ವಿಕಾಸ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕ್ ಲಿ. ತನ್ನ 2025-26ನೇ ಸಾಲಿನ ಹಣಕಾಸು ವರ್ಷದಲ್ಲಿ ಶೇ. 16ರಷ್ಟು ಡಿವಿಡೆಂಡ್ ಘೋಷಿಸಿದೆ ಎಂದು ಅಧ್ಯಕ್ಷ ವಿಶ್ವನಾಥ ಚ. ಹಿರೇಮಠ ಹೇಳಿದರು.
ಹೊಸಪೇಟೆ: ಹೊಸಪೇಟೆಯಲ್ಲಿ ಸ್ಥಾಪನೆಗೊಂಡು ಮೂರು ದಶಕಗಳಿಂದ ಗ್ರಾಹಕರಿಗೆ ವರ್ಷದ 365 ದಿನಗಳೂ ನಿರಂತರ ಸೇವೆ ನೀಡುತ್ತಾ ಬಂದಿರುವ ವಿಕಾಸ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕ್ ಲಿ. ತನ್ನ 2025-26ನೇ ಸಾಲಿನ ಹಣಕಾಸು ವರ್ಷದಲ್ಲಿ ಶೇ. 16ರಷ್ಟು ಡಿವಿಡೆಂಡ್ ಘೋಷಿಸಿದೆ ಎಂದು ಅಧ್ಯಕ್ಷ ವಿಶ್ವನಾಥ ಚ. ಹಿರೇಮಠ ಹೇಳಿದರು.
ಇಲ್ಲಿನ ಹೋಟೆಲ್ ಮಲ್ಲಿಗೆ ಸಭಾಂಗಣದಲ್ಲಿ ಬುಧವಾರ ನಡೆದ ಬ್ಯಾಂಕಿನ 31ನೇ ಸರ್ವ ಸದಸ್ಯರ ಸಭೆಯ ಆನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಬ್ಯಾಂಕ್ ರಾಜ್ಯದಲ್ಲಿ 18 ಶಾಖೆಗಳನ್ನು ಹೊಂದಿದೆ. ಹೊಸಪೇಟೆಯಲ್ಲಿ ಸುಸಜ್ಜಿತ, ಅತ್ಯಾಧುನಿಕ ಸೌಲಭ್ಯಗಳ ಸ್ವಂತ ಕಟ್ಟಡ ಹೊಂದಿದೆ. ಸದ್ಯದಲ್ಲೇ ದಿನದ 24 ಗಂಟೆಗಳ ಕಾಲ ಸೇವೆ ನೀಡುವ ಆಟೋವಾಲ್ಟ್ ಲಾಕರ್ ಸೇವಾ ವ್ಯವಸ್ಥೆ ಶೀಘ್ರದಲ್ಲೇ ಆರಂಭಿಸಲಿದೆ. ಅತ್ಯಂತ ಸುರಕ್ಷಿತವಾದ ಈ ಡಿಜಿಟಲ್ ಲಾಕರ್ ಸೇವೆಯನ್ನು ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ವಿಕಾಸ ಬ್ಯಾಂಕ್ ನೀಡುತ್ತಿದೆ. ಠೇವಣಿ ನಿರ್ವಹಣೆ, ₹2000 ಕೋಟಿ ದಾಟಿದ ಬ್ಯಾಂಕಿಂಗ್ ವಹಿವಾಟು, ಸಮರ್ಥ ಬ್ಯಾಂಕ್ ಆಡಳಿತ ನಿರ್ವಹಣೆಯಿಂದಾಗಿ ವಿಕಾಸ ಬ್ಯಾಂಕ್ ಈಗ ಭಾರತೀಯ ರಿಸರ್ವ್ ಬ್ಯಾಂಕ್ ಮಾನದಂಡಗಳ ಅನುಸಾರ ಟೈರ್-3 ಮಟ್ಟದ ಬ್ಯಾಂಕ್ ಆಗಿ ಹೊರಹೊಮ್ಮಿದೆ ಎಂದರು.
