ಅಶೋಕ ಸೊರಟೂರ
ಕೆಂಡದಂತ ಬಿಸಿಲ ಹೊಡೆತಕ್ಕೆ ತತ್ತರಿಸಿದ ಜನಸಾಮಾನ್ಯರು ದಾಹ ತೀರಿಸಿಕೊಳ್ಳಲು ಆರೋಗ್ಯಯುಕ್ತ ಎಳನೀರು ಕುಡಿಯುತ್ತಿದ್ದಾರೆ. ಈ ವರ್ಷ ಕಳೆದ ವರ್ಷಕ್ಕಿಂತ ತುಸು ಹೆಚ್ಚಾಗಿರುವ ತಾಪಮಾನ ಜನಸಾಮಾನ್ಯರನ್ನು ಇನ್ನಿಲ್ಲದಂತೆ ಹೈರಾಣು ಮಾಡಿದೆ. ತಾಲೂಕಿನಾದ್ಯಂತ 38- 39 ಡಿಗ್ರಿ ಆಸುಪಾಸು ಉಷ್ಣಾಂಶ ದಾಖಲಾಗುತ್ತಿದೆ. ಜನರು ಮನೆಯಿಂದ ಹೊರಗೆ ಬಾರದಂತೆ ಮಾಡಿದೆ. ಮುಂಗಾರು ಹಂಗಾಮಿನ ಮಳೆಯ ಕೊರತೆ ಬಿಸಿಲ ಝಳಕ್ಕೆ ತುಪ್ಪ ಸುರಿಯುವ ಕಾರ್ಯ ಮಾಡಿದೆ.
ಬಿಸಿಲ ಬೇಗೆಗೆ ಎಷ್ಟು ನೀರು ಕುಡಿದರೂ ದಾಹ ನೀಗುತ್ತಿಲ್ಲ. ಆರೋಗ್ಯದ ದೃಷ್ಟಿಯಿಂದ ಎಳನೀರು ಉತ್ತಮ ಖನಿಜಾಂಶ ಹೊಂದಿದ ಆರೋಗ್ಯಯುಕ್ತ ಪೇಯವಾಗಿದೆ. ಬೇಸಿಗೆಯ ಪೂರ್ವದಲ್ಲಿ ಎಳನೀರಿನ ಬೆಲೆ ₹30- 40 ರಷ್ಟಿತ್ತು. ಯಾವಾಗ ಬೇಸಿಗೆ ಆರಂಭವಾಯಿತೋ ಎಳನೀರಿನ ಬೆಲೆ ₹50ಕ್ಕೆ ಏರಿಕೆಯಾಗಿದೆ.ಹಣ್ಣು, ಮಜ್ಜಿಗೆಗೂ ಬೇಡಿಕೆ: ಹೊಟ್ಟೆ ತಂಪಾಗಿಸುವ ಕಲ್ಲಂಗಡಿ ಸೇರಿದಂತೆ ನಾನಾ ಬಗೆಯ ಹಣ್ಣುಗಳಿಗೂ ವಿಪರೀತ ಬೇಡಿಕೆ ಉಂಟಾಗಿದೆ. ಅದೇ ರೀತಿ ದೇಹ ತಂಪಾಗಿಸಲು ಜನ ಮಜ್ಜಿಗೆಯ ಮೊರೆ ಹೋಗುತ್ತಿದ್ದಾರೆ. ಸೆಕೆ ತಾಳದೇ ಈ ಬೇಸಿಗೆ ಕಾಲ ಯಾವಾಗ ಮುಗಿಯುತ್ತಪ್ಪಾ ಎಂದು ಜನರು ಅಲವತ್ತುಕೊಳ್ಳುತ್ತಿದ್ದಾರೆ.
ಬೇಡಿಕೆ ಹೆಚ್ಚಳ: ಈ ವರ್ಷ ಬಿಸಿಲು ಹೆಚ್ಚಾಗಿರುವುದರಿಂದ ಎಳನೀರಿನ ಬೇಡಿಕೆ ಹೆಚ್ಚಾಗಿದೆ. ಜನರು ಎಳನೀರು ಮೊರೆ ಹೋಗುತ್ತಿರುವುದು ಉತ್ತಮ. ಆದರೆ ಉತ್ತಮ ಎಳನೀರು ಕಾಯಿಗಳು ಸಿಗುತ್ತಿಲ್ಲ. ಸಿಕ್ಕರೂ ಬೆಲೆ ಹೆಚ್ಚಾಗಿರುವುದರಿಂದ ಲಾಭಾಂಶ ಕಡಿಮೆಯಾಗಿದೆ ಎಂದು ಎಳನೀರು ವ್ಯಾಪಾರಿ ರಾಮಣ್ಣ ಶೆಟ್ಟಿಕೇರಿ ತಿಳಿಸಿದರು.