ರೋಟರಿ ಸಂಸ್ಥೆ ನೇತೃತ್ವದಲ್ಲಿ ತಾಲೂಕು ಮಟ್ಟದ ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಪ್ರೇರಣಾ ಸ್ಫೂರ್ತಿ ಕಾರ್ಯಕ್ರಮ
ಹಸಿದ ಹೊಟ್ಟೆಗೆ ಅನ್ನ ಸಿಕ್ಕಿದರೆ ಹೊಟ್ಟೆ ತುಂಬುತ್ತದೆ. ಜ್ಞಾನದ ಹಸಿವಿದ್ದ ವ್ಯಕ್ತಿ ಮೌಲ್ಯಯುತ ಶಿಕ್ಷಣ, ಸಂಸ್ಕಾರ, ಬುದ್ದಿವಂತಿಕೆ, ತಿಳುವಳಿಕೆ ಸಿಕ್ಕಾಗ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬಾಳುತ್ತಾರೆ ಎಂದು ಮೂಡಬಿದ್ರೆಯ ಉತ್ತಮ ವಾಗ್ಮಿ ದಾಮೋದರ ಶರ್ಮ ತಿಳಿಸಿದರು.
ಶನಿವಾರ ಪಟ್ಟಣದ ಡಿಸಿಎಂಸಿ ಶಾಲಾ ಆವರಣದಲ್ಲಿ ರೋಟರಿ ಕ್ಲಬ್, ಡಿಸಿಎಂಸಿ ಪ್ರೌಢ ಶಾಲೆ, ಶಾಲಾ ಶಿಕ್ಷಣ ಇಲಾಖೆ, ಶೃಂಗೇರಿ ಶಾರದಾ ಪೀಠ, ತಾಲೂಕು ಒಕ್ಕಲಿಗರ ಸಂಘ, ಹಳೇ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ತಾಲೂಕಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ನಡೆದ ಪರೀಕ್ಷೆ ಎದುರಿಸುವುದು ಹೇಗೆ, ಸಂಸ್ಕಾರ, ಸಂಸ್ಕೃತಿಯೊಂದಿಗೆ ಶಿಕ್ಷಣದ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿದರು.ಅಜ್ಞಾನ, ವ್ಯಾಮೋಹ, ಕೆಟ್ಟ ನಡವಳಿಕೆಗಳಿಂದ ಹೊರ ಬರುವುದಕ್ಕೆ ವಿದ್ಯೆ ಎನ್ನುತ್ತಾರೆ. ನಮ್ಮ ಬುದ್ದಿವಂತಿಕೆಯನ್ನು ಒಳ್ಳೆಯದಕ್ಕೆ ಉಪಯೋಗಿಸಬೇಕು. ಯುವ ಜನರಿಗೆ ಸುಸಂಸ್ಕೃತ ಭಾರತ ಕಟ್ಟುವ ಜವವಾಬ್ದಾರಿ ಇದೆ. ನಾವು ಬೇರೆಯ ವರಿಗೆ ಗೌರವ ನೀಡಿದರೆ ನಮಗೆ ಆ ಗೌರವ ಮತ್ತೆ ಪಾಪಾಸು ಬರುತ್ತದೆ. ಯುವ ಜನರು ಉತ್ತಮ ಗ್ರಂಥಗಳನ್ನು ಓದ ಬೇಕು. ಪರೀಕ್ಷೆಗಳಲ್ಲಿ ಅನುತ್ತೀರ್ಣವಾದಾಗ ಭಯ ಬೀಳದೆ ಮತ್ತೆ ಪ್ರಯತ್ನ ಮಾಡಿ ಜಯಶೀಲರಾಗಬೇಕು. ಹಿರಿಯರ ಅನುಭವವನ್ನು ಕಿರಿಯರು ಕೇಳಿ ತಿಳಿದುಕೊಳ್ಳಬೇಕು. ಯಾರ ವ್ಯಕ್ತಿತ್ವವೂ ಕಡಿಮೆಯಲ್ಲ. ಆದರೆ, ವ್ಯಕ್ತಿತ್ವ ಬೆಳೆದಂತೆ ಅಹಂಕಾರ ಮಾಡಬಾರದು. ಮಕ್ಕಳು ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಬೇಕು. ಶಿಕ್ಷಣವನ್ನು ಪ್ರೀತಿಸಬೇಕು ಎಂದು ಕರೆ ನೀಡಿದರು.ಮುಖ್ಯ ಅತಿಥಿಯಾಗಿದ್ದ ಶಿವಮೊಗ್ಗ ಭದ್ರಾ ಕಾಡಾ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ, ಕಳೆದ 35 ವರ್ಷದಿಂದಲೂ ಡಿಸಿಎಂಸಿ ಪ್ರೌಢ ಶಾಲೆ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿದೆ. ದೇಶ ಕಟ್ಟುವ ಮಕ್ಕಳು ಕ್ರಿಯಾ ಶೀಲತೆ ಬೆಳೆಸಿಕೊಳ್ಳಬೇಕು. ನಿಮ್ಮ ಭವಿಷ್ಯವನ್ನು ಒಳ್ಳೆಯ ರೀತಿಯಲ್ಲಿ ಬೆಳೆಸಿಕೊಳ್ಳಬೇಕು. ಕಲಿಕೆ ಎಂಬುದಕ್ಕೆ ಅಂತ್ಯವಿಲ್ಲ. ಪ್ರತಿ ಹಂತದಲ್ಲೂ ಕಲಿಯುವುದು ಇರುತ್ತದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಎಲ್ಲಾ ತಂತ್ರಜ್ಞಾನ ಬಳಸಿಕೊಳ್ಳಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನಾ ಅಂಜುಮ್ ಮಾತನಾಡಿ, ರೋಟರಿ ಸಂಸ್ಥೆ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ವಿದ್ಯಾರ್ಥಿಯ ಶೈಕ್ಷಣಿಕ ಜೀವನಕ್ಕೆ ಎಸ್.ಎಸ್.ಎಲ್.ಸಿ ಎಂಬುದು ಮೊದಲ ಹೆಜ್ಜೆಯಾಗಿದೆ. ಈ ವಯಸ್ಸಿನಲ್ಲಿ ಗೂಡಿನಿಂದ ಹಕ್ಕಿಗಳು ಹೊರ ಬಂದಂತೆ ಆಗಲಿದೆ. ಈ ವರ್ಷ 815 ಮಕ್ಕಳು ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯಲಿದ್ದಾರೆ. ಇನ್ನು ಪರೀಕ್ಷೆಗೆ 87 ದಿನ ಬಾಕಿ ಇದೆ. ಇಂದಿನ ತರಬೇತಿ ಪಡೆದುಕೊಂಡು ಉತ್ತಮ ಅಂಕ ಪಡೆಯಿರಿ ಎಂದರು.ಸಭೆ ಅಧ್ಯಕ್ಷತೆ ವಹಿಸಿದ್ದ ರೋಟರಿ ಸಂಸ್ಥೆ ಅಧ್ಯಕ್ಷ ಕಣಿವೆ ವಿನಯ್ ಮಾತನಾಡಿ, ಇಂದಿನ ಮಕ್ಕಳು ಉತ್ತಮ ಶಿಕ್ಷಣ ಪಡೆದು ವಿದೇಶಕ್ಕೆ ಹೋಗುತ್ತಾರೆ.ಆದರೆ,ಸಂಸ್ಕಾರದ ಕೊರತೆಯಿಂದ ತಂದೆ, ತಾಯಿಗಳನ್ನು ಸರಿಯಾಗಿ ನೋಡಿಕೊಳ್ಳದೆ ವೃದ್ಧ ತಂದೆ, ತಾಯಿಗಳು ವೃದ್ಧಶ್ರಮಕ್ಕೆ ಸೇರುವ ಸ್ಥಿತಿ ಬಂದಿದೆ. ಹಿಂದಿನ ಶಿಕ್ಷಣದಲ್ಲಿ ಮಕ್ಕಳಿಗೆ ಸಂಸ್ಕಾರ ಕಲಿಸಲಾಗುತ್ತಿತ್ತು. ಈಗ ಕೇವಲ ಅಂಕಗಳಿಕೆಯೇ ಶಿಕ್ಷಣ ಎಂಬಂತಾಗಿದೆ. ಆದ್ದರಿಂದ ಮಕ್ಕಳಿಗೆ ಉತ್ತಮ ಸಂಸ್ಕಾರ ಸಿಗಲಿ ಎಂಬ ಉದ್ದೇಶದಿಂದ ವಿವಿಧ ಸಂಘ, ಸಂಸ್ಥೆಗಳ ಸಹಕಾರದಿಂದ ದಾಮೋದರ ಶರ್ಮ ಅವರಿಂದ ಉಪನ್ಯಾಸ ನೀಡಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಎನ್.