತದಾನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಕಮಿಷನರ್ ರೇಣುಕಾ ಸುಕುಮಾರ ತಿಳಿಸಿದ್ದಾರೆ.
ಗಡೀಪಾರು:ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಪ್ರಾರಂಭವಾದಾಗಿನಿಂದ ಸಮಾಜದ ಶಾಂತಿ ಕದಡುವ ರೌಡಿಶೀಟರ್ ಪೈಕಿ ಈವರೆಗೆ ಬರೋಬ್ಬರಿ 33 ಜನರನ್ನು ಗಡೀಪಾರು ಮಾಡಲಾಗಿದೆ. ಇದರಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ವ್ಯಾಪ್ತಿಯಲ್ಲಿ 12 ಜನರನ್ನು ಗಡೀಪಾರು ಮಾಡಿದ್ದರೆ, ಹುಬ್ಬಳ್ಳಿ-ಧಾರವಾಡ ಕಮಿಷನರ್ ವ್ಯಾಪ್ತಿಯಲ್ಲಿ 21 ಜನರನ್ನು ಗಡೀಪಾರು ಮಾಡಿ, 1700 ರೌಡಿಶೀಟರ್‌ಗಳನ್ನು ಗಡೀಪಾರು ಮಾಡಲಾಗಿದೆ.ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಶಾಂತಿಯುತ ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಗತ್ಯಕ್ಕೆ ತಕ್ಕಂತೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ ಹೇಳಿದರು.