ರಾಣಿಬೆನ್ನೂರು:ವಿದ್ಯಾರ್ಥಿ ಜೀವನದಲ್ಲಿ ಸಮಯ ಅತ್ಯಮೂಲ್ಯವಾಗಿದ್ದು, ಅದನ್ನು ವ್ಯರ್ಥವಾಗಿ ಹಾಳುಮಾಡದೇ ಕಷ್ಟಪಟ್ಟು ಓದಿ ಜ್ಞಾನ ಪಡೆದುಕೊಳ್ಳಬೇಕು ಎಂದು ಹನುಮಾಪುರದ ಸರ್ಕಾರಿ ಪೌಢಶಾಲೆಯ ಮುಖೋಪಾಧ್ಯಾಯ ಭಗವಂತಗೌಡರ ಹೇಳಿದರು. ನಗರದ ರೇಲ್ವೆ ಸ್ಟೇಷನ್ ರಸ್ತೆ ರೋಟರಿ ಸ್ಕೂಲ್‌ನಲ್ಲಿ ಭಾನುವಾರ ಸ್ಥಳೀಯ ವನಸಿರಿ ಸಂಸ್ಥೆ ವತಿಯಿಂದ ಬೆಂಗಳೂರಿನ ಪಾಂಚಿ ಫೌಂಡೇಶನ್ ಮತ್ತು ವಿವಿಧ ದಾನಿ ಸಂಸ್ಥೆಗಳ ನೆರವಿನಿಂದ ಆಯೋಜಿಸಲಾಗಿದ್ದ ಶಿಕ್ಷಣದ ಮೂಲಕ ಹೆಣ್ಣು ಮಕ್ಕಳ ಸಶಸ್ತೀಕರಣ ಹಾಗೂ ಕಲಿಕಾ ಸಾಮಗ್ರಿಗಳ ವಿತರಣಾ ಸಮಾರಂಭದಲ್ಲಿ ಮಾತನಾಡಿದರು. ಪೋಷಕರು ಓದಿನ ವಿಚಾರವಾಗಿ ಮಕ್ಕಳಲ್ಲಿ ಗಂಡು, ಹೆಣ್ಣು ಭೇದಭಾವ ಮಾಡದೆ ಇಬ್ಬರಿಗೂ ಸಮನಾಗಿ ಪ್ರೋತ್ಸಾಹ ನೀಡಬೇಕು. ಹೆಣ್ಣು ಮಗುವಿಗೆ ಯಾವುದೇ ಕಾರಣಕ್ಕೂ ಅರ್ಧದಲ್ಲಿಯೇ ಶಿಕ್ಷಣ ಮೊಟಕುಗೊಳಿಸದೇ ಉನ್ನತ ವ್ಯಾಸಂಗ ಕೈಗೊಳ್ಳಲು ನೆರವಾಗಬೇಕು. ಈ ನಿಟ್ಟಿನಲ್ಲಿ ವನಸಿರಿ ಸಂಸ್ಥೆಯು ಬಹಳ ಮೌಲ್ಯಯುತವಾದ ಕಾರ್ಯಕ್ರಮ ಮಾಡುತ್ತಿದೆ ಎಂದರು. ವನಸಿರಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಡಿ. ಬಳಿಗಾರ ಮಾತನಾಡಿ, ಹೆಣ್ಣುಮಕ್ಕಳು ಶಿಕ್ಷಣದಿಂದ ತಮ ಜ್ಞಾನವನ್ನು ಹೆಚ್ಚಿಸಿಕೊಂಡು ಸಾಮಾಜಿಕವಾಗಿ, ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬೇಕು. ಇದಕ್ಕೆ ಪೂರಕವಾಗಿ ನಮ್ಮ ಸಂಸ್ಥೆಯು ವಿವಿಧ ದಾನಿಗಳ ನೆರವು ಪಡೆದುಕೊಂಡು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಸಂಸ್ಥೆಯ ನೆರವು ಪಡೆದ ವಿದ್ಯಾರ್ಥಿನಿಯೊಬ್ಬಳು ಭಾರತ್ ಸೆಕ್ಯುರಿಟಿ ಫೋರ್ಸ್ ಪರೀಕ್ಷೆ ಪಾಸು ಮಾಡಿ ದೇಶ ಸೇವೆ ಸಲ್ಲಿಸುವ ಅವಕಾಶ ಪಡೆದಿದ್ದಾಳೆ ಎಂದರು. ರೋಟರಿ ಶಿಕ್ಷಣ ಸಂಸ್ಥೆಯ ಶ್ರೀನಿವಾಸ ಅಧ್ಯಕ್ಷತೆ ವಹಿಸಿದ್ದರು. ಯುನಿಯನ್ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಜಿ.ಎಸ್. ರಾಮಚಂದ್ರ, ಪಾಂಚಿ ಫೌಂಡೇಶನ್ ಪ್ರತಿನಿಧಿಗಳಾದ ಅನಿತಾ ಸಿಂಗ್, ಚೈತ್ರಾ ರೆಡ್ಡಿ, ವಿಶಾಲ ಶೆಟ್ಟಿ, ಕಲ್ಪನಾ ದುಬೆ, ಖುರ್ಷಿದ ಇರಾನಿ, ಮಮತಾರಾವ್, ಪ್ರೇರಣಾ ಟಂಡನ್, ಕಲ್ಪನಾ ಕುಮಾರನ್ ಹಾಗೂ ವನಸಿರಿ ಸಂಸ್ಥೆಯ ಆಡಳಿತ ಮಂಡಳಿಯ ಹಬೀಬ್ ಬಾನು ಹಾನಗಲ್, ರೇಣುಕಾಗುಡಿಮನಿ, ಸಿಬ್ಬಂದಿ, ವಿದ್ಯಾರ್ಥಿನಿಯರ ಪೋಷಕರು, ಮಕ್ಕಳು ಭಾಗವಹಿಸಿದ್ದರು.