ಪುಂಡ ಗಜರಾಜನಿಗೆ ವಿನೀತ ‘ಅಶ್ವತ್ಥಾಮ’ ನಾಮಾಂಕಿತ

KannadaprabhaNewsNetwork | Published : Aug 13, 2024 12:58 AM

ಸಾರಾಂಶ

ಶಿವಮೊಗ್ಗ ಸಮೀಪದ ಸಕ್ರೆಬೈಲಿನ ಆನೆ ಬಿಡಾರದಲ್ಲಿ ಸೋಮವಾರ ಆನೆಯೊಂದಕ್ಕೆ ಹೆಸರಿಡುವ ಶಾಸ್ತ್ರೋಕ್ತವಾಗಿ ನಾಮಕರಣ ಮಾಡುವ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಪುಂಡಾನೆಯಾಗಿ ಮೆರೆಯುತ್ತಿದ್ದು, ಬಳಿಕ ಅರಣ್ಯಾಧಿಕಾರಿಗಳ ಅಂಕುಶಕ್ಕೆ ಒಳಗಾಗಿ ಆನೆ ಬಿಡಾರ ಸೇರಿ ಸಾಮಾನ್ಯ ಸದಸ್ಯನಾಗಿದ್ದ ಆನೆಗೆ ಸೋಮವಾರ ಶಾಸ್ತ್ರೋಕ್ತವಾಗಿ ನಾಮಕರಣ ಮಾಡಲಾಗಿದೆ.

ಸಕ್ರೆಬೈಲಿನ ಆನೆ ಬಿಡಾರದಲ್ಲಿ ಸೋಮವಾರ ನಡೆದ ವಿಶ್ವ ಆನೆ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಪೂರ್ವಾಶ್ರಮದ ಪುಂಡಾನೆಗೆ ‘ಅಶ್ವತ್ಥಾಮ’ ಎಂಬ ಹೆಸರನ್ನು ಅಭಿದಾನಗೊಳಿಸಲಾಯಿತು.

ಮನುಷ್ಯರಲ್ಲಿ ನಡೆಯುವಂತೆ ಪುರೋಹಿತರು ಈ ಆನೆಯ ನಾಮಕರಣ ನೆರವೇರಿಸಿದರು. ಆನೆಯ ಕಿವಿಯಲ್ಲಿ ಹಿರಿಯ ಅರಣ್ಯಾಧಿಕಾರಿಗಳ ಮೂಲಕ ಮೂರು ಬಾರಿ ಹೆಸರನ್ನು ಹೇಳುವ ಮೂಲಕ ನಾಮಕರಣ ಶಾಸ್ತ್ರ ಪೂರ್ಣಗೊಳಿಲಾಯಿತು.

ಬಣ್ಣ ಬಣ್ಣದ ವಸ್ತ್ರಗಳಿಂದ ಅಲಂಕೃತಗೊಂಡ ಆನೆಗಳ ಸಾಲು. ಮಾವುತರ ಮುಖದಲ್ಲಿ ಎದ್ದು ಕಾಣುತ್ತಿದ್ದ ಒಂದು ರೀತಿಯ ಮಂದಹಾಸ. ತನ್ನ ಮಾವುತ ಹಾಗೂ ಕಾವಡಿಯ ಆಜ್ಞೆಗಳನ್ನು ಶಿರಸಾ ಪಾಲಿಸುತ್ತಿದ್ದ ಆನೆಗಳ ಹಿಂಡು. ಇದರ ನಡುವೆಯೇ ಶಾಸ್ತ್ರೋಕ್ತವಾಗಿ ನಡೆದ ನಾಮಕರಣ ಕಾರ್ಯಕ್ರಮ. ಇದೆಲ್ಲದಕ್ಕೆ ಸಾಕ್ಷಿ ಯಾದವರು ಆನೆ ಬಿಡಾರದ ಸಂಭ್ರಮದ ಕ್ಷಣಗಳನ್ನು ಕಣ್ತುಂಬಿಸಿಕೊಳ್ಳಲು ಆಗಮಿಸಿದ್ದ ನೂರಾರು ಜನರು. ಮಕ್ಕಳು, ಮಹಿಳೆಯರು, ವೃದ್ಧರು ಎಂಬ ಬೇಧವಿಲ್ಲದೆ ಎಲ್ಲರೂ ಈ ಸಂಭ್ರಮದಲ್ಲಿ ಭಾಗಿಯಾದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನ ಕೃಷ್ಣ ಪಟಗಾರ ಆನೆಯ ಕಿವಿಯಲ್ಲಿ ಮೂರು ಬಾರಿ ‘ಅಶ್ವತ್ಥಾಮ’ ಎಂದು ಹೇಳುವ ಮೂಲಕ ಆನೆಯ ನಾಮಕರಣವನ್ನು ನೆರವೇರಿಸಿದರು. ಇದಕ್ಕೂ ಮೊದಲು ಪುಂಡಾನೆ ಸೇರಿದಂತೆ ಬಿಡಾರದ 23 ಆನೆಗಳಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಲಾಯಿತು.ಎಲ್ಲಿಂದ ಸೆರೆಯಾದ ಪುಂಡಾನೆ?:

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಬಳಿ ಸಾರ್ವಜನಿಕರಿಗೆ ಸಮಸ್ಯೆಯಾಗಿ ಕಾಡುತ್ತಿದ್ದ ಈ ಪುಂಡಾನೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದಿದ್ದರು. 8 ತಿಂಗಳ ಹಿಂದೆ ಕಾರ್ಯಾಚರಣೆಯಲ್ಲಿ ಸೆರೆಯಾದ 31 ವರ್ಷದ ಪುಂಡಾನೆಯನ್ನು ಇಲ್ಲಿನ ಸಕ್ರೆಬೈಲಿನ ಆನೆ ಬಿಡಾರಕ್ಕೆ ತಂದು ಹಲವು ದಿನಗಳ ಕಾಲ ಪಳಗಿಸಲಾಯಿತು. ಇಲ್ಲಿನ ಮಾವುತರು, ಕಾವಾಡಿಗಳು, ಅರಣ್ಯಾಧಿಕಾರಿಗಳ ಪೂರ್ಣ ಶ್ರಮದ ಬಳಿಕ ಹಿಡಿತಕ್ಕೆ ಸಿಲುಕಿ ಪಳಗಿದ ಆನೆ ಬಿಡಾರದ ಹೊಸ ಸದಸ್ಯನಾಗಿ ಎಂಟ್ರಿ ನೀಡಿತು. ಅಲ್ಲಿಂದ ಇದಕ್ಕೊಂದು ಹೆಸರು ಬೇಕೆಂಬ ಬಿಡಾರದ ಸಿಬ್ಬಂದಿಗಳ ಒತ್ತಾಸೆಗೆ ಕೊನೆಗೂ ಸೋಮವಾರ ಮಹೂರ್ತ ಸಿದ್ಧಗೊಂಡಿತ್ತು.

Share this article