- ಅಧ್ಯಕ್ಷರ ವಿರುದ್ಧ ಕಾಂಗ್ರೆಸ್ ಸದಸ್ಯರ ಪ್ರತಿಭಟನೆ । ಸಭಾಂಗಣದೊಳಗೆ ನುಗ್ಗಲು ಯತ್ನಿಸಿದ ಬೀದಿ ಬದಿ ವ್ಯಾಪಾರಸ್ಥರು,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಮೊದಲ ಸಾಮಾನ್ಯ ಸಭೆಯಲ್ಲಿ ಗದ್ದಲ, ಪ್ರತಿ ಪಕ್ಷ ದಿಂದ ಸಭಾಂಗಣದಲ್ಲಿ ಪ್ರತಿಭಟನೆ ನಡೆದರೆ, ಹೊರ ಭಾಗದಿಂದ ಬೀದಿ ಬದಿ ವ್ಯಾಪಾರಸ್ಥರು ಸಭೆಯೊಳಗೆ ನುಗ್ಗಲು ಯತ್ನಿಸಿದ ಪ್ರಸಂಗಗಳು ಎದುರಾದವು.
ಬೆಳಿಗ್ಗೆ 11.15ಕ್ಕೆ ಸಭೆ ಆರಂಭವಾಗಿ ಸಭೆಯಲ್ಲಿ ಸ್ವಾಗತ ಕೋರುತ್ತಿದ್ದಂತೆ ಸಭಾಂಗಣದ ದ್ವಾರದಲ್ಲಿ ನಿಂತಿದ್ದ ಸುಮಾರು 10- 15 ಮಂದಿ ಬೀದಿ ಬದಿ ವ್ಯಾಪಾರಸ್ಥರು ನಗರಸಭೆ ವಿರುದ್ಧ ಘೋಷಣೆ ಹಾಕಿದರು. ಕೆಲವೇ ಕ್ಷಣದಲ್ಲಿ ಘೋಷಣೆ ಮೇಲೆ ಧ್ವನಿಯಾಗುವ ಜತೆಗೆ ಸಭಾಂಗಣದ ಪ್ರವೇಶ ದ್ವಾರಕ್ಕೂ ಪ್ರತಿಭಟನಾಕಾರರು ಕೈ ಹಾಕಿ ಒಳಗೆ ನುಗ್ಗಲು ಯತ್ನಿಸಿದರು. ಆಗ ಸ್ಥಳದಲ್ಲಿಯೇ ಇದ್ದ ನಗರಸಭೆ ಸಿಬ್ಬಂದಿ ತಡೆದು ಹೊರಗೆ ಕಳುಹಿಸಿದರು. ಆದರೂ ಪ್ರತಿಭಟನೆ ಮುಂದುವರಿಸಿದರು.ಇದೇ ವಿಷಯವಾಗಿ ಸಾಮಾನ್ಯಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು. ಬೀದಿ ಬದಿ ವ್ಯಾಪಾರಸ್ಥರಿಂದ ಸುಂಕ ವಸೂಲಿ ಮಾಡಲಾಗುತ್ತಿದೆ. ಅವರಿಂದ ಆದಾಯ ನಿರೀಕ್ಷೆ ಮಾಡುತ್ತಿದ್ದೇವೆ. ಇನ್ನೊಂದೆಡೆ ಬೀದಿ ಬದಿಯಲ್ಲಿ ವ್ಯಾಪಾರ ಮಾಡಬೇಡಿ ಎಂದು ತೊಂದರೆ ಕೊಡ್ತಾ ಇದ್ದರೆ ಅವರು ಎಲ್ಲಿಗೆ ಹೋಗಬೇಕು ಎಂದು ಕಾಂಗ್ರೆಸ್ ಸದಸ್ಯರಾದ ಮುನೀರ್, ಶಾದಬ್, ಲಕ್ಷ್ಮಣ್ ಪ್ರಶ್ನಿಸಿದರು. ಇದಕ್ಕೆ ನಗರಸಭೆ ಮಾಜಿ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಬೆಂಬಲ ಸೂಚಿಸಿದರು.
