ಹೊಸಕೋಟೆ: ತಿರುಮಲ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿಯ ಮೇಲಿನ ಅಪಾರ ಭಕ್ತಿ, ಶ್ರದ್ಧೆ ಮತ್ತು ನಂಬಿಕೆಯಿಂದ ಕಳೆದ 50 ವರ್ಷಗಳಿಂದ ನಿರಂತರ ಪಾದಯಾತ್ರೆ ನಡೆಸಿಕೊಂಡು ಬರುತ್ತಿರುವ ಪದಾಯಾತ್ರಿ ಭಕ್ತರ ಸೇವೆ ಶ್ಲಾಘನೀಯ ಎಂದು ಬಿಎಂಆರ್‌ಡಿಎ ಮಾಜಿ ಅಧ್ಯಕ್ಷ ಜಯರಾಜ್ ತಿಳಿಸಿದರು.
ಪಾದಯಾತ್ರೆ ರೂವಾರಿ ನಟರಾಜ ಸ್ವಾಮಿ ಕಳೆದ ಐದು ದಶಕಗಳಿಂದ ನಿರಂತರವಾಗಿ ಭಕ್ತಿ ಮತ್ತು ಶ್ರದ್ಧೆಯಿಂದ ಈ ಧಾರ್ಮಿಕ ಪರಂಪರೆಯನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಅವರ ಭಕ್ತಿ, ಸರಳತೆ, ನಡೆ-ನುಡಿ ಹಾಗೂ ಸೇವಾ ಮನೋಭಾವದಿಂದ ಪ್ರೇರಿತರಾಗಿ ಅನೇಕರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ದೇವರ ಅನುಗ್ರಹವಿಲ್ಲದೆ ಯಾವುದೇ ಕಾರ್ಯವೂ ನಡೆಯುವುದಿಲ್ಲ. ದೇವರೇ ನಮ್ಮಿಂದ ಸೇವೆ ಮಾಡಿಸುತ್ತಾನೆ. ತಂದೆ-ತಾಯಿಯನ್ನು ಗೌರವಿಸುವುದು, ಹಿರಿಯರನ್ನು ಪ್ರೀತಿಯಿಂದ ಕಾಣುವುದು ಹಾಗೂ ಸ್ನೇಹ ಸಂಬಂಧಗಳನ್ನು ಉಳಿಸಿಕೊಳ್ಳುವುದು ಸೇರಿದಂತೆ ಜೀವನದ ಮೌಲ್ಯಗಳನ್ನು ಇಂತಹ ಧಾರ್ಮಿಕ ಸೇವೆಗಳು ಕಲಿಸಿಕೊಡುತ್ತವೆ ಎಂದರು.
ಪಾದಯಾತ್ರೆ ಸಮಿತಿಯ ಮುಖ್ಯಸ್ಥ ಚೇತನ್ ಮಾತನಾಡಿ, ಬೆಂಗಳೂರಿನಿಂದ ತಿರುಪತಿಗೆ ಪಾದಯಾತ್ರೆ ಏಳು ದಿನಗಳ ಕಾಲ ನಡೆಯುತ್ತೆ. ಪ್ರಥಮ ದಿನ ಹೊಸಕೋಟೆಗೆ ಬಂದಾಗ ಜಯರಾಜ್ ಅವರು ಪಾದಯಾತ್ರಿಗಳಿಗೆ ಉಪಾಹಾರ ವ್ಯವಸ್ಥೆ ಕಲ್ಪಿಸಿ ಹಣ್ಣು ಕೊಟ್ಟು ಬೀಳ್ಕೊಟ್ಟಿರುವುದು ಪ್ರಶಂಸನೀಯ ಎಂದರು.50ನೇ ವರ್ಷದ ವಿಶೇಷ ಸಂದರ್ಭದಲ್ಲಿ ಪಾದಯಾತ್ರಿಗಳು ಅವಿಮುಕ್ತೇಶ್ವರ ಸ್ವಾಮಿ, ಆಂಜನೇಯಸ್ವಾಮಿ ಹಾಗೂ ಸರಸ್ವತಿ ದೇವಿ ಶಾರದಾಂಬ ದೇವಾಲಯಗಳಲ್ಲಿ ದರ್ಶನ ಪಡೆದು ತಿರುಪತಿಯತ್ತ ಪಾದಯಾತ್ರೆ ಕೈಗೊಂಡರು.
ಫೋಟೋ: 23 ಹೆಚ್‌ಎಸ್‌ಕೆ 1 ಮತ್ತು 2