20 ಕೆರೆಗಳಿಗೆ ಭದ್ರೆ ತುಂಬಿಸೋಕೆ 10 ವರ್ಷ ಬೇಕಾ

KannadaprabhaNewsNetwork |  
Published : Sep 12, 2026, 01:15 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್   | Kannada Prabha

ಸಾರಾಂಶ

ಮೊಳಕಾಲ್ಮೂರು ಕ್ಷೇತ್ರ ವ್ಯಾಪ್ತಿಯ ಕೋಡಿಹಳ್ಳಿ ಸಮೀಪದಲ್ಲಿ ಯೋಜನೆಯ ಕಾಮಗಾರಿ ನಡೆಯುತ್ತಿರುವುದು.

ಮೊಳಕಾಲ್ಮೂರು ಮಂದಿ ಅಂದ್ರೆ ಪ್ರಭುತ್ವಕ್ಕೆ ನಿಕೃಷ್ಟ । 164 ಕಿಮೀ ಕಾಲುವೆ ಮುಗಿದ್ರೂ 332 ಕಿಮೀ ಪೈಪ್ ಲೈನ್ ಆಗಿಲ್ಲಬಸವರಾಜ್ ಬಿ.ಜಿ.ಕೆರೆ

ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು

ಚಿತ್ರದುರ್ಗ ತಾಲೂಕಿನ ಗೋನೂರು ಕೆರೆಗೆ ಭದ್ರೆ ಹರಿದು ಬಂದಿರುವುದು ಇಡೀ ಸಾಮಾಜಿಕ ಜಾಲ ತಾಣವ ಆವರಿಸಿದೆ. ಭದ್ರಾ ಜಲಾಶಯದಿಂದ ಸರಿ ಸುಮಾರು 164 ಕಿಮೀ ಉದ್ದದ ಕಾಲುವೆ ದಾರಿ ಕ್ರಮಿಸಿ ಗೋನೂರು ಕೆರೆಗೆ ಭದ್ರೆ ಹರಿದು ಬಂದಿದ್ದಾಳೆ. ಅತ್ಯಂತ ನೋವಿನ ಸಂಗತಿ ಎಂದರು ಕೇವಲ 332 ಕಿಮೀ ಪೈಪಗಳ ಜೋಡಿಸಿ ಮೊಳಕಾಲ್ಮೂರಿಗೆ ನೀರು ಕೊಡಲು ಸಾಧ್ಯವಾಗಿಲ್ಲ. ಅರೆಬರೆ ಕಾಮಗಾರಿ ತಾಲೂಕಿನ ಬೆಂದೊಡಲ ಅಣಕಿಸುತ್ತಿದೆ. ಪ್ರಭುತ್ವದ ನಿಕೃಷ್ಟ ಮನೋಭಾವವ ಅನಾವರಣಗೊಳಿಸಿದೆ. ಯಾವುದೇ ನೀರಾವರಿ ಯೋಜನೆಗಳಲ್ಲಿ ಕಾಲುವೆ ಮೂಲಕ ನೀರು ತರುವುದು ಕಷ್ಟದ ಕೆಲಸ. ಭೂ ಸ್ವಾದೀನ, ಕಾಲುವೆಯಲ್ಲಿನ ಮಣ್ಣು ಸಾಗಾಣಿಕೆ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಆದರೆ ಕೊಳವೆ ಮಾರ್ಗದ ಮೂಲಕ ನೀರು ಒಯ್ಯುವುದು ಸುಲಭದ ಕೆಲಸ. ಇಂತಹ ಪ್ರಯೋಗಗಳು ಚಿತ್ರದುರ್ಗ ಜಿಲ್ಲೆಯಲ್ಲಿ ಈಗಾಗಲೇ ಯಶ ಕಂಡಿವೆ.

ಹರಿಹರ ಸಮೀಪದ ರಾಜನಳ್ಳಿ ಬಳಿ ತುಂಗ ಭದ್ರ ಜಲಾಶಯದಿಂದ ನೀರು ಎತ್ತಿ ಭರಮಸಾಗರ ಸೇರಿದಂತೆ ಒಟ್ಟು 43 ಕೆರೆಗಳಿಗೆ ನೀರು ಪೂರೈಕೆ ಮಾಡಲಾಗಿದೆ. 525 ಕೋಟಿ ರು. ವೆಚ್ಚದ ಈ ಯೋಜನೆ ಕೇವಲ ಎರಡು ವರ್ಷದಲ್ಲಿ ಪೂರ್ಣಗೊಳಿಸಲಾಗಿದೆ. ಮೊಳಕಾಲ್ಮೂರಿನ ಪರಿಸ್ಥಿತಿ ಕೇಳಿದರೆ ಆಕ್ರೋಶಗಳು ಬುಗಿಲೇಳುತ್ತವೆ.