ರಸ್ತೆ ಬದಿಯಲ್ಲಿ ನಿಂತು ವ್ಯಾಪಾರ ಮಾಡಬೇಡಿ ಎಂದು ಹೇಳಿದ್ದೇವೆ. ತಳ್ಳುವ ಗಾಡಿಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆಗೆದುಕೊಂಡು ಹೋಗಿ ವ್ಯಾಪಾರ ಮಾಡಬೇಕೆಂದು ಹೇಳಿದ್ದೇವೆಂದು ಪೌರಾಯುಕ್ತ ಬಿ.ಸಿ.ಬಸವರಾಜ್ ಸಮಾಜಾಯಿಸಿ ನೀಡಿದರು. ಫುಟ್ ಪಾತ್ ತೆರವು ಸ್ವಾಗತ. ಸುಂಕ ವಸೂಲಿಗೆ ಒಂದೆಡೆ ಟೆಂಡರ್ ಕೊಟ್ಟು ಇನ್ನೊಂದು ಕಡೆ ವ್ಯಾಪಾರ ಮಾಡಬೇಡಿ ಎಂದು ಹೇಳುವುದು ಸರಿಯಲ್ಲ, ಈ ರೀತಿ ಪ್ರತಿಭಟನೆ ಮಾಡಿ ಬ್ಲಾಕ್ ಮೇಲ್ ಮಾಡುವುದು ನಡೆಯೋದಿಲ್ಲ. ಬೀದಿ ಬದಿ ವ್ಯಾಪಾರಸ್ಥರು ಹಾಗೂ ನಗರಸಭೆ ಸದಸ್ಯರು ಒಳಗೊಂಡ ಸಭೆ ಕರೆದು ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕೆಂದು ನಗರಸಭೆ ಸದಸ್ಯ ಟಿ. ರಾಜಶೇಖರ್ ಸಲಹೆ ನೀಡಿದರು. ಇದಕ್ಕೆ ಇತರೆ ಸದಸ್ಯರು ಒಪ್ಪಿಗೆ ಸೂಚಿಸಿದರು.ಹೈ ಡ್ರಾಮಾಚಿಕ್ಕಮಗಳೂರು ನಗರಸಭೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಮಾತ್ರ ಪ್ರತ್ಯೇಕ ಕೊಠಡಿ ಇದೆ. ಇನ್ನುಳಿದಂತೆ ಸದಸ್ಯರು ಕಚೇರಿ ಹೊರ ಭಾಗದಲ್ಲಿ ನಿಲ್ಲುವ ಹಾಗೂ ಓಡಾಡುವ ಸ್ಥಿತಿ ಇದೆ. ಹಾಗಾಗಿ ಸದಸ್ಯರಿಗೆ ಕುಳಿತುಕೊಳ್ಳಲು ಪ್ರತ್ಯೇಕ ಕೊಠಡಿ ತೆರೆಯಲು ಹಿಂದಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.
ಈ ವಿಷಯವನ್ನು ಇಂದಿನ ಸಭೆಯಲ್ಲಿ ಪುನರುಚ್ಚರಿಸಿದ ಜೆಡಿಎಸ್ ನಗರಸಭೆ ಸದಸ್ಯ ಎ.ಸಿ. ಕುಮಾರ್‌ಗೌಡ, ಸದಸ್ಯರಿಗೆ ಪ್ರತ್ಯೇಕ ಕೊಠಡಿ ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶ ಇದೀಯಾ, ನನಗೆ ಗೊತ್ತಿರುವ ಮಾಹಿತಿ ಪ್ರಕಾರ ಇಲ್ಲ ಎಂದು ಹೇಳುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಏರು ಧ್ವನಿಯಲ್ಲಿ ಮಾತನಾಡಿದರು.ನಗರಸಭೆ ಅಧ್ಯಕ್ಷರು ನಿಮ್ಮ ಪಕ್ಷದವರು, ನೀವು ಬಂದರೆ ಅವರ ಕೊಠಡಿಯಲ್ಲಿ ಕುಳಿತುಕೊಳ್ಳುತ್ತೀರಾ, ನಾವೆಲ್ಲಿ ಕುಳಿತು ಕೊಳ್ಳಬೇಕು. ಹಿಂದಿನ ಸಭೆಯಲ್ಲಿ ಬಿಜೆಪಿಯವರು ಅಧ್ಯಕ್ಷರಾಗಿದ್ದಾಗ ಒಪ್ಪಿಗೆ ಸೂಚಿಸಿ, ಇದೀಗ ಬೇರೆ ಮಾತನಾಡಿದರೆ ಹೇಗೆಂದು ಪ್ರಶ್ನಿಸಿದರು. ಹೀಗೆ ಮಾತಿಗೆ ಮಾತು ಬೆಳೆದು ಕಾಂಗ್ರೆಸ್‌ನ ನಗರಸಭೆ ಸದಸ್ಯರು ಸಭಾ ತ್ಯಾಗ ಮಾಡಿದರು. ಸಭಾಂಗಣದ ಹೊರಗೆ ನಿಂತು ಅಧ್ಯಕ್ಷರ ವಿರುದ್ಧ ಘೋಷಣೆ ಹಾಕಿದರು. ಬಳಿಕ ಮಧ್ಯ ಪ್ರವೇಶ ಮಾಡಿದ ಮುನೀರ್ ತಮ್ಮ ಪಕ್ಷದ ಸದಸ್ಯರ ಮನವೊಲಿಸಿ ಸಭೆಗೆ ಕರೆದುಕೊಂಡು ಬಂದರು.
