ತರೀಕೆರೆಯಲ್ಲಿ ಶ್ರೀಮಜ್ಜಗದ್ಗುರು ಶ್ರೀ ಆದಿಶಂಕರಾಚಾರ್ಯ ವೃತ್ತ ಲೋಕಾರ್ಪಣೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆಸಮಾಜದ ಉದ್ಧಾರ ಜತೆಗೆ ಆತ್ಮೋದ್ಧಾರವನ್ನು ಮಾನವರು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಶೃಂಗೇರಿ ಪೀಠದ
ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಕರೆ ನೀಡಿದರು.ಶನಿವಾರ ಪಟ್ಟಣದ ಶ್ರೀ ಶಾಂಕರ ಪ್ರಜ್ಞಾ ವೇದಿಕೆ ಹಾಗೂ ಬ್ರಾಹ್ಮಣ ಸೇವಾ ಸಮಿತಿಯಿಂದ ಪಟ್ಟಣದ ದೇವರಪ್ಪ ಬೀದಿಯಲ್ಲಿ ನೂತನವಾಗಿ ನಿರ್ಮಾಣ ವಾಗಿರುವ ಶ್ರೀಮಜ್ಜಗದ್ಗುರು ಶ್ರೀ ಆದಿಶಂಕರಾಚಾರ್ಯ ವೃತ್ತ ಲೋಕಾರ್ಪಣೆ ನೆರವೇರಿಸಿ ಅನ್ನಪೂರ್ಣ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.ದೇಶದ ಉದ್ದಗಲಕ್ಕೆ ಶ್ರೀ ಶಂಕರರು ಪ್ರವಾಸ ಮಾಡಿದ್ದಾರೆ. ಚತುರಾಮ್ನಾಯ ಪೀಠಗಳನ್ನು ಸ್ಥಾಪಿಸಿದ್ದಾರೆ. ಬೇರೆ ಬೇರೆ ಪ್ರದೇಶಗಳಲ್ಲಿ ವಾದದ ಮೂಲಕ ವಿಚಾರಗಳನ್ನು ಮಂಡಿಸಿದ್ದಾರೆ. ಶ್ರೀ ಶಂಕರ ಬಹಳ ದೂರದೃಷ್ಟಿಯಿಂದ ಧರ್ಮ ಸಂಸ್ಥಾಪನೆ ಮಾಡಿದ್ದಾರೆ. ಎಲ್ಲ ಗ್ರಂಥಗಳಿಗೆ ಮೂಲ ಶ್ರೀ ಶಂಕರರು ರಚಿಸಿದ ಗ್ರಂಥವೇ ಆಗಿದೆ. ಶ್ರೀ ಶಂಕರರು ಗ್ರಂಥ, ಭಾಷ್ಯ ಮತ್ತು ಶ್ಲೋಕಗಳನ್ನುರಚಿಸಿದ್ದಾರೆ. ಪ್ರಾಂತೀಯ ಭಾಷೆಗಳಲ್ಲೆ ಉತ್ತಮ ಉಪದೇಶಗಳನ್ನು ಶ್ರೀ ಶಂಕರರು ನೀಡಿ, ಎಲ್ಲರಿಗೂ ಐಕ್ಯತೆ ಬಗ್ಗೆ ಬೋಧಿಸಿದ್ದಾರೆ ಎಂದು ಹೇಳಿದರು. ಸಾವಿರಾರು ವರ್ಷಗಳು ಕಳೆದರೂ ಈವತ್ತಿನವರೆಗೂ ಸನಾತನ ಧರ್ಮ ಸದೃಢವಾಗಿದೆ. ಶ್ರೀ ಶಂಕರ ಜಯಂತಿಗೆ ಮುನ್ನವೇ ತರೀಕೆರೆಯಲ್ಲಿ ಶ್ರೀ ಆದಿಶಂಕರಾಚಾರ್ಯ ವೃತ್ತ ಲೋಕಾರ್ಪಣೆ ಕಾರ್ಯ ನಡೆಯಬೇಕೆಂಬುದು ನಮ್ಮ ಆಶಯವಾಗಿತ್ತು, ಅದರಂತೆ ತರೀಕೆರೆಯಲ್ಲಿ ಬಹು ಸುಂದರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಶ್ರೀ ಶಂಕರಾಚಾರ್ಯ ವೃತ್ತ ಲೋಕಾರ್ಪಣೆ ಕಾರ್ಯ ಅತ್ಯಂತ ಉತ್ತಮ ಕಾರ್ಯವಾಗಿದೆ. ತರೀಕೆರೆಯಲ್ಲಿ ನಡೆದ ಈ ಶ್ರೀ ಆದಿಶಂಕರಾಚಾರ್ಯರ ವೃತ್ತ ಲೋಕಾರ್ಪಣೆ ಕಾರ್ಯಕ್ರಮ ಎಲ್ಲ ಕಡೆಗೂ ಮಾದರಿಯಾಗಬೇಕು. ಪ್ರತಿ ಮನೆಗಳಲ್ಲ್ಲಿ ಶ್ರೀ ಶಂಕರ ಜಯಂತಿ ಆಚರಣೆ ಯಾಗಬೇಕು ಎಂದ ಅವರು ಶೃಂಗೇರಿಗೂ ತರೀಕೆರೆಗೂ ಅವಿನಾಭಾವ ಗುರು-ಶಿಷ್ಯರ ಸಂಬಂಧವಿದೆ ಎಂದು ಸ್ಮರಿಸಿದರು.
