ದೊಡ್ಡಬಳ್ಳಾಪುರ: ಟಿಎಂಸಿ ಬ್ಯಾಂಕ್ 60 ವರ್ಷಗಳನ್ನು ಪೂರೈಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಬ್ಯಾಂಕಿನ ಡಿಜಿಟಲೀಕರಣ ಮಾಡಲು ಒತ್ತು ನೀಡಲಾಗುತ್ತಿದ್ದು, ನವೆಂಬರ್ ವೇಳೆಗೆ ಯುಪಿಐ ಪಾವತಿ, ಕೋರ್ ಬ್ಯಾಂಕಿಂಗ್ ಮೊದಲಾದ ಸೌಲಭ್ಯಗಳನ್ನು ನೀಡಲು ಪ್ರಯತ್ನಿಸಲಾಗುವುದು ಎಂದು ಬ್ಯಾಂಕಿನ ಅಧ್ಯಕ್ಷ ಕೆ.ಪಿ.ವಾಸುದೇವ್ ಹೇಳಿದರು.
ಟಿಎಂಸಿ ಬ್ಯಾಂಕ್ ಮಾರ್ಚ್ 2024ರ ಅಂತ್ಯಕ್ಕೆ 40.66 ಲಕ್ಷ ರುಪಾಯಿಗಳ ನಿವ್ಹಳ ಲಾಭ ಗಳಿಸಿದ್ದು, ಬ್ಯಾಂಕ್ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದೆ. ಮಗ್ಗಗಳ ಮೇಲೆ ಸಾಲ ನೀಡುವ ಏಕೈಕ ಬ್ಯಾಂಕ್ ನಮ್ಮದಾಗಿದ್ದು, ನೇಕಾರರಿಗೆ ಈಗ ಕಂಪ್ಯೂಟರ್ ಜಾಕಾರ್ಡ್ ಹಾಕಿಕೊಳ್ಳಲು ಸಾಲ ನೀಡಲಾಗುತ್ತಿದೆ. ಮಗ್ಗಗಳ 3 ಲಕ್ಷ ರು.ನಿಂದ 5 ಲಕ್ಷ ರುಪಾಯಿವರೆಗೆ ಸಾಲ ನೀಡಲಾಗುತ್ತಿದೆ. ಇದರೊಂದಿಗೆ ಶೈಕ್ಷಣಿಕ ಸಾಲ ಹೊರತುಪಡಿಸಿ ಉದ್ಯೋಗಸ್ಥ ಮಹಿಳೆಯರಿಗೆ ಸಾಲ, ಬೆಳ್ಳಿ, ಚಿನ್ನದ ಸಾಲ, ವಾಹನಗಳ ಮೇಲಿನ ಸಾಲ ಸೇರಿದಂತೆ ವಿವಿಧ ಸಾಲ ಸೌಲಭ್ಯ ನೀಡಲಾಗುತ್ತಿದೆ ಎಂದರು.
ಶೇ.10ರಷ್ಟು ಡಿವಿಡೆಂಡ್ :2024ರ ಮಾರ್ಚ್ ಪ್ರಗತಿಯಂತೆ ಶೇರು ಮೊತ್ತ 55.83ಲಕ್ಷ ರು. ಠೇವಣಿ ಮೊತ್ತ 13.84 ಕೋಟಿ ರು ದಾಟಿದ್ದು, 4.64 ಕೋಟಿ ರು. ಸಾಲ ವಸೂಲಾತಿಯಾಗಿದೆ. ಅನುತ್ಪಾದಕ ಆಸ್ತಿಗಳು ಈಗ ಶೇ.0.41ಕ್ಕೆ ಇಳಿಕೆಯಾಗಿದ್ದು, ಆಡಿಟ್ ವರದಿಯಲ್ಲಿ ಎ ಶ್ರೇಣಿ ಪಡೆದಿದೆ. ಶೇ.99.9ರಷ್ಟು ಸಾಲ ವಸೂಲಾಗುತ್ತಿದೆ. ಸದಸ್ಯರಿಗೆ ಈ ಬಾರಿಯೂ ಶೇ.10ರಷ್ಟು ಡಿವಿಡೆಂಡ್ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬ್ಯಾಂಕ್ 60ನೇ ವಾರ್ಷಿಕೋತ್ಸವದ ಅಂಗವಾಗಿ 50 ವರ್ಷ ವೈವಾಹಿಕ ಜೀವನ ಪೂರೈಸಿರುವ ಬ್ಯಾಂಕಿನ ಸದಸ್ಯ ದಂಪತಿಗಳನ್ನು ಸನ್ಮಾನಿಸಲಾಯಿತು. ಎಸ್ಎಸ್ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಫೋಟೋ-