ಕನ್ನಡಪ್ರಭ ವಾರ್ತೆ ಬೆಂಗಳೂರು

ಮೊದಲ ಬಾರಿಗೆ ಆಯ್ಕೆಯಾದ ಶಾಸಕರ ನಂತರ ಇದೀಗ ಸಚಿವ ಸ್ಥಾನಕ್ಕಾಗಿ ವಿಧಾನಪರಿಷತ್‌ ಸದಸ್ಯರು ಹೈಕಮಾಂಡ್‌ ನಾಯಕರಲ್ಲಿ ಮನವಿ ಮಾಡಿದ್ದು, ಪರಿಷತ್‌ನ ಕನಿಷ್ಠ ಮೂರರಿಂದ ಐವರು ಸದಸ್ಯರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಈ ಸಂಬಂಧ ಶಾಸಕರ ನಿಯೋಗವೊಂದು ಕಳೆದ ಡಿಸೆಂಬರ್‌ನಲ್ಲೇ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಸಚಿವ ಸ್ಥಾನದ ಕುರಿತಂತೆ ಮನವಿ ಮಾಡಿದೆ.

ವಿಧಾನಪರಿಷತ್‌ ಸದಸ್ಯರಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಇಲ್ಲದಿರುವುದು ಅಸಮಾನತೆ ಮತ್ತು ನಿರುತ್ಸಾಹ ಭಾವನೆಯನ್ನು ಮೂಡಿಸುತ್ತಿದೆ. ಅಲ್ಲದೆ, ವಿಧಾನಪರಿಷತ್‌ ಶಾಸಕರಿಗೆ ಭವಿಷ್ಯದಲ್ಲಿ ರಾಜಕೀಯ ನಿರೀಕ್ಷೆಗಳಿಲ್ಲ ಎಂಬ ಗ್ರಹಿಕೆಗೆ ಕಾರಣವಾಗುತ್ತಿದೆ. ಸಮರ್ಥ ನಾಯಕರು ವಿಧಾನಪರಿಷತ್‌ ಚುನಾವಣೆಗಳಲ್ಲಿ ಸ್ಪರ್ಧಿಸುವ ಬದಲು ವಿಧಾನಸಭೆ ಚುನಾವಣೆಗೆ ಪ್ರಯತ್ನಿಸಲು ಮುಂದಾಗುತ್ತಾರೆ. ಇದು ಪಕ್ಷ ಸಂಘಟನೆ ಮೇಲೂ ಪರಿಣಾಮ ಬೀರಬಹುದಾದ ಅಂಶವಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಹಾಲಿ ಎಲ್ಲ ವಿಧಾನಪರಿಷತ್‌ ಸದಸ್ಯರೂ ಪಕ್ಷ ಸಂಘಟನೆಯನ್ನು ಬಲಪಡಿಸಲು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಪರಿಷತ್‌ ಸದಸ್ಯರಿಗೂ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ದೊರೆಯುವಂತಾಗಬೇಕು. ಅದಕ್ಕಾಗಿ ಸಚಿವ ಸಂಪುಟ ಪುನಾರಚನೆ ವೇಳೆ ವಿಧಾನಪರಿಷತ್‌ನ ಕನಿಷ್ಠ ಐವರು ಸದಸ್ಯರಿಗೆ ಸಚಿವ ಸ್ಥಾನ ನೀಡಬೇಕು. ಅದರಲ್ಲೂ ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ಆಯ್ಕೆಯಾದವರಿಗೆ ಒಂದು, ಪದವೀಧರ ಅಥವಾ ಶಿಕ್ಷಕರ ಕ್ಷೇತ್ರದ ಒಬ್ಬರು, ವಿಧಾನಸಭೆ ಅಥವಾ ನಾಮ ನಿರ್ದೇಶಿತ ವರ್ಗದ ಒಬ್ಬ ಸದಸ್ಯರು ಸೇರಿದಂತೆ ಒಟ್ಟು ಐವರಿಗೆ ಸಚಿವ ಸ್ಥಾನಕ್ಕೆ ಆಯ್ಕೆ ಮಾಡುವಂತೆ ಕೋರಿದ್ದಾರೆ.


ಕರ್ನಾಟಕ ವಿಧಾನಪರಿಷತ್‌ ದೇಶದಲ್ಲಿಯೇ ಹಳೆಯ ಮೇಲ್ಮನೆ. ಇದರಲ್ಲಿ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗುವ ಸದಸ್ಯರು 10ರಿಂದ 15 ವಿಧಾನಸಭಾ ಕ್ಷೇತ್ರಗಳಲ್ಲಿ ಹಾಗೂ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಂದ ಆಯ್ಕೆಯಾದ ಸದಸ್ಯರು 15 ರಿಂದ 20 ವಿಧಾನಸಭಾ ಕ್ಷೇತ್ರಗಳಲ್ಲಿ ತಮ್ಮ ಪ್ರಭಾವ ಹೊಂದಿದ್ದಾರೆ. ಇನ್ನು, ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದವರು ತಳಮಟ್ಟದ ಜನರೊಂದಿಗೆ ನೇರ ಸಂಪರ್ಕ ಹೊಂದದ್ದು, ಶಾಸಕರಿಗಿಂತ ಹೆಚ್ಚಾಗಿ ಮತದಾರರ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿದ್ದಾರೆ. ಪಕ್ಷ ಸಂಘಟನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಈ ಕಾರಣಗಳಿಂದಾಗಿ ಪರಿಷತ್‌ ಸದಸ್ಯರಿಗೆ ಸಚಿವ ಸ್ಥಾನ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಮನವಿ ಕುರಿತಂತೆ ಪ್ರತಿಕ್ರಿಯಿಸಿರುವ ಎಂಎಲ್‌ಸಿ ಪುಟ್ಟಣ್ಣ, ಸಚಿವ ಸ್ಥಾನಕ್ಕಾಗಿ ನಾವು ಬೇಡಿಕೆ ಇಟ್ಟಿಲ್ಲ. ಬದಲಿಗೆ ವಿಧಾನಪರಿಷತ್‌ಗೆ ಪ್ರಾತಿನಿಧ್ಯ ನೀಡುವಂತೆ ಕೇಳಿದ್ದೇವೆ. ಕನಿಷ್ಠ ಮೂರರಿಂದ ಐದು ಮಂದಿಯನ್ನಾದರೂ ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಕೋರಿದ್ದೇವೆ. ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದು ಹೈಕಮಾಂಡ್‌ಗೆ ಸೇರಿದ್ದು ಎಂದಿದ್ದಾರೆ.