ಪಟ್ಟಣಕ್ಕೆ ಆಗಮಿಸಿದ ಶ್ರೀಗಳವರನ್ನು ಬ್ರಾಹ್ಮಣ ಸೇವಾ ಸಮಿತಿ ಅಧ್ಯಕ್ಷ ಆರ್.ಎನ್.ಶ್ರೀಧರ್ ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಂಡರು.ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿ ದೇವಸ್ಥಾನದಲ್ಲಿ ಶ್ರೀ ಸ್ವಾಮಿ ದರ್ಶನದ ನಂತರ ಶ್ರೀಗಳು ಶ್ರೀ ಆದಿಶಂಕರಾಚಾರ್ಯ ವೃತ್ತ ಲೋಕಾರ್ಪಣೆ ನೆರವೇರಿಸಿ ಶ್ರೀ ಶಂಕರಮೂರ್ತಿಗೆ ಬೆಳ್ಳಿ ಹಾರ ಸಮರ್ಪಿಸಿ ಪೂಜಾ ಕಾರ್ಯ ನೆರವೇರಿಸಿದರು. ನಂತರ ಅನ್ನಪೂರ್ಣ ಭವನದಲ್ಲಿ ಬ್ರಾಹ್ಮಣ ಸೇವಾ ಸಮಿತಿ ಅಧ್ಯಕ್ಷ ಆರ್.ಎನ್.ಶ್ರೀಧರ್ ಧೂಳಿ ಪಾದಪೂಜೆ ನೆರವೇರಿಸಿದರು.ವೇ.ಬ್ರ.ಶ್ರೀ.ಕೆ.ಟಿ.ಲಕ್ಷ್ಮೀನಾರಾಯಣ ಭಟ್ಟರು ಅವರಿಂದ ವೇದಘೋಷ ಏರ್ಪಡಿಸಲಾಗಿತ್ತು. ಶ್ರೀ ಶಾಂಕರ ಪ್ರಜ್ಞಾ ವೇದಿಕೆ ಅರುಣ್ ಭೈರವ್ ನೀರಗುಂದ ಮತ್ತು ಸದಸ್ಯರು, ಶಶಾಂಕ್ ಪಂಡಿತ್, ಸಚಿನ್, ರವೀಶ್, ಬ್ರಾಹ್ಮಣ ಸೇವಾ ಸಮಿತಿ ಅಧ್ಯಕ್ಷರು, ಸಮಿತಿ ಕಾರ್ಯದರ್ಶಿ ಡಿ.ಸಿ. ಶ್ರೀನಿವಾಸಮೂರ್ತಿ, ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರು, ವಿಪ್ರ ವಿದ್ಯಾರ್ಥಿ ವೇದಿಕೆ ಅಧ್ಯಕ್ಷರು ಮತ್ತು ಸದಸ್ಯರು, ಶ್ರೀ ಸ್ಕಂದ ಮಾತಾ ವಿಪ್ರ ಮಹಿಳಾ ಸಂಘದ ಅಧ್ಯಕ್ಷೆ ಭಾಮಾ ಸುಬ್ರಹ್ಮಣ್ಯ ಮತ್ತು ಸದಸ್ಯರು, ಬೆಂಗಳೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಡಾ.ಎ.ಎಸ್. ಶಂಕರ ನಾರಾಯಣ ಮತ್ತಿತರರು ಭಾಗವಹಿಸಿದ್ದರು.
12ಕೆಟಿಆರ್.ಕೆ.4ಃ ತರೀಕೆರೆಯಲ್ಲಿ ಶೃಂಗೇರಿ ಮಹಾ ಸಂಸ್ಥಾನದ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿ ನೂತನವಾಗಿ ನಿರ್ಮಾಣವಾಗಿರುವ ಶ್ರೀಮಜ್ಜಗದ್ಗುರು ಶ್ರೀ ಆದಿಶಂಕರಾಚಾರ್ಯ ವೃತ್ತ ಲೋಕಾರ್ಪಣೆ ನೆರವೇರಿಸಿದರು.