ಕೊಡಗು ಜಿಲ್ಲೆಯ ರಸ್ತೆಗಳಿಗೆ ಟಿಂಬರ್ ಲೋಡಿಂಗ್ ಕಂಟಕ

KannadaprabhaNewsNetwork |  
Published : Aug 29, 2024, 12:50 AM IST
 ಕ್ರೇನ್ ಬಳಸಿ ಬೃಹತ್ ಮರದ ದಿಮ್ಮಿಗಳನ್ನು ಲೋಡಿಂಗ್ ಮಾಡುಲಾಗುತ್ತಿವುದು | Kannada Prabha

ಸಾರಾಂಶ

ತೋಟದೊಳಗೆ ತುಂಡರಿಸಿದ ಮರದ ತುಂಡುಗಳನ್ನು ತೋಟದ ಒಳಗಿನಿಂದ ಕ್ರೇನ್ ಬಳಸಿ ರಸ್ತೆಗಳಿಗೆ ಎಳೆದು ತಂದು ಅಟ್ಟಿ ಮಾಡಿ ಬಳಿಕ ಸಾರ್ವಜನಿಕ ರಸ್ತೆಗಳಲ್ಲಿ ಭಾರಿ ವಾಹನಗಳನ್ನು ನಿಲ್ಲಿಸಿ ಅವುಗಳಿಗೆ ಮರದ ದಿಮ್ಮಿಗಳನ್ನು ಲೋಡ್ ಮಾಡುತ್ತಾರೆ. ಇಂತಹ ಸಂದರ್ಭ ಲಕ್ಷಾಂತರ ರು. ವೆಚ್ಚದಲ್ಲಿ ದುರಸ್ತಿ ಮಾಡಲಾಗಿರುವ ರಸ್ತೆಯ ಡಾಂಬರು ಕಿತ್ತು ಬರುತ್ತಿದ್ದು, ರಸ್ತೆಗಳು ಗುಂಡಿ ಬಿದ್ದು ಹದಗೆಡುತ್ತಿವೆ.

ಮೋಹನ್ ರಾಜ್

ಕನ್ನಡಪ್ರಭ ವಾರ್ತೆ ಮಡಿಕೇರಿ

ಸಾರ್ವಜನಿಕ ರಸ್ತೆಗಳಲ್ಲೇ ಕ್ರೇನ್ ಬಳಸಿ ಬೃಹತ್ ಮರದ ದಿಮ್ಮಿಗಳನ್ನು ಲೋಡಿಂಗ್ ಮಾಡಲಾಗುತ್ತಿದ್ದು, ಮರದ ತುಂಡುಗಳನ್ನು ಎಳೆದೊಯ್ಯುವಾಗ ಅತಿಯಾದ ಒತ್ತಡದಿಂದ ರಸ್ತೆಗಳು ಹಾಳಾಗುತ್ತಿವೆ. ಸಾರ್ವಜನಿಕ ರಸ್ತೆಗಳಲ್ಲಿ ಲೋಡಿಂಗ್ ಮಾಡದಂತೆ ನಿರ್ಬಂಧ ಹೇರಬೇಕೆಂಬ ಒತ್ತಾಯ ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿದೆ.

ಪಶ್ಚಿಮ ಘಟ್ಟಕ್ಕೆ ಸೇರಿದ ಕೊಡಗಿನಲ್ಲಿ ಮರಗಳು ಹೆಚ್ಚಾಗಿ ಲಭ್ಯವಾಗುತ್ತಿದ್ದು, ಮರದ ವ್ಯಾಪಾರಿಗಳು ಇಲ್ಲಿಂದ ಮರಗಳನ್ನು ಖರೀದಿಸಿ ವಿವಿಧ ಉದ್ದೇಶಗಳಿಗಾಗಿ ರಾಜ್ಯ ಹಾಗೂ ಹೊರ ರಾಜ್ಯಗಳ ಬಹುತೇಕ ಕಡೆಗಳಿಗೆ ದಿಮ್ಮಿಗಳನ್ನು 10 ಚಕ್ರಗಳ ಲಾರಿಗಳಲ್ಲಿ ಸಾಗಿಸುತ್ತಾರೆ.

ತೋಟದೊಳಗೆ ತುಂಡರಿಸಿದ ಮರದ ತುಂಡುಗಳನ್ನು ತೋಟದ ಒಳಗಿನಿಂದ ಕ್ರೇನ್ ಬಳಸಿ ರಸ್ತೆಗಳಿಗೆ ಎಳೆದು ತಂದು ಅಟ್ಟಿ ಮಾಡಿ ಬಳಿಕ ಸಾರ್ವಜನಿಕ ರಸ್ತೆಗಳಲ್ಲಿ ಭಾರಿ ವಾಹನಗಳನ್ನು ನಿಲ್ಲಿಸಿ ಅವುಗಳಿಗೆ ಮರದ ದಿಮ್ಮಿಗಳನ್ನು ಲೋಡ್ ಮಾಡುತ್ತಾರೆ. ಇಂತಹ ಸಂದರ್ಭ ಲಕ್ಷಾಂತರ ರು. ವೆಚ್ಚದಲ್ಲಿ ದುರಸ್ತಿ ಮಾಡಲಾಗಿರುವ ರಸ್ತೆಯ ಡಾಂಬರು ಕಿತ್ತು ಬರುತ್ತಿದ್ದು, ರಸ್ತೆಗಳು ಗುಂಡಿ ಬಿದ್ದು ಹದಗೆಡುತ್ತಿವೆ. ಇದರಿಂದಾಗಿ ಜಿಲ್ಲೆಯ ಬಹುತೇಕ ಕಡೆ ಸುಗಮ ಸಂಚಾರ ಎಂಬುವುದು ಜನತೆಗೆ ಮರೀಚಿಕೆಯಾಗಿದೆ.

ಕ್ರೇನ್ ಗಳ ಮೂಲಕ ದಿಮ್ಮಿಗಳನ್ನು ರಸ್ತೆಗಳಲ್ಲೇ ಲೋಡಿಂಗ್ ಮಾಡುತ್ತಿವುದು ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರಿಗೂ ಕೂಡ ಅಪಾಯಕಾರಿಯಾಗಿ ಪರಿಣಮಿಸಿದೆ. ಅಲ್ಲದೆ ಲೋಡಿಂಗ್ ಸಂದರ್ಭ ವಾಹನ ಓಡಾಟಕ್ಕೂ ಅಡಚಣೆಯಾಗುತ್ತಿದ್ದು, ತುರ್ತು ನಿಮಿತ್ತ ಆಸ್ಪತ್ರೆಗಳಿಗೆ ತೆರಳುತ್ತಿರುವವರಿಗೂ ಸಂಕಷ್ಟ ಅನುಭವಿಸುವಂತಾಗಿದೆ. ಆದರೂ ಈ ವರೆಗೆ ಜಿಲ್ಲಾಡಳಿತವಾಗಲಿ, ಲೋಕೋಪಯೋಗಿ ಇಲಾಖೆಯಾಗಲಿ ಯಾವುದೇ ಕಠಿಣ ಕ್ರಮಕ್ಕೆ ಮುಂದಾಗದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇತ್ತೀಚೆಗಷ್ಟೇ ಸೋಮವಾರಪೇಟೆ ತಾಲೂಕಿನ ತಣ್ಣೀರು ಹಳ್ಳ ಗ್ರಾಮದ ಹಾರಳ್ಳಿ ರಸ್ತೆಯನ್ನು ಶಾಸಕರ ಅನುದಾನದಲ್ಲಿ ಸುಮಾರು 20 ಲಕ್ಷ ರು. ವೆಚ್ಚದಲ್ಲಿ ಮರುನಿರ್ಮಾಣ ಮಾಡಲಾಗಿತ್ತು. ಆದರೆ ಇದೇ ರಸ್ತೆಯಲ್ಲಿ ಮರದ ದಿಮ್ಮಿಗಳನ್ನು ಎಳೆದು ತಂದು 10 ಚಕ್ರಗಳ ಲಾರಿಗೆ ಲೋಡಿಂಗ್ ಮಾಡಲಾಗಿದೆ. ಇದರಿಂದಾಗಿ ಈ ರಸ್ತೆ ಮತ್ತೆ ಹದಗೆಟ್ಟು ದುರಸ್ತಿಗೆ ಬಂದಿದೆ. ಸ್ಥಳಕ್ಕೆ ಪೊಲೀಸರನ್ನು ಕರೆ ತಂದು ಗ್ರಾಮಸ್ಥರು, ಪಂಚಾಯಿತಿ ಸದಸ್ಯರುಗಳು ಹದಗೆಟ್ಟ ರಸ್ತೆ ದುರಸ್ತಿ ಮಾಡಲು ಒತ್ತಾಯಿಸಿದ್ದಾರೆ.

ಈ ಸಂದರ್ಭ ರಸ್ತೆ ದುರಸ್ತಿ ಪಡಿಸುವುದಾಗಿ ತಿಳಿಸಿ ಹೋದ ಟಿಂಬರ್ ವ್ಯಾಪಾರಸ್ಥರು ನಾಪತ್ತೆಯಾಗಿದ್ದು, ಸಾರ್ವಜನಿಕರಿಗೆ ರಸ್ತೆ ಕಳೆದ ಅವ್ಯವಸ್ಥೆ ಮುಂದುವರಿದಿದೆ. ಇತ್ತ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಕೇವಲ ತಣ್ಣೀರುಹಳ್ಳ ಮಾತ್ರವಲ್ಲ ಜಿಲ್ಲೆಯ ಸಿದ್ದಾಪುರ, ನೆಲ್ಯಹುದಿಕೇರಿ, ಸುಂಟಿಕೊಪ್ಪ, ಸೇರಿದಂತೆ ವಿರಾಜಪೇಟೆ ಹಾಗೂ ಮಡಿಕೇರಿಯ ಕೆಲ ಪ್ರದೇಶಗಳಲ್ಲೂ ನಿರಂತರವಾಗಿ ಇಂತಹ ಲೋಡಿಂಗ್ ಕಾರ್ಯ ನಡೆಯುತ್ತಲೇ ಇದ್ದು, ರಸ್ತೆ ಅವ್ಯವಸ್ಥೆ ಜತೆಗೆ ವಾಹನ ಓಡಾಟಕ್ಕೂ ಸಮಸ್ಯೆಯಾಗುತ್ತಿದ್ದು, ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ. ............ನಮ್ಮೂರಿನ ಹಾರಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಇತ್ತೀಚೆಗಷ್ಟೇ ಶಾಸಕರ ಅನುದಾನದಲ್ಲಿ ಪುನರ್ ನಿರ್ಮಾಣ ಮಾಡಲಾಗಿತ್ತು. ಆದರೆ ರಸ್ತೆ ಅಭಿವೃದ್ಧಿ ಕಂಡ ಕೆಲ ದಿನಗಳಲ್ಲೇ ಕೆಲ ಖಾಸಗಿ ವ್ಯಕ್ತಿಗಳು ಟಿಂಬರ್ ಲೋಡಿಂಗ್ ಮಾಡುವ ಕಾರ್ಯ ನಡೆಸಿದ್ದು, ರಸ್ತೆ ಮತ್ತೆ ಹದಗೆಟ್ಟಿದೆ. ಗ್ರಾಮಸ್ಥರು, ಸ್ಥಳೀಯ ಪ್ರತಿನಿಧಿಗಳು ಸ್ಥಳಕ್ಕೆ ತೆರಳಿ ರಸ್ತೆ ಸರಿಪಡಿಸಿಕೊಡುವಂತೆ ಒತ್ತಾಯಿಸಿದರು. ಕ್ಯಾರೆ ಎನ್ನದ ಅವರು ಅಲ್ಲಿಂದ ತೆರಳಿದ್ದಾರೆ. ಈ ಬಗ್ಗೆ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವ ಮೂಲಕ ಸಾರ್ವಜನಿಕರ ಸಮಸ್ಯೆಯನ್ನು ಇತ್ಯರ್ಥ ಮಾಡಬೇಕಾಗಿದೆ.

-ಆನಂದ್ ರಾಜ್, ತಣ್ಣೀರುಹಳ್ಳ ನಿವಾಸಿ.------------ಜಿಲ್ಲೆಯ ಬಹತೇಕ ಕಡೆ ಸಾರ್ವಜನಿಕ ರಸ್ತೆಗಳಲ್ಲೇ ಟಿಂಬರ್ ಲೋಡಿಂಗ್ ಮಾಡುತ್ತಾರೆ. ಇದರಿಂದಾಗಿ ವಾಹನ ಓಡಾಟಕ್ಕೆ ಅಡಚಣೆಯಾಗುತ್ತಿರುವುದರ ಜತೆಗೆ ರಸ್ತೆ ಮಧ್ಯ ಕ್ರೇನ್ ಗಳ ಮೂಲಕ ದಿಮ್ಮಿಗಳನ್ನು ಮೇಲೆತ್ತುವ ಸಂದರ್ಭ ಸ್ವಲ್ಪ ಎಡವಿದರೂ ಸಾರ್ವಜನಿಕರ ಮೇಲೆ ಬಿದ್ದು ಅನಾಹುತ ಸಂಭವಿಸಬಹುದಾದ ಪರಿಸ್ಥಿತಿ ಕೂಡ ಇದೆ. ಹೀಗಿದ್ದರೂ ಜಿಲ್ಲಾಡಳಿತ ಈ ಕುರಿತು ಕ್ರಮ ಕೈಗೊಳ್ಳಲು ಮುಂದಾಗದೆ ಇರುವುದು ಸರಿಯಲ್ಲ.

-ಕವಿರಾಜು, ಸಿದ್ದಾಪುರ ನಿವಾಸಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