ಧಾರವಾಡ: ಲೋಕಸಭಾ ಧಾರವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ವಿನೋದ ಅಸೂಟಿ ಮಂಗಳವಾರ ತಮ್ಮ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ಜಿಲ್ಲಾ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ಶಿವಾಜಿ ವೃತ್ತದಿಂದ ಪ್ರಾರಂಭಗೊಂಡ ಮೆರವಣಿಗೆ ರೀಗಲ್ ವೃತ್ತ, ಸಿಬಿಟಿ ರಸ್ತೆ, ಅಂಜುಮನ್ ವೃತ್ತ, ಆಝಾದ್ ಪಾರ್ಕ್, ಜ್ಯುಬಿಲಿ ವೃತ್ತ, ಕೋರ್ಟ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿತು. ಮೆರವಣಿಗೆಯಲ್ಲಿ ಗೌತಮ ಬುದ್ಧ, ಜಗಜ್ಯೋತಿ ಬಸವೇಶ್ವರ, ಡಾ. ಅಂಬೇಡ್ಕರ್, ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರದ ಜತೆಗೆ ಕಾಂಗ್ರೆಸ್ ಧ್ವಜಗಳು, ಟೋಪಿಗಳು ರಾರಾಜಿಸಲ್ಪಟ್ಟವು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ, ಸಂತೋಷ ಲಾಡ್, ವಿನೋದ ಅಸೂಟಿ, ಸಲೀಂ ಅಹ್ಮದ್ ಹಾಗೂ ಕಾಂಗ್ರೆಸ್ ಪರವಾದ ವಿವಿಧ ಜಯಘೋಷ ಮೊಳಗಿದವು. ವಿನೋದ ಅಸೂಟಿ ಅವರ ಬೃಹತ್ ರೋಡ್ ಶೋಗೆ ಡೊಳ್ಳು ಕುಣಿತ, ಝಾಂಜ್ ಮೇಳ, ಜಗ್ಗಲಿಗೆ ಮೇಳ, ಬೊಂಬೆ ಕುಣಿತ ಕೆಲವು ಕಲಾ ತಂಡಗಳು ಮೆರಗು ತುಂಬಿದವು. ಅಸೂಟಿ ಅವರಿಗೆ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕರಾದ ಎನ್.ಎಚ್. ಕೋನರೆಡ್ಡಿ, ಪ್ರಸಾದ ಅಬ್ಬಯ್ಯ, ಮಾಜಿ ಸಂಸದ ಐ.ಜಿ. ಸನದಿ, ಮಾಜಿ ಸಚಿವ ಹಿಂಡಸಗೇರಿ ಸೇರಿ ಪಕ್ಷದ ಸ್ಥಳೀಯ ಮುಖಂಡರು ಸಾಥ್ ನೀಡಿದರು.ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಲು ತಡವಾಗುವ ಹಿನ್ನೆಲೆಯಲ್ಲಿ ಅಸೂಟಿ ಪಕ್ಷದ ಮುಖಂಡರೊಂದಿಗೆ ಮೆರವಣಿಗೆ ಮುಂಚೆಯೇ ಆಗಮಿಸಿ ಎರಡು ಪ್ರತಿಗಳಲ್ಲಿ ನಾಮಪತ್ರ ಸಲ್ಲಿಸಿದರು. ಮೆರವಣಿಗೆ ಮುಗಿಸಿ ಮತ್ತೊಂದು ಬಾರಿ ನಾಮಪತ್ರ ಸಲ್ಲಿಸಲು ಆಗಮಿಸಿದಾಗ ಸಮಯ ಮೀರುತ್ತಿತ್ತು. ಸಮಯ ಮೀರುವ ಹೊತ್ತಿಗೆ ವೀಕ್ಷಕರೊಂದಿಗೆ ಓಡೋಡಿ ಬಂದ ವಿನೋದ ಅಸೂಟಿ, ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಮುಖಂಡರ ಸಮ್ಮುಖದಲ್ಲಿ ಮತ್ತೆರಡು ಪ್ರತಿಗಳ ನಾಮಪತ್ರ ಸಲ್ಲಿಕೆ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಅಜ್ಜಂಫೀರ್ ಖಾದ್ರಿ, ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅನಿಲ ಪಾಟೀಲ, ಅಲ್ತಾಫ್ ಹಳ್ಳೂರ ಇದ್ದರು.
ಕಾಂಗ್ರೆಸ್ ಅಭ್ಯರ್ಥಿ ಅಸೂಟಿ ಬಳಿ ₹16 ಕೋಟಿ ಆಸ್ತಿ:
ಮಂಗಳವಾರ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ ನಾಮಪತ್ರದಲ್ಲಿ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಅಸೂಟಿ ಅವರು ತಮ್ಮ ಚರಾಸ್ತಿ ಹಾಗೂ ಸ್ಥಿರಾಸ್ತಿಯನ್ನು ಘೋಷಿಸಿಕೊಂಡಿದ್ದಾರೆ.
ಇನ್ನು, ಧಾರವಾಡದ ಮನಸೂರು, ಗದಗನ ಕಳಸಾಪುರದಲ್ಲಿ ಐದು ಎಕರೆ ಕೃಷಿಯೇತರ ಭೂಮಿ, ಧಾರವಾಡದ ಹೊಸ ಬಸ್ ನಿಲ್ದಾಣದ ಬಳಿ ಸಿದ್ಧಾರ್ಥ ಕಾಲನಿಯಲ್ಲಿ ಆರು ಗುಂಟೆ ಜಾಗ ಸೇರಿದಂತೆ ₹4 ಕೋಟಿ ಸ್ಥಿರಾಸ್ತಿಯನ್ನು ಅಸೂಟಿ ಹೊಂದಿದ್ದಾರೆ. ಅದೇ ರೀತಿ ತಮ್ಮ ಉದ್ಯಮಕ್ಕಾಗಿ ಅಸೂಟಿ ₹4.50 ಕೋಟಿ ಸಾಲ ಸಹ ಮಾಡಿಕೊಂಡಿದ್ದಾರೆ. ಹಾಗೆಯೇ, ಪತ್ನಿ ಹೆಸರಿನಲ್ಲಿ ₹5.48 ಲಕ್ಷ ಚರಾಸ್ತಿ ಇದೆ. ಹಾಗೆಯೇ, ಇಬ್ಬರು ಪುತ್ರಿಯರು, ಓರ್ವ ಪುತ್ರರಿದ್ದು ಅವರ ಹೆಸರಿನಲ್ಲಿ ಯಾವ ಆಸ್ತಿ ಇಲ್ಲ ಎಂದು ಅಸೂಟಿ ಘೋಷಿಸಿಕೊಂಡಿದ್ದಾರೆ.