ಕನ್ನಡಪ್ರಭ ವಾರ್ತೆ ತಿಪಟೂರು
ಎಚ್‌ಐವಿ ವೈರಸ್‌ನಿಂದ ದೂರವಿರಲು ಎಲ್ಲರೂ ಏಕಪತ್ನಿ ವ್ರತಸ್ಥರಾಗಿರುವುದೇ ನನ್ನ ಪ್ರಕಾರ ಉತ್ತಮ ಪರಿಹಾರವಾಗಿದೆ ಎಂದು ತಾಲೂಕು ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶಿವಕುಮಾರ್ ತಿಳಿಸಿದರು.ನಗರದ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ವಿಶ್ವ ಏಡ್ಸ್ ಜಾಗೃತಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಸುರಕ್ಷಿತ ಲೈಂಗಿಕತೆಯಿಂದ ಏಡ್ಸ್ ಹರಡುತ್ತದೆ ಎಂದು ತಿಳಿದಿದೆ. ಆದ್ದರಿಂದ ಏಕಪತ್ನಿವ್ರತಸ್ಥರಾಗಿ. ಕಾಂಡೋಮ್ ಅನ್ನು ಸಂತಾನ ಮುಂದೂಡಲು ಮಾತ್ರ ಬಳಸಬೇಕು. ಆಗ ತಂತಾನೇ ಎಚ್‌ಐವಿ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತದೆ ಎಂದರು.
೧೯೮೧ರಲ್ಲಿ ಅಮೆರಿಕಾದಲ್ಲಿ ಮೊದಲ ಎಚ್‌ಐವಿ ವೈರಸ್ ಪತ್ತೆಯಾಯಿತು. ೧೯೮೩ರಲ್ಲಿ ಭಾರತದ ತಮಿಳುನಾಡಿನಲ್ಲಿ ಮೊದಲು ಪತ್ತೆಯಾಯಿತು. ಇದಕ್ಕೆ ಸಂಪೂರ್ಣ ಚಿಕಿತ್ಸೆ ಇಲ್ಲವಾದರೂ ಇದು ಹರಡುವುದನ್ನು ತಡೆಯುವುದು ಹಾಗೂ ಎಚ್‌ಐವಿ ಪಾಸಿಟಿವ್ ಬಂದಿರುವವರಿಗೆ ಕೌನ್ಸಿಲಿಂಗ್ ಹಾಗೂ ಅವರಿಗೆ ಸೂಕ್ತ ಪೋಷಕಾಂಶಗಳನ್ನು ನೀಡಿ ಮಾನಸಿಕವಾಗಿ ಧೈರ್ಯ ತುಂಬುವ ಕೆಲಸ ಮಾಡಲಾಗುತ್ತದೆ. ರಾಜ್ಯದಲ್ಲಿ ಸುಮಾರು ೬೮ ಎಆರ್‌ಟಿ ಸೆಂಟರ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಅದರ ಮುಖ್ಯ ಉದ್ದೇಶ ಏಡ್ಸ್ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಎಚ್‌ಐವಿ ಬಗ್ಗೆ ಉಚಿತ ಪರೀಕ್ಷೆ ನಡೆಸುವುದು ಹಾಗೂ ಎಚ್‌ಐವಿ ಪಾಸಿಟಿವ್ ಬಂದಿರುವವರಿಗೆ ಉಚಿತ ಕೌನ್ಸಿಲಿಂಗ್ ಹಾಗೂ ಚಿಕಿತ್ಸೆ ನೀಡುವುದಾಗಿದೆ ಎಂದರು.ಸಾರ್ವಜನಿಕ ಆಸ್ಪತ್ರೆಯ ಎಆರ್‌ಟಿ ಸೆಂಟರ್ ಮುಖ್ಯಸ್ಥ ಉಮೇಶ್ ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಏಡ್ಸ್ ಬಗ್ಗೆ ಮಾಹಿತಿ ಇರುವ ಕರಪತ್ರಗಳನ್ನು ನೀಡಿ ಅವರ ಕೈಗೆ ಕೆಂಪು ದಾರವನ್ನು ಕಟ್ಟುವ ಮೂಲಕ ಎಚ್‌ಐವಿ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಂಕಲ್ಪದೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಮಣಿ ಮಾತನಾಡಿ, ಶಿಕ್ಷಣ ಹಾಗೂ ಆರೋಗ್ಯ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಆದ್ದರಿಂದ ಜನರಿಗೆ ಶಿಕ್ಷಣದ ಬಗ್ಗೆ ಏಡ್ಸ್ ಕಾಯಿಲೆ ಬಗ್ಗೆ ಅರಿವು ಮೂಡಿಸಬೇಕಿದೆ. ಏಡ್ಸ್‌ಗೆ ಸರ್ಕಾರದಿಂದ ಉಚಿತ ಟೆಸ್ಟಿಂಗ್ ಮತ್ತು ಚಿಕಿತ್ಸೆ ಕೂಡಾ ತೆರೆದಿರುತ್ತದೆ. ಎಚ್‌ಐವಿ ಪೀಡಿತರಿಗೆ ಮೊದಲು ಅವರ ಮನದಲ್ಲಿರುವ ಭಯ ಹೋಗಲಾಡಿಸಬೇಕು, ಅವರಲ್ಲಿ ಆತ್ಮಸ್ಥೈರ್ಯ ತುಂಬಬೇಕು ಎಂದು ತಿಳಿಸಿದರು.ಕಾರ್ಯಕ್ರಮಕ್ಕೂ ಮೊದಲು ಕಾಲೇಜು ವಿದ್ಯಾರ್ಥಿಗಳು ಹಾಗೂ ತಾಲೂಕು ಆಡಳಿತ ಸಹಯೋಗದೊಂದಿಗೆ ನಡೆದ ಜಾಥಾವನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹೇಮಂತ್‌ಕುಮಾರ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಮ್ಮದ್ ಆರೀಫುಲ್ಲ, ಪ್ರಧಾನ ಸಿವಿಲ್ ನ್ಯಾಯಾಧೀಶ ಭರತ್‌ಚಂದ್ರ ಹಾಗೂ ಅಧಿಕ ಸಿವಿಲ್ ನ್ಯಾಯಾಧೀಶರಾದ ಮಧುಶ್ರೀ ಜಿ.ಎಸ್ ಚಾಲನೆ ನೀಡಿ ಶುಭ ಹಾರೈಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಚನ್ನಕೇಶವ, ಸಾರ್ವಜನಿಕ ಆಸ್ಪತ್ರೆಯ ಡಾ.ರಕ್ಷಿತ್, ಕಲ್ಪತರು ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎನ್.ಉಮೇಶ್, ಸರ್ಕಾರಿ ಪದವಿ ಕಾಲೇಜು ಪ್ರಾಂಶುಪಾಲ ಡಾ.ಶಶಿಕುಮಾರ್, ರೋಟರಿ ಸಂಸ್ಥೆಯ ಅಧ್ಯಕ್ಷೆ ವನಿತಾ ಪ್ರಸನ್ನ ಇನ್ನಿತರರು ಉಪಸ್ಥಿತರಿದ್ದರು.