ತಗಡಿನ ಶೆಡ್ಡಿನ ಬಿಆರ್‌ಟಿಎಸ್ ತಂಗುದಾಣ; ಬಿಸಿಲ ಬೇಗೆಯಲ್ಲಿ ಸಿಬ್ಬಂದಿ

KannadaprabhaNewsNetwork | Published : Apr 17, 2024 1:16 AM

ಸಾರಾಂಶ

ಹುಬ್ಬಳ್ಳಿ ಹಳೇ ಬಸ್‌ ನಿಲ್ದಾಣದ ಎದುರಿಗಿದ್ದ ಬಿಆರ್‌ಟಿಎಸ್‌ ಬಸ್‌ ನಿಲ್ದಾಣ ತೆರವುಗೊಳಿಸಿ ಈಗ ಇಂದಿರಾ ಗಾಜಿನ ಮನೆಗೆ ತೆರಳುವ ವೃತ್ತದ (ಬಸವವನ) ಬಳಿ ತಾತ್ಕಾಲಿಕವಾಗಿ ತಗಡಿನ ಶೆಡ್‌ ನಿರ್ಮಾಣ ಮಾಡಿದ್ದು, ಬಿಸಿಲಿನ ತೊಂದರೆಯಿಂದಾಗಿ ಇಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿ, ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ: ಇಲ್ಲಿನ ಹಳೇ ಬಸ್‌ ನಿಲ್ದಾಣದ ಎದುರಿಗಿದ್ದ ಬಿಆರ್‌ಟಿಎಸ್‌ ಬಸ್‌ ನಿಲ್ದಾಣ ತೆರವುಗೊಳಿಸಿ ಈಗ ಇಂದಿರಾ ಗಾಜಿನ ಮನೆಗೆ ತೆರಳುವ ವೃತ್ತದ (ಬಸವವನ) ಬಳಿ ತಾತ್ಕಾಲಿಕವಾಗಿ ತಗಡಿನ ಶೆಡ್‌ ನಿರ್ಮಾಣ ಮಾಡಿದ್ದು, ಬಿಸಿಲಿನ ತೊಂದರೆಯಿಂದಾಗಿ ಇಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿ, ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.

ನಗರದ ರಾಣಿ ಚೆನ್ನಮ್ಮ ವೃತ್ತ ಸೇರಿದಂತೆ ಸುತ್ತಮುತ್ತಲೂ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿ ಹಿನ್ನೆಲೆಯಲ್ಲಿ ಹಳೇ ಹುಬ್ಬಳ್ಳಿ ಬಸ್‌ ನಿಲ್ದಾಣದ ಬಳಿ ₹1 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾದ ಬಿಆರ್‌ಟಿಎಸ್‌ನ ಚಿಗರಿ ಬಸ್‌ ನಿಲ್ದಾಣವನ್ನು ಈಗ ನೆಲಸಮ ಮಾಡಿ ಬಸವವನದ ಬಳಿ ತಾತ್ಕಾಲಿಕವಾಗಿ ಬಸ್‌ ನಿಲ್ದಾಣ ನಿರ್ಮಿಸಲಾಗಿದೆ.

2018 ಅಕ್ಟೋಬರ್‌ನಿಂದ ಬಿಆರ್‌ಟಿಎಸ್‌ ಪ್ರತ್ಯೇಕ ಕಾರಿಡಾರ್‌ನಲ್ಲಿ ಚಿಗರಿ ಬಸ್ ಸಂಚಾರ ಆರಂಭಿಸಲಾಗಿತ್ತು. ಹುಬ್ಬಳ್ಳಿಯಿಂದ ಧಾರವಾಡದ ವರೆಗೆ ಸುಮಾರು 32 ಕಡೆಗಳಲ್ಲಿ ಬಿಆರ್‌ಟಿಎಸ್ ಬಸ್‌ ನಿಲ್ದಾಣ ನಿರ್ಮಿಸಿದ್ದು, ಪ್ರತಿ ನಿಲ್ದಾಣಕ್ಕೂ ₹1 ಕೋಟಿಗೂ ಅಧಿಕ ಖರ್ಚು ಮಾಡಲಾಗಿದೆ.

ನಿಲ್ದಾಣದಲ್ಲಿಲ್ಲ ಸೌಲಭ್ಯ: ತಗಡಿನಿಂದ ನಿರ್ಮಿಸಿರುವ ಈ ನಿಲ್ದಾಣದಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೇ ಇಲ್ಲಿನ ಸಿಬ್ಬಂದಿ, ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಇಲ್ಲಿ ನಿತ್ಯವೂ 6 ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಬೆಳಗ್ಗೆ 9 ಗಂಟೆಯಾದರೆ ಸಾಕು ಬಿಸಿಲಿನ ಪ್ರಖರತೆಗೆ ಕಾಯುವ ನಿಲ್ದಾಣದ ಚಾವಣಿಗೆ ಹಾಕಿರುವ ತಗಡುಗಳು ಇಲ್ಲಿ ಪ್ರಯಾಣಿಕರು ನಿಲ್ಲದಂತಹ ಸ್ಥಿತಿ ನಿರ್ಮಾಣ ಮಾಡುತ್ತದೆ. ಇನ್ನು ಇಲ್ಲಿಯೇ ಕಾರ್ಯನಿರ್ವಹಿಸುವ ಸಿಬ್ಬಂದಿ ಸ್ಥಿತಿಯಂತೂ ಹೇಳತೀರದು. ಇಂತಹ ಅವ್ಯವಸ್ಥೆಯಲ್ಲಿಯೇ ಕಾರ್ಯನಿರ್ವಹಿಸುವ ಅನಿವಾರ್ಯತೆ ಇಲ್ಲಿನ ಸಿಬ್ಬಂದಿಯದ್ದು.

ಹಲವು ಜನರಿಗೆ ಮಾಹಿತಿಯೇ ಇಲ್ಲ: ತಾತ್ಕಾಲಿಕವಾಗಿ ನಿರ್ಮಿಸಿರುವ ಈ ಬಸ್‌ ನಿಲ್ದಾಣದ ಕುರಿತು ಹಲವು ಪ್ರಯಾಣಿಕರಿಗೆ ಮಾಹಿತಿಯೇ ಇಲ್ಲ. ಹಲವು ಪ್ರಯಾಣಿಕರು ಹಳೇ ಬಸ್‌ ನಿಲ್ದಾಣದಲ್ಲಿ ತೆರವುಗೊಳಿಸಿರುವ ಬಿಆರ್‌ಟಿಎಸ್‌ ಬಸ್‌ ನಿಲ್ದಾಣದ ಪಕ್ಕದಲ್ಲಿಯೇ ಬಸ್ಸಿಗಾಗಿ ಕಾದು ಕಾದು ಸುಸ್ತಾಗುತ್ತಿದ್ದಾರೆ. ಅಲ್ಲಿರುವ ಆಟೋ ಚಾಲಕರು, ಸಾರಿಗೆ ಸಂಸ್ಥೆ ಸಿಬ್ಬಂದಿ ಈ ನಿಲ್ದಾಣ ಸ್ಥಳಾಂತರಿಸಿರುವ ಮಾಹಿತಿ ನೀಡಿದ ಬಳಿಕ ಪ್ರಯಾಣಿಕರು ಹಳೇ ಬಸ್‌ ನಿಲ್ದಾಣದಿಂದ ಬಸವವನದ ವರೆಗೆ ಕಾಲ್ನಡಿಗೆಯ ಮೂಲಕ ಬಂದು ಬಸ್‌ ಹತ್ತುವ ಸ್ಥಿತಿ ನಿರ್ಮಾಣವಾಗಿದೆ.

