- ಆಶಾಗಳಿಗೆ ತರಬೇತಿ ಶಿಬಿರ ಕಾರ್ಯಾಗಾರದಲ್ಲಿ ಡಾ.ಮುರಳೀಧರ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ಕ್ಷಯರೋಗ ವಾಸಿಯಾಗದ ಕಾಯಿಲೆಯಲ್ಲ, ಕ್ಷಯರೋಗಕ್ಕೆ ಚಿಕಿತ್ಸೆ ಪಡೆದು ಗುಣಮುಖರಾದ 5 ವರ್ಷದೊಳಗಿನ ಮಕ್ಕಳ ಪೋಷಕರನ್ನು ಗುರುತಿಸಿ, ಬಿ.ಸಿ.ಜಿ. ಲಸಿಕೆ ಹಾಕಬೇಕು. ಆರಂಭಿಕ ಹಂತಗಳಲ್ಲಿಯೇ ಸೂಕ್ತ ಚಿಕಿತ್ಸೆ ನೀಡಿದಾಗ ಕ್ಷಯ ಅಥವಾ ಟಿ.ಬಿ. ಎಂದು ಕರೆಯುವ ಕಾಯಿಲೆ ನಿರ್ಮೂಲನೆ ಸಾಧ್ಯ ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ.ಮುರಳೀಧರ್ ಹೇಳಿದರು.ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ ಅಂಗವಾಗಿ ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ ನಡೆದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಆಶಾ ಕಾರ್ಯಕರ್ತೆಯರಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಕೆಲಸ ಮಾಡುವಂತಹ ಕಾರ್ಯಕರ್ತೆಯರು ಅತಿ ಹೆಚ್ಚು ಧೂಮಪಾನ ಮಾಡುವಂಥವರಿಗೆ, ಕಡಿಮೆ ತೂಕ ಇರುವಂಥವರಿಗೆ, 60 ವರ್ಷ ದಾಟಿದ ಹಿರಿಯ ನಾಗರೀಕರಿಗೆ ಬಿಸಿಜಿ ಲಸಿಕೆ ತೆಗೆದುಕೊಳ್ಳುವ ಕುರಿತು ಮಾಹಿತಿ ನೀಡಿ, ಲಸಿಕೆ ಹಾಕಬೇಕು ಎಂದು ತಿಳಿಸಿದರು.ತಾಲೂಕು ಆರೋಗ್ಯಾಧಿಕಾರಿ ಡಾ.ಶಿವಕುಮಾರ್ ಮಾತನಾಡಿ, ಟಿ.ಬಿ. ಸೋಲಿಸಿ, ದೇಶ ಗೆಲ್ಲಿಸಿ ಎಂಬ ಘೋಷವಾಕ್ಯದಂತೆ ಕ್ಷಯರೋಗವನ್ನು ನಿರ್ಮೂಲನೆ ಮಾಡಲು ಪ್ರತಿಯೊಬ್ಬ ನಾಗರೀಕರು ಈ ಕಾಯಿಲೆ ಗುಣ-ಲಕ್ಷಣಗಳ ಬಗ್ಗೆ ತಿಳಿದುಕೊಳ್ಳಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಪಡೆದು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಟಿ.ಲೋಕೇಶ್ ಮಾತನಾಡಿ, ಅಪೌಷ್ಠಿಕ ಆಹಾರಗಳಿಂದ ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ, ಕ್ಷಯರೋಗ ಬರುವ ಸಾಧ್ಯತೆಗಳಿವೆ. ಪ್ರತಿಯೊಬ್ಬರು ಸತ್ವಭರಿತ ಆಹಾರಗಳನ್ನು ಸೇವಿಸಬೇಕು. ಧೂಮಪಾನ, ಮದ್ಯಪಾನ, ತಂಬಾಕು ಗುಟ್ಕಾದಂತಹ ವಸ್ತುಗಳು ಆರೋಗ್ಯಕ್ಕೆ ಮಾರಕ ಎಂಬುದು ಅರಿಯಬೇಕು ಎಂದು ಹೇಳಿದರು.ಈ ಸಮಾರಂಭದಲ್ಲಿ ಡಾ.ಮುರಳೀಧರ್, ಸಂಪನ್ಮೂಲ ವ್ಯಕ್ತಿಗಳಾದ ಶ್ರೀನಿವಾಸ್ ದೊಡ್ಡಮನಿ, ಇನಾಯತ್, ಸುಜಾತ ಮತ್ತಿತರರು ಭಾಗವಹಿಸಿದ್ದರು.
- - - -12ಕೆಸಿಎನ್‌ಜಿ1.ಜೆಪಿಜಿ: