ಹುಬ್ಬಳ್ಳಿ: ಜನರಲ್ಲಿ ದೇಶಾಭಿಮಾನ ಮೂಡಿಸುವ ಉದ್ದೇಶದಿಂದ ಬಿಜೆಪಿಯಿಂದ ಆಯೋಜಿಸಲಾಗಿರುವ ಹರ್ ಘರ್ ತಿರಂಗಾಕ್ಕೆ ಧಾರವಾಡದಲ್ಲೂ ಚಾಲನೆ ನೀಡಲಾಗಿದೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಲಕ್ಷಕ್ಕೂ ಅಧಿಕ ಧ್ವಜಗಳನ್ನು ಮನೆಮನೆಗೂ ವಿತರಿಸಲಾಗುತ್ತಿದೆ.
ಆ. 13ರಿಂದ15ರ ವರೆಗೆ: ಆ. 13ರಿಂದ 15ರ ವರೆಗೆ ಮನೆ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಾಡಿಸುವ ಸಂಕಲ್ಪವನ್ನು ಬಿಜೆಪಿ ತೊಟ್ಟಿದ್ದು, ಈಗಾಗಲೇ ಹರ್ ಘರ್ ತಿರಂಗಾ ಯಶಸ್ಸಿಗಾಗಿ ಬಿಜೆಪಿಯಿಂದ ಕಳೆದ 6 ಮತ್ತು 7ರಂದು ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಸಭೆ ಮಾಡಿ ಒಂದು ವಾರದಿಂದಲೇ ಅಗತ್ಯ ಸಿದ್ಧತೆ ಹಾಗೂ ಪ್ರಚಾರ, ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದೆ.
ನರಗುಂದದಲ್ಲಿ ಚಾಲನೆ: ಆ. 9 ರಂದು ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಅಖಂಡ ಧಾರವಾಡ ಜಿಲ್ಲೆಯ ಹರ್ ಘರ್ ತಿರಂಗಾಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಚಾಲನೆ ನೀಡಿದರು. ಬಳಿಕ ವಿವಿಧೆಡೆ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.50 ಸಾವಿರ ಧ್ವಜ ವಿತರಣೆ: ವಾರದ ಹಿಂದೆಯೇ ಕೇಂದ್ರ ಸಚಿವ ಜೋಶಿ ಅವರು ಧಾರವಾಡ ಲೋಕಸಭಾ ಮತಕ್ಷೇತ್ರದಲ್ಲಿ ಮನೆಮನೆಗೂ ಧ್ವಜ ಹಂಚುವುದಕ್ಕಾಗಿ 50 ಸಾವಿರ ಧ್ವಜ ವಿತರಿಸಿದ್ದಾರೆ. ಪ್ರತಿ ಬೂತ್‌ಗೆ 50 ಧ್ವಜಗಳಂತೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಟ 20 ಸಾವಿರ ಮನೆಗಳ ಮೇಲೆ ತಿರಂಗಾ ಧ್ವಜ ಹಾರಿಸುವ ಸಂಕಲ್ಪ ತೊಡಲಾಗಿದ್ದು, ಕಾರ್ಯಕರ್ತರು ಮನೆ ಮನೆಗಳಿಗೆ ತೆರಳಿ ಧ್ವಜ ವಿತರಿಸುತ್ತಿದ್ದಾರೆ.
2022ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಾಚರಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಹರ್ ಘರ್ ತಿರಂಗಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಆಗಿನಿಂದ ಪ್ರತಿವರ್ಷವೂ ಹರ್ ಘರ್ ತಿರಂಗಾ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಈ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.