ಮಳೆ ಬಂದರೆ ನೀರೆಲ್ಲ ನಿಲ್ದಾಣದೊಳಗೆ: ಈ ಬಸ್‌ ನಿಲ್ದಾಣ ಅಗಲ ತುಂಬಾ ಕಿರಿದಾಗಿದ್ದು, ಇದರಲ್ಲಿಯೇ ಚಿಕ್ಕದಾದ ಕೌಂಟರ್‌ ನಿರ್ಮಿಸಲಾಗಿದೆ. ಇಲ್ಲಿಯೇ ಪ್ರಯಾಣಿಕರು ಟಿಕೆಟ್‌ ಪಡೆದು ಸಂಚರಿಸುತ್ತಾರೆ. ಅಲ್ಪ ಮಳೆಯಾದರೂ ಮಳೆಯ ಹನಿಗಳೆಲ್ಲ ಈ ಬಸ್‌ ನಿಲ್ದಾಣದೊಳಗೆ ಬೀಳುತ್ತವೆ. ಕಳೆದ 2-3 ದಿನಗಳ ಹಿಂದೆ ಸಂಜೆಯ ವೇಳೆ ಸುರಿದ ಮಳೆಯಿಂದಾಗಿ ಈ ನಿಲ್ದಾಣದಲ್ಲಿ ಪ್ರಯಾಣಿಕರು ನಿಲ್ಲದಂತಹ ಸ್ಥಿತಿ ನಿರ್ಮಾಣವಾಗಿತ್ತು. ಮಳೆಯಿಂದ ತಪ್ಪಿಸಿಕೊಳ್ಳಲು ಪ್ರಯಾಣಿಕರು ನಿಲ್ದಾಣದ ಬಳಿ ಇರುವ ಅಂಗಡಿಗಳ ಮುಂದೆ ಆಶ್ರಯ ಪಡೆದಿದ್ದರು.

ಒಟ್ಟಾರೆಯಾಗಿ ತಾತ್ಕಾಲಿಕವಾಗಿ ನಿರ್ಮಿಸಲಾದ ಈ ಬಿಆರ್‌ಟಿಎಸ್‌ ಬಸ್‌ ನಿಲ್ದಾಣದಿಂದ ಸಾರ್ವಜನಿಕರಿಗೆ ಅನಕೂಲಕ್ಕಿಂತ ಅನನುಕೂಲವೆ ಹೆಚ್ಚಾಗಿದ್ದು, ಆದಷ್ಟು ಬೇಗ ಈ ತಾತ್ಕಾಲಿಕ ಶೆಡ್‌ ತೆರವುಗೊಳಿಸಿ ಶಾಶ್ವತವಾದ ಬಸ್‌ ನಿಲ್ದಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಪ್ರಯಾಣಿಕರ ಅಭಿಪ್ರಾಯವಾಗಿದೆ.ನಾನು ಹಳೇ ಹುಬ್ಬಳ್ಳಿ ಬಳಿ ಇದ್ದ ಬಿಆರ್‌ಟಿಎಸ್‌ ಬಸ್‌ ಸ್ಥಳಾಂತರದಿಂದ ಪ್ರಯಾಣಿಕರಿಗೆ ತುಂಬಾ ಸಮಸ್ಯೆಯಾಗಿದೆ. ತಾತ್ಕಾಲಿಕವಾಗಿ ನಿರ್ಮಿಸಿರುವ ನಿಲ್ದಾಣ ಕುರಿತು ಸರಿಯಾದ ಮಾಹಿತಿಯೇ ಇಲ್ಲದೇ ಹಲವು ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ ಎಂದು ಹಳೇ ಹುಬ್ಬಳ್ಳಿ ನಿವಾಸಿ ರಾಜಶ್ರೀ ಮೇಗಿಲಮನಿ ಹೇಳುತ್ತಾರೆ.ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಬಸ್‌ ನಿಲ್ದಾಣವನ್ನು ತಾತ್ಕಾಲಿಕವಾಗಿ ನಿರ್ಮಿಸಲಾಗಿದೆ. ಈಗಾಗಲೇ ಗಾಳಿ ದುರ್ಗಮ್ಮ ದೇವಸ್ಥಾನದ ಬಳಿ ಬಸ್‌ ನಿಲ್ದಾಣದ ಕಾಮಗಾರಿ ನಡೆಯುತ್ತಿದೆ. ಪೂರ್ಣಗೊಳ್ಳುತ್ತಿದ್ದಂತೆ ಇದನ್ನು ತೆರವುಗೊಳಿಸಲಾಗುವುದು ಎಂದು ಬಿಆರ್‌ಟಿಎಸ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ ಜಡೇನವರ ಹೇಳುತ್ತಾರೆ.

Share this article