ಮತ್ತೆ ಸಭೆ ಮುಂದುವರಿಯುತ್ತಿದ್ದಂತೆ ಟಿ. ರಾಜಶೇಖರ್ ಮಾತನಾಡಿ, ಅಧ್ಯಕ್ಷರ ವಿರುದ್ಧ ಘೋಷಣೆ ಹಾಕುವುದು ಸರಿಯಲ್ಲ. ಎಲ್ಲಾ ಸದಸ್ಯರ ಹಿತದೃಷ್ಠಿಯಿಂದ ಪ್ರತ್ಯೇಕ ಕೊಠಡಿ ಅವಶ್ಯಕತೆ ಇದೆ. ಕಡಿಮೆ ಖರ್ಚಿನಲ್ಲಿ ಸೂಕ್ತ ಜಾಗದಲ್ಲಿ ಈ ವ್ಯವಸ್ಥೆ ಆಗಬೇಕೆಂದು ಸಲಹೆ ನೀಡಿದರು.--- ಬಾಕ್ಸ್ --ಬೀದಿ ನಾಯಿಗಳಿಗೆ ಶಸ್ತ್ರ ಚಿಕಿತ್ಸೆಚಿಕ್ಕಮಗಳೂರು ನಗರದಲ್ಲಿ ಬೀದಿ ನಾಯಿಗಳ ಹಾವಳಿ ವಿಷಯ ಸಭೆಯಲ್ಲಿ ಚರ್ಚೆಗೆ ಬರುತ್ತಿದ್ದಂತೆ ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಹೇಮಂತ್ ಮಾತನಾಡಿ, ಬೀದಿ ನಾಯಿಗಳನ್ನು ಸಾಯಿಸಲು ಅವಕಾಸ ಇಲ್ಲ, ಬೇರೆಡೆಗೆ ಸ್ಥಳಾಂತರ ಮಾಡುವುದು ತಪ್ಪು. ಸಂತನಾ ಹರಣ ಚಿಕಿತ್ಸೆ ನೀಡಲು ಮಾತ್ರ ಅವಕಾಶ ಇದೆ ಎಂದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಪೌರಾಯುಕ್ತ ಬಿ.ಸಿ. ಬಸವರಾಜ್ ಮಾತನಾಡಿ, ಬೀದಿ ನಾಯಿಗಳಿಗೆ ಶಸ್ತ್ರ ಚಿಕಿತ್ಸೆ ಸಂಬಂಧ 3 ಬಾರಿ ಟೆಂಡರ್ ಕರೆಯಾಗಿತ್ತು. ಯಾರೂ ಕೂಡ ಟೆಂಡರ್ ಹಾಕಿರಲಿಲ್ಲ. ಈ ಬಾರಿ ಮತ್ತೆ ಟೆಂಡರ್ ಕರೆಯ ಲಾಗಿದೆ. ಸಂಬಂಧಿತ ಸಂಸ್ಥೆಯನ್ನು ಸಂಪರ್ಕಿಸಿ ಮಾತನಾಡಿದ್ದೇವೆ. ಈ ಹಿಂದೆ 2 ಸಾವಿರ ನಾಯಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿದ್ದೇವೆ. ಇದಕ್ಕಾಗಿ ಈ ಬಾರಿ ₹35 ಲಕ್ಷ ರು. ಮೀಸಲಿಟ್ಟಿದ್ದೇವೆ ಎಂದು ಹೇಳಿದರು.----
4 ಕೆಸಿಕೆಎಂ 2ಚಿಕ್ಕಮಗಳೂರಿನ ನಗರಸಭೆಯಲ್ಲಿ ಸೋಮವಾರ ನಡೆದ ಸಾಮಾನ್ಯಸಭೆಯಲ್ಲಿ ಕಾಂಗ್ರೆಸ್ ನಗರಸಭೆ ಸದಸ್ಯರು ಪ್ರತಿಭಟನೆ ನಡೆಸಿದರು.