ಆರ್.ದಾಮೋದರ ಶರ್ಮ ಹಾಗೂ ರಾಜಗೋಪಾಲ ಜೋಷಿ ಅವರನ್ನು ಸನ್ಮಾನಿಸಲಾಯಿತು.ರೋಟರಿ ಸಂಸ್ಥೆ ನಿಯೋಜಿತ ಅಧ್ಯಕ್ಷ ಪಿ.ಎಸ್.ವಿದ್ಯಾನಂದಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅತಿಥಿಗಳಾಗಿ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಲ್.ಎಂ.ಸತೀಶ್, ಕಾರ್ಯದರ್ಶಿ ಎಸ್.ಎಸ್.ಶಾಂತಕುಮಾರ್, ಖಜಾಂಚಿ ಕಟಗಳಲೆ ಲೋಕೇಶ್, ಸಹ ಕಾರ್ಯದರ್ಶಿ ಪಿ.ಕೆ.ಬಸವರಾಜ್,ಪ್ರಾಂಶುಪಾಲೆ ಪದ್ಮರಮೇಶ್, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಕ್ಷಿತ್, ಶಾಲಾ ಮುಖ್ಯೋಪಾಧ್ಯಾಯಿನಿ ಲೆವಿನಾ ಜೂಲಿಯಾನ ಡಿಕೋಸ್ಟ, ಶಿಕ್ಷಣ ಸಂಯೋಜಕಿ ತೃಪ್ತಿ ಅಮರ್, ಮಧುರ ಮಂಜುನಾಥ್ ಇದ್ದರು.
-- ಬಾಕ್ಸ್--ಈಗಿನ ಶಿಕ್ಷಣ ಬದುಕಲು ಕಲಿಸುತ್ತಿಲ್ಲ: ವಿಷಾದ
1905 ರಲ್ಲಿ ಶಿಕಾಗೋ ನಗರದಲ್ಲಿ 4 ಜನರಿಂದ ಪ್ರೀತಿ ಹಾಗೂ ಸ್ನೇಹಕ್ಕಾಗಿ ಹುಟ್ಟಿದ ರೋಟರಿ ಸಂಸ್ಥೆಗೆ ಈಗ 120 ವರ್ಷ ತುಂಬಿದೆ. ಪ್ರಪಂಚದ ಮೂಲೆ,ಮೂಲೆಗಳಲ್ಲಿ ಸೇವೆ ಸಲ್ಲಿಸುತ್ತಿದೆ ಎಂದು ರೋಟರಿ 3182ರ ಉಪ ರಾಜ್ಯಪಾಲ ರಾಜಗೋಪಾಲ ಜೋಷಿ ತಿಳಿಸಿದರು.ಸಮಾರಂಭ ಉದ್ಘಾಟಿಸಿ ಮಾತನಾಡಿ, ಪ್ರಪಂಚದಲ್ಲಿ ನೂರಾರು ಎನ್.ಜಿ.ಒ.ಗಳಿದ್ದರೂ ಕಳೆದ 14 ವರ್ಷಗಳಿಂದ ರೋಟರಿ ಸಂಸ್ಥೆ ಸೇವೆಗಾಗಿ ಮಾತ್ರ ವಿಶ್ವ ಸಂಸ್ಥೆಯಿಂದ ಪ್ರಶಸ್ತಿ ಸಿಗುತ್ತಿದೆ. ಉತ್ತಮ ದೇಶ ಕಟ್ಟಿದ ತೃಪ್ತಿ ರೋಟರಿ ಸಂಸ್ಥೆಗೆ ಇದೆ . ಬಹಳ ವರ್ಷಗಳ ಹಿಂದೆ ಶಾಲೆಗಳಲ್ಲಿ ಕಡಿಮೆ ಅಂಕ ಬರುತ್ತಿದ್ದರೂ ಬದುಕಲು ಕಲಿಯುತ್ತಿದ್ದರು. ಆದರೆ,ಈಗಿನ ಶಿಕ್ಷಣ ದೈನಂದಿನ ಬದುಕು ಸಹ ಕಲಿಸುತ್ತಿಲ್ಲ. ಕೇವಲ ಶಿಕ್ಷಣವೇ ಜೀವನವಲ್ಲ.ಮಕ್ಕಳು ಸಂಸ್ಕಾರವಂತರಾಗಿ ಬದುಕಿ ದೇಶದ ಮುಂದಿನ ಆಸ್ತಿಯಾಗಬೇಕು ಎಂದು ಕರೆ ನೀಡಿದರು.