ಬೆಂಗಳೂರು : ತೃತೀಯ ಭಾಷಾ ವಿಷಯಗಳಿಗೆ ಗ್ರೇಡಿಂಗ್‌ ಬದಲು ಅಂಕಗಳನ್ನೇ ನೀಡುವಂತೆ ಮಾಡಿರುವ ಆದೇಶ ಮರುಪರಿಶೀಲಿಸುವಂತೆ ಸರ್ಕಾರ ಮತ್ತೆ ಹೈಕೋರ್ಟ್‌ ಮೆಟ್ಟಿಲೇರಿರುವುದರಿಂದ ಪರೀಕ್ಷೆಗೂ ಮೊದಲೇ ಪ್ರಕಟಿಸಿದ್ದ ಏ.24ರ ಸಂಭಾವ್ಯ ದಿನಾಂಕದಂದು ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಕಡಿಮೆ.

ಗ್ರೇಡಿಂಗ್‌ ಬದಲು ಅಂಕಗಳನ್ನೇ ನೀಡುವಂತೆ ಆದೇಶಿಸಿರುವ ಪೀಠ

ಗ್ರೇಡಿಂಗ್‌ ಬದಲು ಅಂಕಗಳನ್ನೇ ನೀಡುವಂತೆ ಆದೇಶಿಸಿರುವ ಪೀಠದ ಮುಂದೆ ಏ.21ರಂದು ಮರುಪರಿಶೀಲನಾ ಅರ್ಜಿಯು ವಿಚಾರಣೆಗೆ ನಿಗದಿಯಾಗಿದೆ. ಹೈಕೋರ್ಟ್‌ ಯಾವ ಆದೇಶ ನೀಡಬಹುದು ಎಂಬ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಮತ್ತೊಂದೆಡೆ ಈ ಅರ್ಜಿ ಇತ್ಯರ್ಥವಾಗುವವರೆಗೆ ತೃತೀಯ ಭಾಷಾ ವಿಷಯದಲ್ಲಿ ಗ್ರೇಡಿಂಗ್‌ ನೀಡಬೇಕಾ ಇಲ್ಲಾ ಅಂಕಗಳನ್ನು ಪರಿಗಣಿಸಿ ಒಟ್ಟಾರೆ ಫಲಿತಾಂಶ ಸಿದ್ಧಪಡಿಸಬೇಕಾ ಎಂಬುದು ಸ್ಪಷ್ಟವಾಗುವುದಿಲ್ಲ. ಹಾಗಾಗಿ ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಪೂರ್ಣಗೊಂಡಿದ್ದರೂ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಫಲಿತಾಂಶ ಪ್ರಕಟಣೆಯ ಮಟ್ಟಕ್ಕೆ ಸಂಪೂರ್ಣ ಸಿದ್ಧಪಡಿಸಲು ಸಾಧ್ಯವಾಗುವುದಿಲ್ಲ ಎನ್ನುತ್ತವೆ ಮೂಲಗಳು.

ಅಗತ್ಯಬಿದ್ದರೆ ಹೆಚ್ಚನ ಕಾಲಾವಕಾಶವನ್ನೂ ತೆಗೆದುಕೊಳ್ಳಬಹುದು

ಇನ್ನು, ಏ.21ರಂದು ಈ ಅರ್ಜಿ ವಿಚಾರಣೆಗೆ ಬಂದರೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಂದೇ ಇತ್ಯರ್ಥ ಪಡಿಸಲು ಹೈಕೋರ್ಟ್‌ ಪರಿಗಣಿಸಬಹುದು ಅಥವಾ ಅಗತ್ಯಬಿದ್ದರೆ ಹೆಚ್ಚನ ಕಾಲಾವಕಾಶವನ್ನೂ ತೆಗೆದುಕೊಳ್ಳಬಹುದು. ಈ ಮಧ್ಯೆ, ಹೈಕೋರ್ಟ್‌ನಿಂದ ಯಾವುದೇ ಆದೇಶ ಬಂದರೂ ಅದರಂತೆ ಫಲಿತಾಂಶ ನೀಡಲು ಮಂಡಳಿಯು ಗ್ರೇಡಿಂಗ್‌ ಆಧಾರದಲ್ಲಿ ಒಂದು ಫಲಿತಾಂಶ ಹಾಗೂ ಅಂಕಗಳನ್ನು ಆಧರಿಸಿ ಮತ್ತೊಂದು ಫಲಿತಾಂಶ ಸಿದ್ಧಪಡಿಸಿಕೊಟ್ಟುಕೊಳ್ಳಬಹುದು. ಆದರೆ, ಸದ ಜನಗಣತಿ ಹಿನ್ನೆಲೆಯಲ್ಲಿ ಮಂಡಳಿಯಲ್ಲೂ ಸಿಬ್ಬಂದಿ ಕೊರತೆ ಇದೆ ಎನ್ನಲಾಗುತ್ತಿದೆ.


ಹಾಗಾಗಿ ಈ ರೀತಿ ಎರಡೂ ರೀತಿಯ ಫಲಿತಾಂಶ ಸಿದ್ಧಪಡಿಸುವುದು ಸುಲಭವಲ್ಲ ಎಂದು ಹೇಳಲಾಗುತ್ತಿದೆ. ಈ ಎಲ್ಲಾ ವಿಚಾರಗಳ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಪರೀಕ್ಷೆಗೂ ಮೊದಲೇ ಫಲಿತಾಂಶ ಪ್ರಕಟಣೆಗೆ ನಿಗದಿಪಡಿಸಿದ್ದ ಸಂಭಾವ್ಯ ದಿನಾಂಕವಾದ ಏ.24ರಂದು ಫಲಿತಾಂಶ ಹೊರಬರುವ ಸಾಧ್ಯತೆ ಕಡಿಮೆ ಎನ್ನುತ್ತವೆ ಅಧಿಕಾರಿ ಮೂಲಗಳು.

- ಇತ್ತೀಚೆಗೆ ಹಿಂದಿಗೆ ಅಂಕದ ಬದಲು ಗ್ರೇಡ್‌ ನೀಡಲು ರಾಜ್ಯ ಸರ್ಕಾರ ನಿರ್ಧಾರ

- ಇದನ್ನು ಪ್ರಶ್ನಿಸಿ ಕೆಲವರಿಂದ ಹೈಕೋರ್ಟ್‌ಗೆ ಅರ್ಜಿ. ಇದನ್ನು ಮನ್ನಿಸಿದ್ದ ಕೋರ್ಟ್‌

- ಪುನಃ ಅಂಕವನ್ನೇ ನೀಡುವಂತೆ ಆದೇಶ. ಇದನ್ನು ಪ್ರಶ್ನಿಸಿ ಸರ್ಕಾರ ಮೇಲ್ಮನವಿ

- ನಾಳೆ ಇದರ ಅರ್ಜಿ ವಿಚಾರಣೆ, ಹೈಕೋರ್ಟ್‌ ಆದೇಶ ಏನೆಂಬ ಬಗ್ಗೆ ಕುತೂಹಲ