ಮೂಲ ಸೌಕರ್ಯವಿಲ್ಲದೆ ಬೇಸತ್ತು ಭತ್ತದ ಸಸಿ ನೆಟ್ಟು ಪ್ರತಿಭಟನೆ

KannadaprabhaNewsNetwork |  
Published : Jul 19, 2025, 01:00 AM IST
18ಎಚ್ಎಸ್ಎನ್17 :  | Kannada Prabha

ಸಾರಾಂಶ

ವರ್ಷಗಳಿಂದ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳು ಇಲ್ಲದೇ ಸ್ಥಳೀಯರು ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಭಾಗದ ಅಭಿವೃದ್ಧಿಗೆ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು. ರಸ್ತೆ ನಿರ್ಮಾಣದ ಸಮಯದಲ್ಲಿ ಹಾಕಲಾದ ಕಬ್ಬಿಣದ ರಾಡುಗಳು ಬಿರುಕು ಬಿಟ್ಟು ಹೊರಬಂದಿದ್ದು, ವಾಹನ ಸವಾರರಿಗೆ ತೀವ್ರ ಅನಾನೂಕೂಲತೆ ಉಂಟಾಗಿದೆ. ಪ್ರತಿದಿನವೂ ಬೈಕ್‌ಗಳು ಬಿದ್ದು ಕೈಗಾಲುಗಳಿಗೆ ಗಾಯವಾಗುತ್ತಿದೆ ಎಂಬ ಆಕ್ರೋಶದಿಂದ ಪಟ್ಟಣದ 23ನೇ ವಾರ್ಡ್ ನಿವಾಸಿಗಳು ರಸ್ತೆಯ ಮಧ್ಯೆ ಭತ್ತದ ಸಸಿ ಹಾಗೂ ಕಂಬಿಗಳನ್ನು ನೆಟ್ಟು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದ ಘಟನೆ ಶನಿವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಕಳೆದ ಎರಡು ದಶಕಗಳಿಂದ ಸಹಜವಾದ ಮೂಲಭೂತ ಸೌಕರ್ಯಗಳು ಒದಗಿಸಿಲ್ಲ ಎಂಬ ಆಕ್ರೋಶದಿಂದ ಪಟ್ಟಣದ 23ನೇ ವಾರ್ಡ್ ನಿವಾಸಿಗಳು ರಸ್ತೆಯ ಮಧ್ಯೆ ಭತ್ತದ ಸಸಿ ಹಾಗೂ ಕಂಬಿಗಳನ್ನು ನೆಟ್ಟು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದ ಘಟನೆ ಶನಿವಾರ ನಡೆದಿದೆ.

ವರ್ಷಗಳಿಂದ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳು ಇಲ್ಲದೇ ಸ್ಥಳೀಯರು ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಭಾಗದ ಅಭಿವೃದ್ಧಿಗೆ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು. ರಸ್ತೆ ನಿರ್ಮಾಣದ ಸಮಯದಲ್ಲಿ ಹಾಕಲಾದ ಕಬ್ಬಿಣದ ರಾಡುಗಳು ಬಿರುಕು ಬಿಟ್ಟು ಹೊರಬಂದಿದ್ದು, ವಾಹನ ಸವಾರರಿಗೆ ತೀವ್ರ ಅನಾನೂಕೂಲತೆ ಉಂಟಾಗಿದೆ. ಪ್ರತಿದಿನವೂ ಬೈಕ್‌ಗಳು ಬಿದ್ದು ಕೈಗಾಲುಗಳಿಗೆ ಗಾಯವಾಗುತ್ತಿದೆ. ಚರಂಡಿ ವ್ಯವಸ್ಥೆ ವೈಫಲ್ಯದಿಂದ ದುರ್ವಾಸನೆ ಪಸರಿಸುತ್ತಿದೆ. ಈ ಕುರಿತು ನಾವು ಹಲವು ಬಾರಿ ದೂರು ನೀಡಿದ್ದರೂ ಅಧಿಕಾರಿಗಳಿಂದ ಯಾವುದೇ ಕ್ರಮವಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಈ ಸಮಸ್ಯೆಗಳಿಗೆ ಮನವಿ ಮಾಡಿಕೊಂಡರೂ ಯಾವುದೇ ಸ್ಪಂದನೆ ದೊರೆತಿಲ್ಲದ ಕಾರಣ, ನಿವಾಸಿಗಳು ರಸ್ತೆ ಮಧ್ಯೆ ಭತ್ತದ ಸಸಿಗಳನ್ನು ನೆಟ್ಟು, ಕಂಬಿಗಳನ್ನು ನಿಲ್ಲಿಸಿ ಗಮನ ಸೆಳೆಯುವ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ತಕ್ಷಣ ಸಂಬಂಧಪಟ್ಟವರು ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಬೇಲೂರು–ಸಕಲೇಶಪುರ ರಾಜ್ಯ ಹೆದ್ದಾರಿಗೆ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಸ್ಥಳಕ್ಕೆ ಆಗಮಿಸಿದ ಪುರಸಭಾ ಎಂಜಿನಿಯರ್ ಸುಜಾತಾ ಮತ್ತು ಸಿಬ್ಬಂದಿಯಾದ ರೇವಣ್ಣ, ವರದರಾಜ್ ಅವರು ನಿವಾಸಿಗಳ ಅಹವಾಲು ಸ್ವೀಕರಿಸಿ, ಇಲ್ಲಿನ ನೈಜ ಪರಿಸ್ಥಿತಿಯನ್ನು ಮೇಲಧಿಕಾರಿಗಳಿಗೆ ವರದಿ ಮಾಡಲಾಗುವುದು. ತ್ವರಿತವಾಗಿ ರಸ್ತೆ, ಚರಂಡಿ ಮತ್ತು ಇತರ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆ ನೀಡಿದ ಮೇಲೆ ನಿವಾಸಿಗಳು ತಮ್ಮ ಪ್ರತಿಭಟನೆಯನ್ನು ಹಿಂಪಡೆದರು.

ಪ್ರತಿಭಟನೆಯಲ್ಲಿ ನಿವಾಸಿಗಳಾದ ಶಂಶು, ಮುತ್ತಲಿಬ್, ರವಿ, ವಾಜೀರ್, ಇಕ್ಬಾಲ್, ಕಲಂದರ್, ಡಿಸೋಜ, ರಜನಿ, ಪಾರ್ವತಿ ಸೇರಿದಂತೆ ಇತರರು ಭಾಗವಹಿಸಿದ್ದರು.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