ಕನ್ನಡಪ್ರಭ ವಾರ್ತೆ ಮಂಡ್ಯ
ಕೃಷ್ಣರಾಜಸಾಗರ ಅಣೆಕಟ್ಟೆಯ ಹಿನ್ನೀರಿನ ಪ್ರದೇಶಗಳಲ್ಲಿ ಭೂ-ಒತ್ತುವರಿ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸರ್ವೇ ಮಾಡಿ ಈ ಕೂಡಲೇ ಒತ್ತುವರಿ ತೆರವುಗೊಳಿಸಿ, ಗಡಿ ಕಲ್ಲುಗಳನ್ನು ನೆಟ್ಟು ವರದಿ ನೀಡುವಂತೆ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಮಂಡ್ಯ ಹಾಗೂ ಮೈಸೂರು ಜಿಲ್ಲೆಯ ಜಿಲ್ಲಾಕಾರಿಗಳು ಮತ್ತು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಆದೇಶಿಸಿದ್ದಾರೆ.ಕೆಆರ್‌ಎಸ್ ಹಿನ್ನೀರಿನ ಪ್ರದೇಶದಲ್ಲಿ ಐಷಾರಾಮಿ ರೆಸಾರ್ಟ್‌ಗಳ ನಿರ್ಮಾಣ ಹಾಗೂ ಭೂ ಒತ್ತುವರಿಯಿಂದಾಗಿ ಜಲಾಶಯದ ನೀರು ಸಂಗ್ರಹಣಾ ಸಾಮರ್ಥ್ಯ ಕುಂಠಿತಗೊಳ್ಳುತ್ತಿದೆ. ಹೀಗಾಗಿ ಭೂ ಒತ್ತುವರಿ ತೆರವುಗೊಳಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಡಿಸಿಎಂ ಡಿಕೆಶಿ ಅವರನ್ನು ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ ಹಾಗೂ ದಿನೇಶ್ ಗೂಳಿಗೌಡರು ಒತ್ತಾಯಿಸಿದ್ದರು.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ, ಪಾಂಡವಪುರ, ಕೆ.ಆರ್.ಪೇಟೆ ತಾಲೂಕುಗಳಲ್ಲಿ ಮತ್ತು ಮೈಸೂರು ಜಿಲ್ಲೆಯ ಕೆ.ಆರ್.ನಗರ, ಮೈಸೂರು ಮತ್ತು ಹುಣಸೂರು ತಾಲೂಕಿನಲ್ಲಿ ಜಲಾಶಯದ ಹಿನ್ನೀರಿನ ಅಂಚಿನಲ್ಲಿರುವ ಭೂ ಮಾಲೀಕರು ಭೂ ಒತ್ತುವರಿ ಮಾಡುತ್ತಿರುವುದು ಮತ್ತು ಐಷಾರಾಮಿ ರೆಸಾರ್ಟ್‌ಗಳ ನಿರ್ಮಾಣ ಮಾಡುತ್ತಿದ್ದಾರೆ.ಹಿನ್ನೀರಿನ ಪ್ರದೇಶದಲ್ಲಿ ಒತ್ತುವರಿ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಕೃಷ್ಣರಾಜಸಾಗರ ಜಲಾಶಯದ ಸಂಗ್ರಹಣಾ ಸಾಮರ್ಥ್ಯ ಕುಂಠಿತಗೊಳ್ಳುತ್ತಿದೆ. ಇದರಿಂದಾಗಿ ನಾಲಾ ಕೊನೆ ಭಾಗದ ಮಳವಳ್ಳಿ, ಮದ್ದೂರು ಭಾಗದ ಸಾವಿರಾರು ಅಚ್ಚುಕಟ್ಟು ಪ್ರದೇಶದ ರೈತರಿಗೆ ವ್ಯವಸಾಯಕ್ಕೆ ನೀರೊದಗಿಸಲು ಹಾಗೂ ಕುಡಿಯುವ ನೀರಿಗಾಗಿ ತೊಂದರೆ ಉಂಟಾಗುವ ಸಂಭವವಿರುತ್ತದೆ.
