ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
೧೯೮೦ರಲ್ಲಿ ದೇವೇಗೌಡರು ಸಾಕಷ್ಟು ಶ್ರಮವಹಿಸಿ, ದೇಣಿಗೆ ಸಂಗ್ರಹಿಸಿ ಈ ಕಾಲೇಜನ್ನು ಪ್ರಾರಂಭಿಸಿದ್ದರು. ನಂತರದ ವರ್ಷಗಳಲ್ಲಿ ಅಭಿವೃದ್ಧಿಪಡಿಸಿ, ಇಂದು ಉತ್ತಮ ಸ್ಥಿತಿಗೆ ತರಲಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಒತ್ತು ನೀಡಲಾಗಿದ್ದು, ಪೋಷಕರು ಕಂಡ ಕನಸನ್ನು ಸಾಕಾರಗೊಳಿಸಲು ಕಾಲೇಜಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ ಎಂದು ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ೨೦೨೫- ೨೬ನೇ ಸಾಲಿನ ಸಾಂಸ್ಕೃತಿಕ ವೇದಿಕೆ, ಕ್ರೀಡೆ, ಎನ್.ಎಸ್.ಎಸ್. ಎನ್.ಸಿ.ಸಿ. ಸೈಟ್ಸ್ ಮತ್ತು ಗೈಡ್ಸ್, ಯುವ ರೆಡ್ ಕ್ರಾಸ್ ಚಟುವಟಿಕೆಗಳ ಉದ್ಘಾಟನೆ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಈ ಕಾಲೇಜಿನಲ್ಲಿ ಶೈಕ್ಷಣಿಕ ಪ್ರಗತಿಗೆ ಅಗತ್ಯವಾದ ಹೊಸ ಕೋರ್ಸ್‌ಗಳನ್ನು ಕಲ್ಪಿಸಿಕೊಡಲು ಕ್ರಮ ಕೈಗೊಳ್ಳುತ್ತೇನೆ. ಕಾಲ ಹೀಗೇ ಇರಲ್ಲ, ಮತ್ತೆ ನಮಗೆ ಅವಕಾಶ ಸಿಕ್ಕೇ ಸಿಗುತ್ತದೆ. ಆಗ ಮತ್ತೆ ನಮ್ಮ ತಾಲೂಕನ್ನು ಇನ್ನೂ ಹೆಚ್ಚು ಅಭಿವೃದ್ಧಿ ಮಾಡುತ್ತೇನೆ ಎಂದರು.
ಹಾಸನ ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ಎಂ.ಬಿ.ಇರ್ಷಾದ್ ಮಾತನಾಡಿ, ಸಂಸ್ಕಾರ ಇಲ್ಲದ ವಿದ್ಯೆ ವಿದ್ಯೆಯೇ ಅಲ್ಲ. ಕೆಲವು ವಿದ್ಯಾರ್ಥಿಗಳು ಅಪ್ಪ- ಅಮ್ಮನ ಬಳಿ ಟೈಂ ಟೇಬಲ್ ಶುಲ್ಕ ಎಂದು ಪಡೆದು ಅಪ್ಪ- ಅಮ್ಮನಿಗೇ ಮೋಸ ಮಾಡಿದ್ದಾರೆ. ಇದಕ್ಕೆ ಸಂಸ್ಕಾರ ಎನ್ನುವುದಿಲ್ಲ. ನಾವು ಕಲಿಸುವ ಪಾಠಗಳಿಗೆ ಸಂಸ್ಕಾರವೇ ಇಲ್ಲವೇ. ನಾವೇನು ಕಲಿಸುತ್ತಿದ್ದೇವೆ ಎಂದು ನನಗೆ ನಾನೇ ಪ್ರಶ್ನಿಸಿಕೊಳ್ಳಬೇಕಾದ ಸ್ಥಿತಿ ಬಂದಿದೆ ಎಂದು ಬೇಸರದಿಂದ ನುಡಿದರು.ಪ್ರತಿಯೊಬ್ಬ ವಿದ್ಯಾರ್ಥಿಯೂ ವಿದ್ಯೆ ಜೊತೆಗೆ ಸಂಸ್ಕಾರ, ಕೌಶಲ್ಯ ಕಲಿತುಕೊಳ್ಳದಿದ್ದರೆ, ಉತ್ತಮ ಕೆಲಸ ಪಡೆದುಕೊಳ್ಳಲು ಸಾಧ್ಯವೇ ಇಲ್ಲ. ಯಾವುದೇ ಕಂಪನಿಗಳು ನಿಮ್ಮ ಅಂಕಪಟ್ಟಿಯನಷ್ಟೇ ನೋಡಿ ನಿಮಗೆ ಕೆಲಸ ಕೊಡಲ್ಲ, ಆದ್ದರಿಂದ ಕೌಶಲ್ಯ ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.