ಮೊಳಕಾಲ್ಮೂರು ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 560 ಕೋಟಿ ರು. ವೆಚ್ಚ ಮಾಡಿ 53 ಕೆರೆಗಳ ತುಂಬಿಸಲಾಗುತ್ತಿದೆ. ಇದಕ್ಕಾಗಿ 168 ಕಿಮೀ ಎಂಎಸ್ ಪೈಪ್, 117 ಕಿಮೀ ಡಿಐ ಪೈಪು, 47 ಕಿಮೀ ಹೆಚ್ ಡಿಪಿ ಪೈಪ್ ಬಳಕೆ ಮಾಡಲಾಗುತ್ತಿದೆ. ಒಟ್ಟಾರೆ ವಿಧಾನಸಭೆ ವ್ಯಾಪ್ತಿಯಲ್ಲಿ 332 ಕಿಮೀ ಪೈಪ್ ಲೈನ್ ಕಾಮಗಾರಿ ಇದ್ದರೆ ಅದರಲ್ಲಿ ಕೇವಲ 190 ಕಿಮೀ ಮಾತ್ರ ಕಾಮಗಾರಿ ಆಗಿದೆ. ಮೊಳಕಾಲ್ಮುರಿಗೆ ನೀರು ಕೊಡುವುದ ಅದೆಷ್ಟೆ ನಿಕೃಷ್ಟವಾಗಿ ಕಾಣಲಾಗಿದೆ ಎಂಬುದು ಇಲ್ಲಿಯೇ ಅರ್ಥವಾಗುತ್ತದೆ.

ಆಕಾಶದತ್ತ ಕಣ್ಣಿಟ್ಟು ಮಳೆಗಾಗಿ ಹಂಬಲಿಸುವ ಮೊಳಕಾಲ್ಮೂರು ರೈತರು ತಮ್ಮ ಕೆರೆಗಳ ಒಡಲು ತುಂಬುವ ನೀರಿಗಾಗಿ ದಶಕದಿಂದಲೂ ಕಾದು ಕುಳಿತಿದ್ದರೂ ಸಾಧ್ಯವಾಗದೆ ಹೋಗಿದೆ. ರಾಜಕೀಯ ಇಚ್ಚಾಶಕ್ತಿ ಕೊರತೆ ಕಾರಣಕ್ಕೆ ತಾಲೂಕಿಗೆ ಭದ್ರೆ ಆಗಮನ ಯಾವಾಗ ಎನ್ನುವ ಪ್ರಶ್ನೆ ಬಿಸಿಲಿಗಿಂತಲೂ ಬಿರುಸಾಗಿ ಜನ ಮನವನ್ನು ಸುಡುತ್ತಿದೆ.

ಭದ್ರಾ ಮೇಲ್ದಂಡೆ ಯೋಜನೆಯಡಿ ಮೊಳಕಾಲ್ಮುರು ತಾಲೂಕಿಗೆ ಯಾವುದೇ ಬಗೆಯ ನೀರಾವರಿ ರೂಪಿಸಲಾಗಿಲ್ಲ. ಕೇವಲ ಕೆರೆಗಳ ತುಂಬಿಸಲಾಗುತ್ತಿದೆ. ಭದ್ರೆ ಕೊಟ್ಟಿದ್ದೇವೆ ನೋಡಿ ಎಂದು ಜನರ ಸಮಾಧಾನ ಪಡಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರ 2019ರಲ್ಲಿ ಯೋಜನೆಗೆ ಅಧಿಕೃತ ಮಂಜೂರಾತಿ ನೀಡಿದೆ. 2020ರಲ್ಲಿ ಅಗ್ರಿಮೆಂಟ್ ಕೂಡ ಆಗಿದೆ. ಶಂಕುಸ್ಥಾಪನೆ ನೆರವೇರಿ ವರ್ಷಗಳು ಉರುಳಿದರೂ ಕಾಮಗಾರಿಯ ವೇಗ ಆಮೆ ನಡಿಗೆಯಲ್ಲಿದೆ.