ವಿಕಾಸ ಬ್ಯಾಂಕ್ ಸದ್ಯದಲ್ಲೇ ಶೆಡ್ಯೂಲ್ಡ್ ಬ್ಯಾಂಕ್ ಸ್ಥಾನಮಾನ ಪಡೆಯಲು ಮತ್ತು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಆಗಿ ಹೆಚ್ಚಿನ ವ್ಯಾಪಕ ಸೇವೆ ನೀಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.
ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನವೇ ಸುದ್ದಿಯಾಗಿರುವ ಸೈಬರ್ ಕ್ರೈಂಗಳು ಹೆಚ್ಚಾಗಿರುವ ಈ ಕಾಲದಲ್ಲಿ ವಿಕಾಸ ಬ್ಯಾಂಕ್ ತನ್ನ ಎಲ್ಲ ಗ್ರಾಹಕರಿಗೂ ಸಮಾನವಾಗಿ ಅತ್ಯುನ್ನತ ಮಟ್ಟದ ಮತ್ತು ಮುಂದಾಲೋಚನೆಯ ಹಲವು ಡಿಜಿಟಲ್ ಬ್ಯಾಂಕಿಂಗ್ ಉಪಕ್ರಮಗಳನ್ನು ಕೈಗೊಳ್ಳಲು ಹೆಜ್ಜೆ ಇಟ್ಟಿದೆ ಎಂದರು.
ಇದೆ ಸಂದರ್ಭದಲ್ಲಿ ‘ವಿಕಾಸ ವಿಹಾರ‘ ಮತ್ತು ‘ಸೈಬರ್ ವಿಜಲೆ‘ ಮಾಸಪತ್ರಿಕೆ ಬಿಡುಗಡೆಗೊಳಿಸಲಾಯಿತು. 2025-26ನೇ ಆರ್ಥಿಕ ವರ್ಷದಲ್ಲಿ ಎಲ್ಲ ರೀತಿಯ ಮಾನದಂಡದಲ್ಲಿ ಉತ್ತಮವಾಗಿ ಸಾಧನೆ ಮಾಡಿದ ಹೊಸಪೇಟೆ ಶಾಖೆಯನ್ನು ವರ್ಷದ ‘ಅತ್ಯುತ್ತಮ ಶಾಖೆ‘ ಎಂಬ ಪುರಸ್ಕಾರವನ್ನು ವ್ಯವಸ್ಥಾಪಕಿ ಅನುಪಮಾ ಹಾಗೂ ತಂಡಕ್ಕೆ ನೀಡಿ ಗೌರವಿಸಲಾಯಿತು.
ಬ್ಯಾಂಕಿನ ವ್ಯವಸ್ಥಾಪನ ಮಂಡಳಿ ಅಧ್ಯಕ್ಷ ಬಿ.ಜೆ. ಕುಲಕರ್ಣಿ, ನಿರ್ದೇಶಕರಾದ ದೊಡ್ಡ ಬೋರಯ್ಯ, ಅನಂತ ಜೋಶಿ, ಬೇಳೂರು ಸುದರ್ಶನ, ಗಂಗಾಧರ ಪತ್ತಾರ್, ಉಷಾ ಕೆ., ಜಗದೀಶ್ ಹಿರೇಮಠ, ಶಿವಕುಮಾರ್ ಶೆಟಗಾರ್, ಸುನೀಲ್ ಕುಮಾರ್, ನವ್ಯಶ್ರೀ ಹಿರೇಮಠ, ರಾಘವೇಂದ್ರ ಎಂ., ಲಲಿತ ಪ್ರಸನ್ನ, ಶಂಕರ್ ಜಾಧವ್, ಜಿ. ಚಾಂದ್ ಹುಸೇನ್, ಅಚ್ಯುತರಾವ್, ವ್ಯವಸ್ಥಾಪಕ ನಿರ್ದೇಶಕ ಪ್ರಸನ್ನ ಹಿರೇಮಠ ಸುದ್ಧಿಗೋಷ್ಠಿಯಲ್ಲಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.