ಕೃಷ್ಣರಾಜಸಾಗರ ಜಲಾಶಯದ ಹಿನ್ನೀರಿನ ಪ್ರದೇಶವು 26,640 ಎಕರೆಗಳಿದ್ದು, ಜಲಾಶಯದಿಂದ ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳ ಸುಮಾರು 2.76 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ನೀಡಲಾಗುತ್ತಿದೆ.ಮೈಸೂರು ನಗರಕ್ಕೆ 1.579 ಟಿಎಂಸಿ ಹಾಗೂ ಬೆಂಗಳೂರು, ಇನ್ನಿತರ ನಗರ ಪಟ್ಟಣಗಳಿಗೆ ಕುಡಿಯುವ ನೀರಿಗಾಗಿ ಉಪಯೋಗ, ವಿದ್ಯುತ್ ಉತ್ಪಾದನ ಘಟಕಗಳಿಗೆ ನೀರನ್ನು ಬಳಕೆ ಮಾಡಲಾಗುತ್ತದೆ. ಆದರೆ, ಹಿನ್ನೀರಿನ ಪ್ರದೇಶದಲ್ಲಿ ಭೂ ಒತ್ತುವರಿಯಿಂದಾಗಿ ನೀರಿನ ಸಂಗ್ರಹ ಸಾಮರ್ಥ್ಯ ಕುಂಠಿತವಾಗಿ ನೀರಿನ ಸಮಸ್ಯೆ ಉಲ್ಬಣಿಸಲಿದೆ.
ಹೀಗಾಗಿ ಜಲಾಶಯದ 130 ಅಡಿಗಳ ನಕ್ಷೆಗಳನ್ನು ನೀರಾವರಿ ಇಲಾಖೆಯಿಂದ ಪಡೆದು ಈ ವಿಷಯದ ಕುರಿತಂತೆ ಸಂಬಂಧಪಟ್ಟ ಜಿಲ್ಲಾಕಾರಿಗಳಿಗೆ, ಕಂದಾಯ ಇಲಾಖೆ, ಭೂ ದಾಖಾಲಾತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಮತ್ತು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ವತಿಯಿಂದ ಸರ್ವೆ ಕಾರ್ಯ ನಡೆಸುವಂತೆ ಸೂಚಿಸಲಾಗಿದೆ.ಒಂದು ವೇಳೆ ಒತ್ತುವರಿ ಇದ್ದಲ್ಲಿ ತೆರವುಗೊಳಿಸಲು, ಅಣೆಕಟ್ಟೆಯ 130 ಅಡಿಯ ಕಾಂಟೋರ್ ಗಡಿಭಾಗಕ್ಕೆ ಶಾಶ್ವತವಾಗಿ ಗಡಿ ಕಲ್ಲುಗಳನ್ನು, ಸೂಚನಾ ಫಲಕ ಅಳವಡಿಸಲು ಸೂಕ್ತ ನಿರ್ದೇಶನ ನೀಡಬೇಕು. ಹಿನ್ನೀರಿನ ಪ್ರದೇಶದಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ಬಗ್ಗೆ ಕಾವಲು ವ್ಯವಸ್ಥೆ ನೋಡಲು ಪೊಲೀಸ್ ಇಲಾಖೆ ಮತ್ತು ಪರಿಸರ ಇಲಾಖೆಗೆ ನಿರ್ದೇಶನ ನೀಡಬೇಕೆಂದು ಪತ್ರದಲ್ಲಿ ಉಲ್ಲೇಖಿಸಿದ್ದರು.
