ಟಿಪ್ಪು ಹಿಂದೂ, ಕನ್ನಡದ ಕೊಲೆಗೆ ಅಡಿಗಲ್ಲು ಹಾಕಿದ್ದ: ಸಿ.ಟಿ. ರವಿ

KannadaprabhaNewsNetwork |  
Published : Aug 04, 2025, 11:45 PM IST

ಸಾರಾಂಶ

ಚಿಕ್ಕಮಗಳೂರು, ಟಿಪ್ಪು ಸುಲ್ತಾನ್ ಹಿಂದೂ, ಕ್ರಿಶ್ಚಿಯನ್ ಹಾಗೂ ಕನ್ನಡದ ಕೊಲೆಗೆ ಅಡಿಗಲ್ಲು ಹಾಕಿದ್ದ. ಕನ್ನಂಬಾಡಿ ಕಟ್ಟೆ ನಿರ್ಮಾಣಕ್ಕಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.

ಸಚಿವ ಎಚ್.ಸಿ.ಮಹದೇವಪ್ಪ ಹೇಳಿಕೆಗೆ ಪ್ರತಿಕ್ರಿಯೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಟಿಪ್ಪು ಸುಲ್ತಾನ್ ಹಿಂದೂ, ಕ್ರಿಶ್ಚಿಯನ್ ಹಾಗೂ ಕನ್ನಡದ ಕೊಲೆಗೆ ಅಡಿಗಲ್ಲು ಹಾಕಿದ್ದ. ಕನ್ನಂಬಾಡಿ ಕಟ್ಟೆ ನಿರ್ಮಾಣಕ್ಕಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಆರ್‌ಎಸ್‌ಗೆ ಟಿಪ್ಪು ಸುಲ್ತಾನ್ ಅಡಿಗಲ್ಲು ಹಾಕಿದ್ದ ಎನ್ನುವ ಸಚಿವ ಎಚ್.ಸಿ.ಮಹದೇವಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ಇತಿಹಾಸ ಅರಿಯದವರಿಂದ ಅಪಾಯವಿರುವುದಿಲ್ಲ. ತಿರುಚುವವರಿಂದ ಅಪಾಯ ಹೆಚ್ಚು. ಕೆಲವರು ಓಟು ಸಿಗುತ್ತದೆ ಎಂದರೆ ಟಿಪ್ಪುವೇ ನಮ್ಮಪ್ಪ ಎನ್ನುತ್ತಾರೆ ಎಂದು ಕಿಡಿಕಾರಿದರು.

ಟಿಪ್ಪು ಸತ್ತಿದ್ದರಿಂದ ಕನ್ನಡ ಉಳಿಯಿತು. ಇದು ಕನ್ನಡಿಗರ ಪುಣ್ಯ. ಬ್ರಿಟೀಷರ ವಿರುದ್ಧ ಟಿಪ್ಪು ಸುಲ್ತಾನ್ ಹೋರಾಟ ಮಾಡಿದ್ದ ಎಂದರೆ ಒಪ್ಪುತ್ತೇವೆ. ಸ್ವತಂತ್ರ್ಯ ಹೋರಾಟಗಾರ ಎಂದರೆ ಅದು ಒಪ್ಪಲು ಸಾಧ್ಯವಿಲ್ಲದ ಮಾತು. ಟಿಪ್ಪು ಅಡಳಿತದಲ್ಲಿ ಆಡಳಿತ ಭಾಷೆಯಾಗಿದ್ದ ಕನ್ನಡವನ್ನು ತೆಗೆದುಹಾಕಿ ಪರ್ಷಿಯನ್ ಭಾಷೆಯನ್ನು ಹೇರಿದ್ದ. ಆತ ಅಧಿಕಾರದಲ್ಲಿ ಮುಂದುವರಿದಿದ್ದರೆ ಕನ್ನಡ ಕ್ಕಾಗಿ ಕೈ ಎತ್ತಿದವರ ಕೈ ಮತ್ತು ಕೊರಳನ್ನು ಕತ್ತರಿಸುವ ಕೆಲಸ ನಡೆಯುತ್ತಿತ್ತು ಎಂದು ಹೇಳಿದರು.

ಟಿಪ್ಪು ಅಡಿಗಲ್ಲು ಹಾಕಿದ ಎನ್ನಲು ಚಾರಿತ್ರಿಕ ದಾಖಲೆಗಳನ್ನು ಹಾಜರುಪಡಿಸಿದರೆ ಸಚಿವರನ್ನು ನಾವು ಮೈಸೂರಿನಲ್ಲಿ ಅಭಿನಂದಿಸುತ್ತೇವೆ. ಇಲ್ಲವಾದಲ್ಲಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೀರಾ ಎಂದು ಸವಾಲು ಹಾಕಿದರು. ಟಿಪ್ಪುವಿನ ಖಡ್ಗದಲ್ಲಿ ಕಾಫೀರರ ರಕ್ತಕ್ಕಾಗಿ ನನ್ನ ಖಡ್ಗ ತಹತಹಿಸುತ್ತಿದೆ ಎಂದಿತ್ತು. ಹಾಗಾದರೆ ಕಾಫೀರರು ಯಾರು ? ಬರೇ ಸಿ.ಟಿ.ರವಿ ಅಷ್ಟೇ ಅಲ್ಲ, ಮಹದೇವಪ್ಪ, ಪರಮೇಶ್ವರ್, ಸಿದ್ದರಾಮಯ್ಯ, ರಾಹುಲ್ ಗಾಂಧಿ ಎಲ್ಲರೂ ಕಾಫಿರರೇ, ಟಿಪ್ಪುವಿನ ಖಡ್ಗ ಇವರೆಲ್ಲರ ರಕ್ತಕ್ಕಾಗಿ ತಹತಹಿಸುತ್ತಿತ್ತು. ಇದು ಸತ್ಯ ಇದನ್ನು ಹೇಳುವ ಧೈರ್ಯ ಕಾಂಗ್ರೆಸಿಗರಿಗಿಲ್ಲ ಎಂದು ಟೀಕಿಸಿದರು.

-- ಬಾಕ್ಸ್--ಯತೀಂದ್ರಾಗೆ ಪರೋಕ್ಷವಾಗಿ ಟಾಂಗ್

ನಾವು ಆ ಪುಣ್ಯಾತ್ಮರ ಪಾದದ ಧೂಳಿಗೂ ಬರುವುದಿಲ್ಲ, ಅವರು ರಾಜಪ್ರಭುತ್ವದಲ್ಲಿ ಪ್ರಜಾಪ್ರಭುತ್ವ ತಂದರು. ನಾವು ಪ್ರಜಾ ಪ್ರಭುತ್ವದಲ್ಲಿ ರಾಜರಾಗ ಹೊರಟಿದ್ದೇವೆ. ಸರ್ಕಾರದ ಸೈಟು ಹೊಡೆಯುವ ನಾವು ಅವರ ಸಮವಾಗಲು ಸಾಧ್ಯವಾ ? ಮೂಡಾ ಸೈಟ್ ಹೊಡೆಯುವವರು ಮಹಾರಾಜರಿಗೆ ಸಮ ಆಗಲು ಆಗುತ್ತಾ ? ಮುಖ್ಯಮಂತ್ರಿಗಳೇ, ನೀವು ಮೈಸೂರಿನ ಘನತೆಯನ್ನ ಎತ್ತಿ ಹಿಡಿಯಬೇಕೆಂದರೆ ಸುಳ್ಳು ಹೇಳುವ ಮಂತ್ರಿಯನ್ನ ಇಟ್ಟುಕೊಳ್ಳಬೇಡಿ. ನಮ್ಮ ತಂದೆ ನನ್ನನ್ನ ಹೆಗಲ ಮೇಲೆ ಹೊತ್ತು ಮೈಸೂರಿಗೆ ಹೋಗಿ, ಅಂಬಾರಿ, ರಾಜರನ್ನ ತೋರಿಸ್ತಿದ್ರು ಎಂದು ಹೇಳಿದ್ದೀರಾ, ಚಪ್ಪಲಿ ಬಿಟ್ಟು ಕೈ ಮುಗಿಯುತ್ತಿದ್ರು ಎಂದು ಹೇಳ್ತಿದ್ರಲ್ಲಾ ಆ ಶ್ರದ್ಧೆ ನಿಮ್ಮ ತಂದೆಗೆ ಇತ್ತು. ನಿಮಗೆ ಆ ಶ್ರದ್ಧೆ ಇದ್ದರೆ ಮಹದೇವಪ್ಪನನ್ನ ನಿಮ್ಮ ಮಂತ್ರಿ ಮಂಡಲದಿಂದ ವಜಾ ಮಾಡಿ ಎಂದು ಯತೀಂದ್ರಾ ಅವರಿಗೆ ಟಾಂಗ್‌ ಕೊಟ್ಟರು.

---ಪಾರದರ್ಶಕ ತನಿಖೆ ನಡೆಯಲಿಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಮ್ಮ ಆಕ್ಷೇಪ ಇರುವುದು ಧರ್ಮಸ್ಥಳದ ಕ್ಕೆ ಚ್ಯುತಿ ತರುವ ಷಡ್ಯಂತ್ರದ ವಿರುದ್ಧ. ತನಿಖೆ ಪಾರದರ್ಶಕ ಮತ್ತು ಪ್ರಾಮಾಣಿಕವಾಗಿ ನಡೆಯಲಿ. ನಾವು ಯಾರು ಅಡ್ಡಗಾಲು ಹಾಕುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ತಿಳಿಸಿದರು.