ನಾವು ನವೆಂಬರ್ ಪೂರ್ತಿ ಕನ್ನಡ ರಾಜ್ಯೋತ್ಸವ ಆಚರಿಸುತ್ತೇವೆ. ನಮ್ಮ ಕನ್ನಡದ ಮೇಲಿನ ಪ್ರೀತಿ ರಾಜ್ಯೋತ್ಸವಕ್ಕೆ ಮಾತ್ರ ಸೀಮಿತ ಆಗಿರುವುದರಿಂದ ನಮ್ಮ ಬೆಂಗಳೂರಿನ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಹೊರ ರಾಜ್ಯದವರು ವ್ಯಾಪಾರ ಮಾಡಿ ಕೋಟಿ, ಕೋಟಿ ಹಣ ಸಂಪಾದಿಸುತ್ತಾ ಬೆಳೆಯುತ್ತಿದ್ದಾರೆ. ನಮ್ಮ ಕನ್ನಡಿಗರು ನಾಡಿನ ರಾಜಧಾನಿ ಬೆಂಗಳೂರಲ್ಲಿ ಬಡವರಾಗುತ್ತಿದ್ದಾರೆ. ಆದ್ದರಿಂದ ಕನ್ನಡಿಗರು ಆರ್ಥಿಕವಾಗಿ ಸದೃಢರಾಗಲು ನಮ್ಮ ನಾಡನ್ನು ತಾಯಿಯಂತೆ ಪ್ರೀತಿಸಿ ಬೆಳೆಸಬೇಕು ಎಂದರು.ಎಚ್.ಬಿ.ವೆಂಕಟೇಶ್, ಎಚ್.ವಿ.ಸುರೇಶ್‌ಕುಮಾರ್, ಇತರರು ಮಾತನಾಡಿದರು. ಪ್ರಾಧ್ಯಾಪಕಿ ಲೋಲಾಕ್ಷಿ ಪ್ರಾಸ್ತವಿಕ ನುಡಿಗಳನ್ನಾಡಿ ಸ್ವಾಗತಿಸಿದರು, ವಿದ್ಯಾರ್ಥಿನಿಯರು ಹಾಡಿದ ನಾಡಗೀತೆ, ರೈತ ಗೀತೆ ಅತ್ಯುತ್ತಮವಾಗಿ ಮೂಡಿ ಬಂದಿತು.
ಪ್ರಾಂಶುಪಾಲ ಎಸ್.ಆರ್.ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕಸಾಪ ಅಧ್ಯಕ್ಷ ಆರ್.ಬಿ.ಪುಟ್ಟೇಗೌಡ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಪಿ.ಎಚ್.ಈ.ವೆಂಕಟೇಶ್, ಅಧೀಕ್ಷಕ ಜನಾರ್ಧನ್, ಪ್ರಾಧ್ಯಾಪಕರಾದ ಬರ್ನಾಡ್ ಎಫ್., ಮಧುಸೂಧನ್ ಡಿ.ಎನ್., ಡಾ. ಉದಯಕುಮಾರ್ ಎಂ., ಪೂರ್ಣಿಮ ಎಚ್.ವಿ., ಡಾ.ಸಿದ್ಧರಾಮು ಆರ್., ಇತರರು ಉಪಸ್ಥಿತರಿದ್ದರು.