ಶಾಸಕರು ಬರೆದಿರುವ ಪತ್ರವನ್ನು ಗಂಭೀರವಾಗಿ ಪರಿಗಣಿಸಿದ ಡಿ.ಕೆ.ಶಿವಕುಮಾರ್, ಕೆಆರ್‌ಎಸ್ ಹಿನ್ನೀರಿನಲ್ಲಿ ಭೂ ಒತ್ತುವರಿ ತೆರವಿಗೆ ಆದೇಶಿಸಿದ್ದಾರೆ. ಇದರಿಂದ ಹಿನ್ನೀರಿನ ಪ್ರದೇಶದಲ್ಲಿ ತಲೆ ಎತ್ತಿರುವ ಹಾಗೂ ಎತ್ತಲಿರುವ ಅಕ್ರಮ ರೆಸಾರ್ಟ್ ಗಳಿಗೆ ಕಡಿವಾಣ ಬಿದ್ದಂತಾಗಲಿದೆ. ಜೊತೆಗೆ ನೀರು ಸಂಗ್ರಹಣ ಸಾಮರ್ಥ್ಯ ಹೆಚ್ಚಾಗಿ ನಾಲಾ ಕೊನೆ ಭಾಗಕ್ಕೂ ನೀರು ಹರಿಯುವುದರಿಂದ ರೈತರ ಸಮಸ್ಯೆ ಕೂಡ ಬಗೆಹರಿಯಲಿದೆ.ಕೆಆರ್‌ಎಸ್ ಹಿನ್ನೀರಿನ ಪ್ರದೇಶದಲ್ಲಿ ಭೂ ಒತ್ತುವರಿ ಆಗುತ್ತಿರುವುದು ಕಂಡುಬಂದಿದೆ. ಭೂ ಒತ್ತುವರಿ ತೆರವಿನಿಂದ ಹಿನ್ನೀರಿನ ಪ್ರದೇಶದಲ್ಲಿ ನೀರಿನ ಸಂಗ್ರಹಣಾ ಸಾಮರ್ಥ್ಯ ಹೆಚ್ಚಾಗಿ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಸಹಕಾರಿಯಾಗಲಿದೆ. ಭೂ ಒತ್ತುವರಿ ತೆರವಿಗೆ ಉಪಮುಖ್ಯಮಂತ್ರಿಗಳು ಆದೇಶಿಸಿರುವುದು ನಿಜಕ್ಕೂ ಶ್ಲಾಘನೀಯ.- ರಮೇಶ್ ಬಂಡಿಸಿದ್ದೇಗೌಡ, ಶಾಸಕರು
ಕೆಆರ್‌ಎಸ್ ಜಲಾಶಯದ ನೀರನ್ನು ಬೆಂಗಳೂರು ಸೇರಿದಂತೆ ಮೈಸೂರು ಭಾಗದ ಜನತೆಗೆ ಕುಡಿಯುವ ನೀರಿನ ಜೊತೆಗೆ ಕೃಷಿ, ಕೈಗಾರಿಕಾ ಚಟುವಟಿಕೆಗಳಿಗೆ ಬಳಕೆ ಮಾಡಲಾಗುತ್ತಿದೆ. ಹಿನ್ನೀರಿನ ಪ್ರದೇಶದಲ್ಲಿ ಭೂ ಒತ್ತುವರಿಯಿಂದ ನೀರಿನ ಸಂಗ್ರಹ ಕಡಿಮೆಯಾಗಿದೆ. ಇದನ್ನು ತೆರವುಗೊಳಿಸಿ ಅಕ್ರಮ ಚಟುವಟಿಕೆಗಳಿಗೂ ಕಡಿವಾಣ ಹಾಕಬೇಕು. ಈ ಸಂಬಂಧ ಸಿಡಿಎಂ ಡಿ.ಕೆ.ಶಿವಕುಮಾರ್ ಅವರು ಹೊರಡಿಸಿರುವ ಆದೇಶದಿಂದ ರೈತರಿಗೆ ಅನುಕೂಲವಾಗಲಿದೆ.- ದಿನೇಶ್ ಗೂಳಿಗೌಡ, ಶಾಸಕರು