ತೀರ್ಥಹಳ್ಳಿ ಮಠದ ಪುನರ್ನವ ಪರ್ವ: ರಾಘವೇಶ್ವರ ಸ್ವಾಮೀಜಿ

KannadaprabhaNewsNetwork | Published : Jul 28, 2024 2:02 AM
Follow Us

ಸಾರಾಂಶ

ತೀರ್ಥಹಳ್ಳಿ ಮಠದ ಮಹತಿಯ ಅನಾವರಣಗೊಂಡಿದೆ.

ಗೋಕರ್ಣ: ಅತಿ ವಿಶಿಷ್ಟ ತೀರ್ಥಹಳ್ಳಿ ಮಠದ ಜೀರ್ಣೋದ್ಧಾರದ ಕಾಲ ಸನ್ನಿಹಿತವಾಗಿದೆ. ಸಮರ್ಪಣಾ ಮನೋಭಾವದ ತಂಡ ಇದರ ಅಭಿವೃದ್ಧಿಗೆ ಟೊಂಕ ಕಟ್ಟಿದ್ದು, ಇಡೀ ಸಮಾಜ ಈ ಮಹತ್ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ಕರೆ ನೀಡಿದರು.ಅಶೋಕೆಯಲ್ಲಿ ಅನಾವರಣ ಚಾತುರ್ಮಾಸ್ಯದ ಏಳನೇ ದಿನದ ಪ್ರವಚನದಲ್ಲಿ ಮಾತನಾಡಿ, ತೀರ್ಥಹಳ್ಳಿ ಮಠದ ಮಹತಿಯ ಅನಾವರಣಗೊಂಡಿದೆ. ಅಪೂರ್ವ ಸೇವೆಯನ್ನು ಸಲ್ಲಿಸಿದವರನ್ನು ಸಮಾಜ ಗುರುತಿಸಬೇಕು ಎನ್ನುವುದು ನಮ್ಮ ಅಪೇಕ್ಷೆ. ಇಂದು ವ್ಯಕ್ತಿ ಮತ್ತು ವಿಷಯದ ಎರಡನ್ನೂ ಅನಾವರಣ ಮಾಡಿದಂತಾಗಿದೆ. ಶ್ರೀಮಠಕ್ಕೆ ದೊಡ್ಡ ಸೇವೆ ಸಲ್ಲಿಸಿದ, ಶ್ರೀಮಠದ ಶ್ಯಾನುಭಾಗರಾಗಿ, ಶ್ರೀಮಠದ ಧ್ವನಿಯಾಗಿ ಕೆಲಸ ಮಾಡಿದ ಶಿಷ್ಯರನ್ನು ಅನಾವರಣ ಅತಿಥಿಯಾಗಿ ಆಹ್ವಾನಿಸಿರುವುದು ಅರ್ಥಪೂರ್ಣ ಎಂದರು.

ದೊಡ್ಡಗುರುಗಳು ತಮ್ಮ ಜೀವಿತಾವಧಿಯ ಬಹುಕಾಲವನ್ನು ತೀರ್ಥಹಳ್ಳಿ ಮಠದಲ್ಲಿ ಕಳೆದಿದ್ದಾರೆ. ಮೂಲಮಠ, ಪ್ರಧಾನ ಮಠವನ್ನು, ಪ್ರಾಚೀನ ಕೆಕ್ಕಾರು ಮಠ, ನಮ್ಮ ಪರಂಪರೆಯಲ್ಲಿ ವಿಲೀನವಾದ ಬಾನ್ಕುಳಿ ಮಠ, ಅವರೇ ಸ್ಥಾಪನೆ ಮಾಡಿದ ಮಾಣಿ ಮಠ ಎಲ್ಲವನ್ನೂ ಬಿಟ್ಟು ತೀರ್ಥಹಳ್ಳಿಯಲ್ಲಿ ನೆಲೆಸಿದರು. ಇಡೀ ಜೀವನವನ್ನೇ ಕಳೆದದ್ದು ಅದ್ಭುತ. ಒಂದೊಂದು ತಲೆಮಾರು ಒಂದೊಂದು ಕಡೆ ಸಾಗುತ್ತದೆ ಎನ್ನುವುದಕ್ಕೆ ಇದು ನಿದರ್ಶನ ಎಂದರು.ರಾಮಚಂದ್ರಾಪುರ ಮಂಡಲದ ತೀರ್ಥರಾಜಪುರ, ಭೀಮನಕೋಣೆ, ಪುರಪ್ಪೇಮನೆ, ಶಿವಮೊಗ್ಗ ಮತ್ತು ಕಾನುಗೋಡು ವಲಯಗಳ ಶಿಷ್ಯಭಕ್ತರು ಶನಿವಾರದ ಭಿಕ್ಷಾಸೇವೆ ನೆರವೇರಿಸಿದರು. ಹಲವು ವರ್ಷಗಳ ಕಾಲ ಶ್ರೀಮಠದ ಸೇವೆ ಸಲ್ಲಿಸಿದ ಮಾಜಿ ಶ್ಯಾನುಭಾಗರಾದ ಬಾಬು ನಾರಾಯಣ ಭಟ್ಟ ತೀರ್ಥಹಳ್ಳಿ ಮಠದ ಮಹತಿಗಳ ಅನಾವರಣ ಮಾಡಿದರು.

ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ವಿವಿವಿ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಹಿರಿಯ ಲೋಕ ಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಹರಿಪ್ರಸಾದ್ ಪೆರಿಯಾಪು, ಕಾರ್ಯದರ್ಶಿ ಜಿ.ಕೆ. ಮಧು, ವ್ಯವಸ್ಥಾಪಕ ಪ್ರಮೋದ್ ಮುಡಾರೆ, ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ವಿನಾಯಕ ಶಾಸ್ತ್ರಿ, ರಾಘವೇಂದ್ರ ಮಧ್ಯಸ್ಥ, ಮಹಾಮಂಡಲದ ಪದಾಧಿಕಾರಿಗಳಾದ ಕೇಶವ ಪ್ರಕಾಶ್ ಎಂ., ಪ್ರಸನ್ನ ಉಡುಚೆ, ಕಾರ್ಯದರ್ಶಿ ರುಕ್ಮಾವತಿ ರಾಮಚಂದ್ರ, ರಾಮಚಂದ್ರಾಪುರ ಮಂಡಲದ ಅಧ್ಯಕ್ಷರಾದ ಪ್ರಕಾಶ್ ಬೇರಾಳ, ಕಾರ್ಯದರ್ಶಿ ರಮೇಶ್ ಕಾನುನೋಡು ಮೋಹನ ಭಟ್ ಹರಿಹರ ಮತ್ತಿತರರು ಉಪಸ್ಥಿತರಿದ್ದರು. ಗಣೇಶ ಜೋಶಿ ಸಂಕೊಳ್ಳಿ ಕಾರ್ಯಕ್ರಮ ನಿರೂಪಿಸಿದರು.