ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಪ್ರಾಥಮಿಕ ಶಾಲೆಯ ಮಕ್ಕಳು ಎಂದಿನಂತೆ ಬುಧವಾರ ಸಂಜೆ ಶಾಲೆ ಬಿಟ್ಟ ನಂತರ ಸ್ಕೂಲ್ ಬಸ್‌ನಲ್ಲಿ ಕೋಟೆಬಾಗಿಲು ಮಾರ್ಗವಾಗಿ ಮನೆಗೆ ಹೊರಟಿದ್ದರು. ಮರಿಯಾಡಿಯಲ್ಲಿ ಆರ್‌ಟಿಒ ಅಧಿಕಾರಿಗಳು ವಾಹನವನ್ನು ತಡೆದು ನಿಲ್ಲಿಸಿ ಚಾಲಕನನ್ನು ತಮ್ಮ ಜೀಪಿನ ಬಳಿಗೆ ಕರೆಸಿಕೊಂಡು ದಾಖಲೆಗಳನ್ನು ಕೇಳುತ್ತಿದ್ದರು. ಅರ್ಧ ಗಂಟೆಯಾದರೂ ವಿಚಾರಣೆ ಮುಗಿಯಲಿಲ್ಲ.
ಇತ್ತ ಸ್ಕೂಲ್ ಬಸ್ಸಿನಲ್ಲಿದ್ದ ಕೆಲವು ಚಿಕ್ಕ ಮಕ್ಕಳು ಮನೆಗೆ ಹೋಗುವುದು ತಡವಾಯಿತ್ತೆಂದು ಅಳಲಾರಂಭಿಸಿದ್ದನ್ನು ಗಮನಿಸಿದ ಸ್ಥಳೀಯರು ಅಧಿಕಾರಿಗಳತ್ತ ತೆರಳಿ `ಚಾಲಕನ ವಿಚಾರಣೆಯ ಕಾರಣಕ್ಕೆ ಚಿಕ್ಕ ಮಕ್ಕಳನ್ನು ರಸ್ತೆ ಬದಿಯಲ್ಲಿ ಯಾಕೆ ಕಾಯುವಂತೆ ಮಾಡುತ್ತಿದ್ದೀರಿ, ಅವರು ಮನೆಗೆ ಹೋಗುವುದು ಬೇಡವೆ, ಮಕ್ಕಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸುವ ಅಧಿಕಾರ ನಿಮಗಿದೆಯೆ?` ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ. ಇದರಿಂದ ತಬ್ಬಿಬ್ಬಾದ ಅಧಿಕಾರಿ ಕೂಡಲೇ ಸ್ಕೂಲ್ ಬಸ್ ಚಾಲಕನ ವಿಚಾರಣೆ ಅರ್ಧದಲ್ಲಿ ನಿಲ್ಲಿಸಿ ಬಸ್ಸು ಮುಂದುವರಿಯಲು ಅವಕಾಶ ನೀಡಿದ್ದಾರೆ.