ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ-2026ರ ಸಂಬಂಧ ಹಕ್ಕು ಮತ್ತು ಆಕ್ಷೇಪಣೆಗಳ ಕುರಿತು ರಾಜಕೀಯ ಪಕ್ಷಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮತದಾರರ ಪಟ್ಟಿಯಲ್ಲಿನ ಲೋಪದೋಷಗಳನ್ನು ಸರಿಪಡಿಸುವ ಪ್ರಕ್ರಿಯೆಗೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಬೂತ್ ಮಟ್ಟದ ಏಜೆಂಟರು ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಆಯೋಗದ ವೇಳಾಪಟ್ಟಿಯಂತೆ ಸೆ.6 ರಿಂದ ವಿಚಾರಣೆಗಳು ಆರಂಭಗೊಂಡಿದ್ದು, ಅ.12ರವರೆಗೆ ಸಹಾಯಕ ಮತದಾರರ ನೋಂದಣಾಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ. ಈ ಹಂತದಲ್ಲಿ ಕಾರ್ಯನಿರ್ವಹಿಸಲು ಜಿಲ್ಲೆಯಾದ್ಯಂತ 102 ಸಹಾಯಕ ಮತದಾರರ ನೋಂದಣಾಧಿಕಾರಿಗಳು ಮತ್ತು ಹೆಚ್ಚುವರಿ ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.ಮತದಾರರ ನೋಂದಣಿ ಹಾಗೂ ಪರಿಶೀಲನಾ ನಮೂನೆಗಳಲ್ಲಿ ನಮೂದಿಸಿರುವ ಹೆಸರು, ತಂದೆಯ ಹೆಸರು ಹಾಗೂ ಆಧಾರ್ ಕಾರ್ಡ್ ಸೇರಿದಂತೆ ಇತರೆ ದಾಖಲೆಗಳಲ್ಲಿನ ವಿವರಗಳ ನಡುವೆ ವ್ಯತ್ಯಾಸಗಳು ಕಂಡುಬರುತ್ತಿವೆ. ನಿಯಮಾವಳಿ ಪ್ರಕಾರ ಕನಿಷ್ಠ ಶೇ.60ರಷ್ಟು ಹೆಸರು ಹೊಂದಾಣಿಕೆಯಾಗದಿದ್ದಲ್ಲಿ ತಾಂತ್ರಿಕವಾಗಿ ತಡೆ ಹಿಡಿಯಲಾಗುತ್ತದೆ. ಇಂತಹ ವ್ಯತ್ಯಾಸಗಳಿರುವ ಪ್ರಕರಣಗಳನ್ನು ಗುರುತಿಸಿ ಈಗಾಗಲೇ ತಾಲ್ಲೂಕು ಕಚೇರಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟಕ್ಕೆ ಪಟ್ಟಿ ಕಳುಹಿಸಲಾಗಿದೆ. ಚಿತ್ರದುರ್ಗ ನಗರ ವ್ಯಾಪ್ತಿಯಲ್ಲೇ ಇಂತಹ ಸುಮಾರು 30 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಕಂಡುಬಂದಿದ್ದು, ಇವುಗಳ ತಿದ್ದುಪಡಿಗೆ ಕ್ರಮ ವಹಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ನಮೂನೆ-6 ರಡಿ 18,000 ಯುವ ಮತದಾರರನ್ನು ನೋಂದಾಯಿಸುವ ಗುರಿ ಹೊಂದಿದ್ದು, ಇದುವರೆಗೆ 9,887 ಅರ್ಜಿಗಳು ಸ್ವೀಕೃತವಾಗಿವೆ. ಇನ್ನು ಉಳಿದಿರುವ 5,000ಕ್ಕೂ ಹೆಚ್ಚು ಯುವ ಮತದಾರರನ್ನು ಸೇರ್ಪಡೆಗೊಳಿಸಲು ಕಾಲೇಜುಗಳಲ್ಲಿ ವಿಶೇಷ ಜಾಗೃತಿ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದರು.