ಕಂದಾಯ ಸಿಬ್ಬಂದಿಗೆ ಕಾಲಮಿತಿಯಲ್ಲಿ ಪದೋನ್ನತಿ, ಸೌಲಭ್ಯ: ಜಿಲ್ಲಾಧಿಕಾರಿ ದಿವ್ಯಪ್ರಭು

KannadaprabhaNewsNetwork |  
Published : Jan 08, 2025, 12:17 AM IST
7ಡಿಡಬ್ಲೂಡಿ1ಜಿಲ್ಲಾಧಿಕಾರಿ ದಿವ್ಯಪ್ರಭು ಅಧ್ಯಕ್ಷತೆಯಲ್ಲಿ ಜಿಲ್ಲಾ ಕಂದಾಯ ನೌಕರರ ಕುಂದುಕೊರತೆ ಸಭೆ ನಡೆಯಿತು. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಇದ್ದಾರೆ.  | Kannada Prabha

ಸಾರಾಂಶ

ಮುಂದಿನ 15 ದಿನಗಳಲ್ಲಿ ಎಲ್ಲ ತಹಸೀಲ್ದಾರ್‌ರು ಆಯಾ ತಾಲೂಕುಮಟ್ಟದಲ್ಲಿ ಕಂದಾಯ ನೌಕರರ ಸಭೆ ಜರುಗಿಸಿ, ವಿವರ ವರದಿಯೊಂದಿಗೆ ಬಡ್ತಿ, ಆರ್ಥಿಕ ಸೌಲಭ್ಯ, ಕಚೇರಿ ನಿವೇಶನ, ಕಟ್ಟಡ, ಸಿಬ್ಬಂದಿ ವಸತಿ ಗೃಹ ಪ್ರಸ್ತಾವನೆಯನ್ನು ಉಪವಿಭಾಗಾಧಿಕಾರಿಗಳ ಮೂಲಕ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಧಾರವಾಡ:

ಕಂದಾಯ ಇಲಾಖೆ ಅಧಿಕಾರಿ, ಸಿಬ್ಬಂದಿಗೆ ಅರ್ಹತೆ ಆಧಾರದಲ್ಲಿ ಪದೋನ್ನತಿ, ಸೌಲಭ್ಯ ನೀಡಲು ಜಿಲ್ಲಾಡಳಿತ ಬದ್ಧ. ಪ್ರತಿಯೊಬ್ಬರು ಅವರವರ ಕರ್ತವ್ಯಗಳನ್ನು ಬದ್ಧತೆಯಿಂದ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದರು.

ಪ್ರಥಮ ಬಾರಿಗೆ ಜಿಲ್ಲಾ ಕಂದಾಯ ನೌಕರರ ಕುಂದು-ಕೊರತೆ ಸಭೆಯನ್ನು ತಮ್ಮ ಕಚೇರಿಯಲ್ಲಿ ಜರುಗಿಸಿದ ಅವರು, ಸೇವೆಗೆ ಸೇರಿದ ಪ್ರತಿಯೊಬ್ಬರು ಅಗತ್ಯಕ್ಕೆ ಅನುಗುಣವಾಗಿ ಕರ್ತವ್ಯ ನಿರ್ವಹಿಸಬೇಕು. ಕಂದಾಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳಿಗೆ ಅಗತ್ಯ ಸೌಲಭ್ಯ ಮತ್ತು ಬಾಕಿ ಇರುವ ಬಡ್ತಿಗಳನ್ನು ನಿಯಮಾನುಸಾರ ನೀಡಲು ಕ್ರಮಕೈಗೊಳ್ಳುತ್ತೇವೆ. ಮುಂದಿನ 15 ದಿನಗಳಲ್ಲಿ ಎಲ್ಲ ತಹಸೀಲ್ದಾರ್‌ರು ಆಯಾ ತಾಲೂಕುಮಟ್ಟದಲ್ಲಿ ಕಂದಾಯ ನೌಕರರ ಸಭೆ ಜರುಗಿಸಿ, ವಿವರ ವರದಿಯೊಂದಿಗೆ ಬಡ್ತಿ, ಆರ್ಥಿಕ ಸೌಲಭ್ಯ, ಕಚೇರಿ ನಿವೇಶನ, ಕಟ್ಟಡ, ಸಿಬ್ಬಂದಿ ವಸತಿ ಗೃಹ ಪ್ರಸ್ತಾವನೆಯನ್ನು ಉಪವಿಭಾಗಾಧಿಕಾರಿಗಳ ಮೂಲಕ ಕಡ್ಡಾಯವಾಗಿ ಸಲ್ಲಿಸಬೇಕು ಎಂದರು.