ಧರ್ಮಸ್ಥಳದ ಧರ್ಮಾಧಿಕಾರಿಗೆ ಮಸಿ ಬಳಿಯುವ ಷಡ್ಯಂತ್ರ ಸಹಿಸಲು ಸಾಧ್ಯವಿಲ್ಲ. ಇದರ ವಿರುದ್ಧ ಜನರೇ ಸಿಡಿದೇಳುತ್ತಾರೆ. ಪ್ರಕರಣದ ಸತ್ಯಾಸತ್ಯತೆ ಪರಿಶೀಲನೆ ಆಗಲಿ. ತನಿಖಾ ಹಂತದಲ್ಲಿ ನಾನು ಏನು ಮಾತನಾಡುವುದಿಲ್ಲ. ಆದರೆ ಷಡ್ಯಂತ್ರ ಮಾಡುತ್ತಿರುವವರು ಬಾಲ ಬಿಚ್ಚಿದರೆ ಸಮಾಜವೇ ಉತ್ತರ ಕೊಡುತ್ತದೆ. ಸಜ್ಜನರು ಸುಮ್ಮನಿದ್ದಾರೆ ಎಂದು ದುರ್ಜನರು ಮೆರೆಯಬಹುದು ಎಂದುಕೊಂಡರೆ ಅದು ಒಳ್ಳೆಯದಲ್ಲ ಎಂದರು.

--ರಾಹುಲ್ ಬಳಿ ಯಾವ ಬಾಂಬ್ ಇದೆ ನೋಡೋಣ

ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಬಳಿ ಆಟಂಬಾಂಬ್ ಇದೆಯೋ, ಟುಸ್ ಬಾಂಬ್ ಇದೆಯೋ ಅಥವಾ ತಿಂದಿದ್ದು ಹೆಚ್ಚಾಗಿ ಬರೋ ಗ್ಯಾಸ್ ಬಾಂಬ್ ಇದೆಯೋ ಗೊತ್ತಾಗುತ್ತದೆ ಎಂದು ಸಿ.ಟಿ.ರವಿ ಲೇವಡಿ ಮಾಡಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ಸಿಗರು ಅದೇ ವೋಟರ್ ಲಿಸ್ಟ್ ಹಿಡಿದು 136 ಸೀಟು ಗೆದ್ದಿದ್ದಾರೆ. ಆ ಪಟ್ಟಿಯೇ ಸರಿ ಇಲ್ಲ ಎಂದರೆ 136 ಜನರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಲ್ಲವೇ ? ಚುನಾವಣಾ ಅಕ್ರಮ ನಡೆದಿದೆ ಎನ್ನುವುದಾದರೆ ಕಾಂಗ್ರೆಸ್ಸಿಗರು 136 ಜನ ಗೆದ್ದರಲ್ಲವೇ ಅದು ಹೇಗೆ ಎಂದು ಪ್ರಶ್ನಿಸಿದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಐದಕ್ಕೆ ಐದು ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗರು ಗೆದ್ದಿದ್ದಾರೆ. ಮೆಡಿಕಲ್ ಕಾಲೇಜು ನಿರ್ಮಾಣ ಮಾಡಿದ್ದು ನಾವು. ಕೆರೆ ತುಂಬಿಸಿದ್ದು ನಾವು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಿದ್ದು ನಾವು. ಆದರೆ ಗೆದ್ದಿದ್ದು ಅವರು. ಇದು ಹೇಗೆ ? ಇಲ್ಲಿ ಚುನಾವಣಾ ಅಕ್ರಮ ನಡೆಸಿ ಗೆದ್ದಿರುವ ಬಗ್ಗೆ ಅನುಮಾನವಿದೆ. ಇದೀಗ ರಾಹಲ್ ಗಾಂಧಿ ಆಟಂ ಬಾಂಬ್ ಎನ್ನುತ್ತಿದ್ದಾರೆ. ಇದರಿಂದ ಇಡೀ ಕಾಂಗ್ರೆಸ್ ಸರ್ವನಾಶವಾಗುತ್ತದೆಯೋ ಎಂದು ನಾವು ಕಾಯುತ್ತಿದ್ದೇವೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ಕುರಿತು ಇಂದು ರಾಜ್ಯ ವಿಶೇಷ ಸಂಪುಟ ಸಭೆ
ಫೆ.13ಕ್ಕೆ ಕಾಂಗ್ರೆಸ್‌ ಸರ್ಕಾರಕ್ಕೆ 1000 ದಿನ