ತೀರ್ಥಹಳ್ಳಿ: ಕಾಂಗ್ರೆಸ್ ಪಕ್ಷದ ಆಡಳಿತದ ತೀರ್ಥಹಳ್ಳಿ ಪಟ್ಟಣ ಪಂಚಾಯ್ತಿ ಅಧ್ಯಕ್ಷರಾಗಿದ್ದ ರಹಮತ್ ಉಲ್ಲಾ ಅಸಾದಿ ವಿರುದ್ಧ ಶನಿವಾರ ಮಂಡಿಸಲಾಗಿದ್ದ ಅವಿಶ್ವಾಸ ನಿರ್ಣಯ 9-0 ಮತಗಳಿಂದ ಅಂಗೀಕಾರವಾಗಿದೆ. ಆದರೆ, ರಾಜ್ಯ ಉಚ್ಚನ್ಯಾಯಾಲಯದ ಆದೇಶದ ಅನ್ವಯ ಅ 28 ರವರೆಗೆ ರಹಮತ್ ಉಲ್ಲಾ ಅಸಾದಿ ಅವರೆ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.
ಶನಿವಾರ ನಡೆದ ಪಪಂಯ ಸಭೆಯ ಅಧ್ಯಕ್ಷತೆಯನ್ನು ಪಪಂ ಉಪಾಧ್ಯಕ್ಷೆ ಗೀತಾ ರಮೇಶ್ ವಹಿಸಿದ್ದು ಬಿಜೆಪಿಯ ಆರೂ ಮಂದಿ ಸದಸ್ಯರು ಗೈರಾಗಿದ್ದರು. ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ ಮತ್ತು ಅವರಿಗೆ ಬೆಂಬಲವಾಗಿ ನಿಂತಿದ್ದ ಸುಶೀಲಾಶೆಟ್ಟಿ ಮತ್ತು ನಮೃತ್ ಸೇರಿದಂತೆ ಕಾಂಗ್ರೆಸ್ಸಿನ ಎಲ್ಲಾ 9 ಮಂದಿ ಸದಸ್ಯರೂ ಸಭೆಯಲ್ಲಿ ಹಾಜರಿದ್ದರು. ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ ಮತ್ತು ಅವರಿಗೆ ಬೆಂಬಲವಾಗಿ ನಿಂತಿದ್ದ ಸುಶೀಲಾಶೆಟ್ಟಿ ಮತ್ತು ನಮೃತ್ ಕೂಡಾ ನಿರ್ಣಯದ ಪರ ಮತ ಚಲಾಯಿಸಿದರು. ಬಿಜೆಪಿ ಸದಸ್ಯರು ಸಭೆಗೆ ಹಾಜರಾಗಿರದ ಕಾರಣ ನಿರ್ಣಯದ ಪರ 9 ಮತಗಳಿಂದ ಅವಿಶ್ವಾಸ ನಿರ್ಣಯ ಅಂಗೀಕಾರವಾಗಿದೆ.ಕಾಂಗ್ರೆಸ್ ಪಕ್ಷದ 9 ಮಂದಿ ಚುನಾಯಿತ ಸದಸ್ಯರಿಗೆ ವಿಪ್ ನೀಡಲಾಗಿತ್ತು. ಸಭೆಯಲ್ಲಿ ಕಾಂಗ್ರೆಸ್ಸಿನ ಮೂವರು ನಾಮ ನಿರ್ದೆಶಿತ ಸದಸ್ಯರಲ್ಲದೇ ತಹಸೀಲ್ದಾರರ ಪರವಾಗಿ ಶಿರಸ್ತೇದಾರ್ ಸತ್ಯಮೂರ್ತಿ ಪಾಲ್ಗೊಂಡಿದ್ದು ಪಪಂ ಮುಖ್ಯಾಧಿಕಾರಿ ಡಿ.ನಾಗರಾಜ್ ಇದ್ದರು. ಈ ವಿಷಯಕ್ಕೆ ಸಂಬಂಧಿಸಿ ಕಾಂಗ್ರೆಸ್ ಪಕ್ಷದಲ್ಲಿ ಕಳೆದ ಎರಡು ತಿಂಗಳಿಂದ ಗೊಂದಲ ನಡೆದಿತ್ತು. ಅ.28ರ ನಂತರದ ಬೆಳವಣಿಗೆ ಅತ್ಯಂತ ಕುತೂಹಲಕಾರಿಯಾಗಿದೆ.ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಪಪಂಗೆ ನಾಲ್ಕು ಬಾರಿ ಚುನಾಯಿತನಾಗಿ ಪಟ್ಟಣದ ಅಭಿವೃದ್ಧಿಗೆ ಶ್ರಮಿಸಿರುವ ನನ್ನ ತೇಜೋವಧೆ ಮಾಡಲಾಗಿದೆ. ಈ ಬಗ್ಗೆ ನಾಳೆ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ಕರೆದು ಎಲ್ಲಾ ವಿಚಾರವನ್ನು ಬಹಿರಂಗ ಪಡಿಸುತ್ತೇನೆ. ಈ ದಿನ ಪಕ್ಷದ ಆದೇಶಕ್ಕೆ ತಲೆಬಾಗಿ ಮನಸ್ಸಿಗೆ ವಿರುದ್ಧವಾಗಿ ಅವಿಶ್ವಾಸ ನಿರ್ಣಯದ ಪರ ನಾವು ಮೂವರೂ ಮತ ನೀಡಿದ್ದೇವೆ ಎಂದರು. ಜೊತೆಯಲ್ಲಿ ಅಸಾದಿಯವರನ್ನು ಬೆಂಬಲಿಸಿಕೊಂಡು ಬಂದಿರುವ ಸುಶೀಲಾಶೆಟ್ಟಿ ಮತ್ತು ನಮೃತ್ ಇದ್ದರು.