ಪ್ರಿಯಕರನ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ

KannadaprabhaNewsNetwork |  
Published : Nov 08, 2025, 01:30 AM IST
7ಎಚ್ಎಸ್ಎನ್18 : ಆತ್ಮಹತ್ಯೆ ಮಾಡಿಕೊಂಡ ಪ್ರಿಯಾಂಕ. | Kannada Prabha

ಸಾರಾಂಶ

ಗ್ರಾಮಸ್ಥರು ಸಹ ಆರೋಪಿಯ ವಿರುದ್ಧ ಕಿಡಿಕಾರಿದ್ದಾರೆ. ಸುಮಂತ್ ವಿರುದ್ಧ ಹಿಂದೆಯೂ ಹೆಣ್ಣುಮಕ್ಕಳಿಗೆ ಕಿರುಕುಳ ನೀಡಿದ ಬಗ್ಗೆ ದೂರುಗಳು ಬಂದಿದ್ದರೂ ಕ್ರಮ ಕೈಗೊಳ್ಳಲಾಗಿಲ್ಲವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ಪ್ರೀತಿಯ ಹೆಸರಿನಲ್ಲಿ ಪ್ರಿಯಕರನಿಂದ ಆದ ಕಿರುಕುಳವನ್ನು ಸಹಿಸಿಕೊಳ್ಳಲಾಗದೆ ಯುವತಿ ಒಬ್ಬಳು ತನ್ನ ಜೀವವನ್ನೇ ತ್ಯಜಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತಾಲೂಕಿನ ಜಾಗರವಳ್ಳಿ ಗ್ರಾಮದ ಜಯರಾಮ ನಾಯಕ್ ಹಾಗೂ ಶೋಭಾ ದಂಪತಿ ಪುತ್ರಿ ಪ್ರಿಯಾಂಕ (21) ಅವರು ಕಳೆದ ಅಕ್ಟೋಬರ್ 30 ರಂದು ಗುರುವಾರ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತಳ ಪೋಷಕರು ನೀಡಿದ ಮಾಹಿತಿಯ ಪ್ರಕಾರ, ಆಲೂರು ತಾಲೂಕಿನ ಕಲ್ಕೆರೆ ಪೇಟೆಯ ಸುಮಂತ್ (20) ಎಂಬ ಯುವಕ ಈ ಘಟನೆಯಲ್ಲಿ ಪ್ರಮುಖ ಆರೋಪಿ. ಕಳೆದ ಕೆಲ ವರ್ಷಗಳಿಂದ ಇವರಿಬ್ಬರ ಮಧ್ಯೆ ಪ್ರೀತಿ ಬೆಳೆದಿದ್ದು, ಇಬ್ಬರೂ ಕೆಲಸ ನಿಮಿತ್ತ ಬೆಂಗಳೂರಿನ ನೆಲಗದರಹಳ್ಳಿಯಲ್ಲಿ ವಾಸಿಸುತ್ತಿದ್ದರು. ಆದರೆ, ಪ್ರಿಯಕರನ ವರ್ತನೆ ನಿಧಾನವಾಗಿ ಕಿರುಕುಳದ ರೂಪ ತಾಳಿತ್ತು. ಕುಟುಂಬದವರು ಹೇಳುವ ಪ್ರಕಾರ, ಸುಮಂತ್ ತನ್ನ ಪ್ರೇಯಸಿಯ ಮೇಲೆ ಅನಾವಶ್ಯಕ ಅನುಮಾನಪಡುತ್ತಿದ್ದ. ಆಗಾಗ ಜಗಳವಾಡುತ್ತಿದ್ದ. ಹಲವಾರು ಬಾರಿ ಬೈಗುಳ, ಬೆದರಿಕೆ ನೀಡುತ್ತಿದ್ದನೆಂದು ತಾಯಿ ಶೋಭಾ ತಿಳಿಸಿದ್ದಾರೆ.

ಒಂದು ಹಂತದಲ್ಲಿ ಸುಮಂತ್, ನೀನು ಬದುಕಬಾರದು, ಸಾಯಬೇಕು ಎಂದು ಕಿರುಕುಳ ನೀಡಿದ್ದನೆಂದು ಆರೋಪಿಸಲಾಗಿದೆ. ಈ ಮಾತುಗಳಿಂದ ತೀವ್ರ ನೊಂದ ಪ್ರಿಯಾಂಕ, ಕಳೆದ ಅಕ್ಟೋಬರ್ 30ರ ಗುರುವಾರ ರಾತ್ರಿ ಬೆಂಗಳೂರಿನ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಘಟನೆ ನಡೆದು ವಾರವಾದರೂ ಆರೋಪಿ ಸುಮಂತ್ ಇನ್ನೂ ಬಂಧನವಾಗಿಲ್ಲವೆಂದು ಕುಟುಂಬದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೃತಳ ತಂದೆ ಜಯರಾಮ ನಾಯಕ್ ಕಣ್ಣೀರಿಟ್ಟು, ನಮ್ಮ ಮಗಳಂಥ ಪರಿಸ್ಥಿತಿ ಬೇರೆ ಹೆಣ್ಣುಮಕ್ಕಳಿಗೆ ಬಾರದಿರಲಿ. ಆತ ಪ್ರೀತಿಯ ಹೆಸರಿನಲ್ಲಿ ಕಿರುಕುಳ ನೀಡಿ ನಮ್ಮ ಮಗುವಿನ ಪ್ರಾಣ ಕಿತ್ತುಕೊಂಡಿದ್ದಾನೆ. ಆದರೆ ಇವತ್ತು ಊರಿನಲ್ಲಿ ರಾಜಾರೋಷವಾಗಿ ತಿರುಗುತ್ತಿದ್ದಾನೆ. ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಗ್ರಾಮಸ್ಥರು ಸಹ ಆರೋಪಿಯ ವಿರುದ್ಧ ಕಿಡಿಕಾರಿದ್ದಾರೆ. ಸುಮಂತ್ ವಿರುದ್ಧ ಹಿಂದೆಯೂ ಹೆಣ್ಣುಮಕ್ಕಳಿಗೆ ಕಿರುಕುಳ ನೀಡಿದ ಬಗ್ಗೆ ದೂರುಗಳು ಬಂದಿದ್ದರೂ ಕ್ರಮ ಕೈಗೊಳ್ಳಲಾಗಿಲ್ಲವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಿಯಾಂಕ ಬುದ್ಧಿವಂತ, ಸ್ವಾಭಿಮಾನಿ ಹುಡುಗಿ ಎಂದು ಪರಿಚಯಸ್ಥರು ಹೇಳಿದ್ದು, ತಾನು ಜೀವನ ಕಟ್ಟಿಕೊಳ್ಳಬೇಕೆಂಬ ಆಸೆಯಿಂದ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಹೋಗಿದ್ದಳು. ಆದರೆ ಕಿರುಕುಳಕ್ಕೆ ಬಲಿಯಾಗಿದ್ದಾಳೆ ಎಂದು ಕಣ್ಣೀರಿಟ್ಟಿದ್ದಾರೆ.

PREV

Recommended Stories

ಬ್ರಾಹ್ಮಣ ಸಮುದಾಯಕ್ಕೆ ಸೌಲಭ್ಯ ನೀಡಲು ಬದ್ಧ : ಸಚಿವ ದಿನೇಶ್‌ ಗುಂಡೂರಾವ್‌
ಬೆಂಗಳೂರು ನಗರದ 6 ಆರ್‌ಟಿಒ ಕಚೇರಿ ಮೇಲೆ ದಾಳಿ: ಹಲವು ಅಕ್ರಮ ಪತ್ತೆ