ಜಿಲ್ಲೆಯಲ್ಲಿ ಗ್ರೇಡ್-1 ತಹಸೀಲ್ದಾರ್‌ 5 ಹಾಗೂ ಗ್ರೇಡ್-2 ತಹಸೀಲ್ದಾರ್‌ 1 ಹುದ್ದೆ ಖಾಲಿ ಇದೆ, ಪ್ರಥಮ ದರ್ಜೆ ಸಹಾಯಕ 2, ದ್ವಿತೀಯ ಸಹಾಯಕ 18, ಗ್ರಾಮ ಆಡಳಿತ ಅಧಿಕಾರಿ 31, ಶೀಘ್ರ ಲಿಪಿಗಾರ 9, ವಾಹನ ಚಾಲಕ 8, ಡಿ ಗ್ರೂಪ್ 23 ಹುದ್ದೆಗಳು ಖಾಲಿ ಇವೆ. ಒಟ್ಟು 541 ಹುದ್ದೆಗಳ ಪೈಕಿ 444 ಹುದ್ದೆಗಳಲ್ಲಿ ಅಧಿಕಾರಿ, ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇನ್ನೂ 97 ಹುದ್ದೆಗಳು ಖಾಲಿ ಇದ್ದು, ಇವುಗಳನ್ನು ಹಂತ-ಹಂತವಾಗಿ ಭರ್ತಿ ಮಾಡಲು ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ನಗರ, ಮಹಾನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕಂದಾಯ ಇಲಾಖೆ ಭೂಮಿಯಿದೆ. ಹಳೆ ಹುಬ್ಬಳ್ಳಿ ಸೇರಿದಂತೆ ಕೆಲವು ಕಡೆಗಳಲ್ಲಿ ಕಂದಾಯ ಇಲಾಖೆ ಭೂಮಿ ಒತ್ತುವರಿ ಆಗಿದೆ. ಎಲ್ಲ ತಹಸೀಲ್ದಾರ್‌ರು ತಮ್ಮ ತಾಲೂಕು ವ್ಯಾಪ್ತಿಗಳಲ್ಲಿರುವ ಕಂದಾಯ ಇಲಾಖೆ ಭೂಮಿ ಗುರುತಿಸಿ, ಅಳತೆ ಮಾಡಿಸಬೇಕು. ಒತ್ತುವರಿ ಆಗಿದ್ದರೆ ಪೊಲೀಸ್ ಬಂದೋಬಸ್ತ್‌ನಲ್ಲಿ ತೆರವುಗೊಳಿಸಬೇಕು. ಗುರುತು ಕಲ್ಲು ಹಾಕಿ ಸಂರಕ್ಷಿಸಬೇಕು. ಈ ಭೂಮಿಯನ್ನು ಕಂದಾಯ ಇಲಾಖೆ ಕಚೇರಿ ಕಟ್ಟಡ, ಸಿಬ್ಬಂದಿ, ಅಧಿಕಾರಿಗಳಿಗೆ ವಸತಿಗೃಹ ನಿರ್ಮಿಸಲು ಮೀಸಲಿಡಬೇಕು. ಈ ಕುರಿತು ತುರ್ತು ಕ್ರಮವಹಿಸಿ ತಹಸೀಲ್ದಾರ್‌ರು ವರದಿ ಸಲ್ಲಿಸಬೇಕು. ಅಪರ ಜಿಲ್ಲಾಧಿಕಾರಿ ಪರಿಶೀಲಿಸಿ ಕ್ರಮ ಜರುಗಿಸಬೇಕೆಂದರು.

ಪ್ರತಿ ಗ್ರಾಮ ಆಡಳಿತ ಅಧಿಕಾರಿಗೆ ಆಯಾ ಗ್ರಾಮದಲ್ಲಿ ಹಾಗೂ ಕಂದಾಯ ನಿರೀಕ್ಷಕರಿಗೆ ಹೋಬಳಿ ಮಟ್ಟದಲ್ಲಿ ಸುಸಜ್ಜಿತ ಕಟ್ಟಡ ಹೊಂದಲು ಅನುವು ಆಗುವಂತೆ ಕಟ್ಟಡ ನಕ್ಷೆಯೊಂದಿಗೆ ಅಗತ್ಯ ದಾಖಲೆಗಳನ್ನು ತಹಸೀಲ್ದಾರ್‌ರು ಸಲ್ಲಿಸಿದಲ್ಲಿ, ಸಮಗ್ರ ವರದಿಯೊಂದಿಗೆ ಸರ್ಕಾರಕ್ಕೆ ಜಿಲ್ಲಾಡಳಿತದಿಂದ ಪ್ರಸ್ತಾವನೆ ಸಲ್ಲಿಸಲಾಗುವುದು ಮತ್ತು ಸರ್ಕಾರ, ಜನಪ್ರತಿನಿಧಿಗಳ ಸಹಕಾರದಿಂದ ಕಟ್ಟಡ ಪ್ರಾರಂಭಿಸಲು ಯೋಜನೆ ರೂಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಉಪವಿಭಾಗಧಿಕಾರಿ ಶಾಲಂ ಹುಸೇನ್ ಮಾತನಾಡಿದರು. ಕಂದಾಯ ನೌಕರ ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶ ಹಟ್ಟಿಯವರ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಸಚಿನ ಮಳಗಿ ಸ್ವಾಗತಿಸಿದರು. ಖಜಾಂಚಿ ನಾಸೀರ್ ಅಮರಗೋಳ ನಿರೂಪಿಸಿದರು. ಉಪಾಧ್ಯಕ್ಷ ಆನಂದ ನಾಯಕ ವಂದಿಸಿದರು. ಮಲ್ಲಿಕಾರ್ಜುನ ಸೊಲಗಿ, ಮಹೇಶ ನಾಗವ್ವನವರ, ಪ್ರವೀಣ ಕುಲಕರ್ಣಿ ಸಾರಂಗಿ ಮಾತನಾಡಿದರು.

PREV

Recommended Stories

ಏಕಾಏಕಿ ಟೊಮೆಟೋ ಕೇಜಿಗೆ ₹10ಕ್ಕೆ ಕುಸಿತ: ರೈತರು ಕಂಗಾಲು
ವಿಠಲಗೌಡ ತಲೆಬುರುಡೆ ತಂದ ಬಂಗ್ಲೆಗುಡ್ಡೆಯಲ್ಲಿ ಇಂದು ಮಹಜರು?