ಹೊಸಪೇಟೆ: ಅರ್ಹ ಫಲಾನುಭವಿಗಳಿಗೆ ಮಾತ್ರ ನಿವೇಶನ ಹಕ್ಕುಪತ್ರಗಳನ್ನು ನೀಡಲಾಗುವುದು. ಹಣ ಪಡೆದು ಜನರನ್ನು ವಂಚಿಸುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ನಗರಸಭೆ ಆಯುಕ್ತ ಎರಗುಡಿ ಶಿವಕುಮಾರ್ ಎಚ್ಚರಿಸಿದ್ದಾರೆ.
ನಗರಸಭಾ ಅಧ್ಯಕ್ಷ ಎನ್. ರೂಪೇಶ್ ಕುಮಾರ್ ಮಾತನಾಡಿ, ಹಕ್ಕುಪತ್ರ ವಿಚಾರದಲ್ಲಿ ಜನರಿಗೆ ತಿಳಿವಳಿಕೆ ನೀಡಲು ಕಸದ ವಾಹನದಲ್ಲಿ ಘೋಷಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ನಗರದ ಗುರುಭವನ ಹಿಂಭಾಗದಲ್ಲಿ ಅನೇಕ ವರ್ಷಗಳಿಂದ ವಾಸವಿರುವ ಅನೇಕ ಕುಟುಂಬಗಳಿಗೆ ಹಕ್ಕುಪತ್ರ ನೀಡಬೇಕು, ಈ ಪ್ರದೇಶವನ್ನು ಕೊಳೆಗೇರಿಯೆಂದು ಘೋಷಿಸಬೇಕು ಎಂಬ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ಈ ಎಚ್ಚರಿಕೆಯನ್ನು ಸಭೆಯಲ್ಲಿ ನೀಡಲಾಯಿತು.ಹೊಸಪೇಟೆ ನಗರಕ್ಕೆ ಮುಂದಿನ 50 ವರ್ಷಗಳ ನೀರಿನ ಪೂರೈಕೆಯನ್ನು ಗಮನದಲ್ಲಿಟ್ಟುಕೊಂಡು ₹476 ಕೋಟಿ ಮೊತ್ತದ ಯೋಜನೆಗೆ ಚಾಲನೆ ನೀಡುವುದಕ್ಕೆ ನಗರಸಭೆ ಸದಸ್ಯರು ಒಕ್ಕೊರಲ ಸಮ್ಮತಿ ನೀಡಿದ್ದು, ಮುಂದಿನ ದಿನಗಳಲ್ಲಿ ಇದು ಟೆಂಡರ್ ಮತ್ತು ಇತರ ಪ್ರಕ್ರಿಯೆಗಳಿಗೆ ಅನುವು ಮಾಡಿಕೊಡಲಿದೆ.
ನಗರದ ಜೋಳದರಾಶಿ ಗುಡ್ಡ, ಜಂಬುನಾಥ ಗುಡ್ಡ, ಕೊಂಡನಾಯಕನಹಳ್ಳಿ ಹಾಗೂ ಕಮಲಾಪುರಗಳಲ್ಲಿ ಬೃಹತ್ ನೀರು ಸಂಗ್ರಹಾಗಾರ ನಿರ್ಮಿಸುವುದು, ಹೆಚ್ಚುವರಿ ನೀರಿನ ಟ್ಯಾಂಕ್‌ಗಳನ್ನು ನಿರ್ಮಿಸುವ ಯೋಜನೆಯ ವಿವರನ್ನು ಅವರು ನೀಡಿದರು.
ನಗರದಲ್ಲಿ ಒಳಚರಂಡಿ ಕಾಮಗಾರಿ ವಹಿಸಿಕೊಂಡ ಗುತ್ತಿಗೆದಾರರು ಹಾಗೂ ಬಿಪಿಸಿಎಲ್ ಕಂಪನಿಯವರು ರಸ್ತೆ ಅಗೆದು ಮುಚ್ಚದೆ ಹಾಗೆಯೇ ಬಿಟ್ಟುಬಿಡುತ್ತಿರುವುದಕ್ಕೆ ಸದಸ್ಯರು ಪಕ್ಷಾತೀತವಾಗಿ ಆಕ್ಷೇಪಿಸಿದರು. ತಕ್ಷಣ ಗುತ್ತಿಗೆದಾರರನ್ನು ಕರೆಸಿ ನೋಟಿಸ್ ನೀಡಬೇಕು ಎಂದು ಆಯುಕ್ತರು ಸೂಚಿಸಿದರು.
ನಗರಸಭೆ ಉಪಾಧ್ಯಕ್ಷ ಜೀವರತ್ನಂ, ಸ್ಥಾಯಿ ಸಮಿತಿ ಅಧ್ಯಕ್ಷ ಸರವಣ, ಸದಸ್ಯರಾದ ಎಲ್.ಎಸ್. ಆನಂದ್, ರಮೇಶ್ ಗುಪ್ತ, ಮೊಹಮ್ಮದ್ ಗೌಸ್, ಮಂಜುನಾಥ, ರಾಘವೇಂದ್ರ, ಲತಾ ಸಂತೋಷ್, ರಾಧಾ ಮಲ್ಲಿಕಾರ್ಜುನ, ಅಬ್ದುಲ್ ಖದೀರ್, ಸಂತೋಷ್ ಉಪಸ್ಥಿತರಿದ್ದರು.