ಒಟ್ಟು 53 ಕೆರೆಗಳು ಯೋಜನೆಯ ವ್ಯಾಪ್ತಿಗೆ ಸೇರುತ್ತವೆ. ಒಟ್ಟು 0.9 ಟಿಎಂಸಿ ನೀರು ಹಂಚಿಕೆಯಾಗಿದ್ದು ಚಳ್ಳಕೆರೆ ಭಾಗದ 33 ಹಾಗೂ ಮೊಳಕಾಲ್ಮೂರು ತಾಲೂಕಿನ 20 ಕೆರೆಗಳಿಗೆ ನೀರು ತುಂಬಿಸುವುದು ಈ ಬೃಹತ್ ಯೋಜನೆಯ ಉದ್ದೇಶ. ಮಾಡಿದಷ್ಟು ನೀಡು ಭಿಕ್ಷೆ ಎಂಬ ಹಟ್ಟಿ ತಿಪ್ಪೇಶನ ಕೆರೆಗಳಿಗೆ ನೀರು ಕೊಡಲು ಮೀನ ಮೇಷ ಎಣಿಸಲಾಗುತ್ತಿದೆ.

ಸಾರ್ವಜನಿಕ ವೇದಿಕೆಗಳಲ್ಲಿ ಭದ್ರೆಯ ಕುರಿತು ಭರವಸೆಗಳನ್ನು ನೀಡುವ ಜನಪ್ರತಿನಿಧಿಗಳು ಯೋಜನೆಯ ಅನುಷ್ಠಾನದ ವೇಗ ಹೆಚ್ಚಿಸುವ ವಿಚಾರದಲ್ಲಿ ತೋರುತ್ತಿರುವ ನಿರಾಸಕ್ತಿ ತಾಲೂಕಿನ ಜನತೆಯ ಪಾಲಿಗೆ ಶಾಪವಾಗಿ ಪರಿಣಮಿಸಿದೆ .

ಭದ್ರೆ ನೀರು ನಮ್ಮ ಕೆರೆಗಳಿಗೆ ಬಂದರೆ ನಮ್ಮ ಬದುಕೇ ಬದಲಾಗುತ್ತದೆ. ಯೋಜನೆ ಮಂಜೂರಾಗಿ ದಶಕಗಳಾದರೂ ಕಾಮಗಾರಿ ಪೂರ್ಣಗೊಳ್ಳದಿರುವುದು ಬೇಸರ ತಂದಿದೆ. ಸರ್ಕಾರ ಮತ್ತು ಅಧಿಕಾರಿಗಳು ತ್ವರಿತವಾಗಿ ಕಾಮಗಾರಿ ಮುಗಿಸಿ ಕೆರೆಗಳಿಗೆ ನೀರು ಹರಿಸಬೇಕು.

-ಸಿ.ನಾಗರಾಜ, ಭದ್ರಾ ಮೇಲ್ದಂಡೆ ಸಮಗ್ರ ನೀರಾವರಿ ಹೋರಾಟ ಸಮಿತಿ ತಾಲೂಕು ಅಧ್ಯಕ್ಷಯೋಜನೆಯಡಿ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಅಗತ್ಯ ತಾಂತ್ರಿಕ ಹಾಗೂ ಆಡಳಿತಾತ್ಮಕ ಕ್ರಮಗಳನ್ನು ಕೈಗೊಂಡು ಬಾಕಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು.ರೈತರಿಗೆ ಯೋಜನೆಯ ಪ್ರಯೋಜನ ತಲುಪಿಸುವುದು ಇಲಾಖೆಯ ಮುಖ್ಯ ಆದ್ಯತೆಯಾಗಿದೆ.

-ಎಚ್.ಎಂ ಚಂದ್ರಶೇಖರಯ್ಯ, ಕಾರ್ಯಪಾಲಕ ಇಂಜಿನಿಯರ್ ಭದ್ರಾ ಮೇಲ್ದಂಡೆ ಯೋಜನೆ ಚಳ್ಳಕೆರೆ ವಿಭಾಗ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಖಂಡ್ರೆ ಕಮಾಲ್‌
ಮಳೆಗಾಲ ಮುಗಿಯುವ ಮುನ್ನವೇ ಹಲವು ಜಿಲ್ಲೇಲಿ ತಾಪಮಾನ ಏರಿಕೆ