ಲಕ್ಷ್ಮೇಶ್ವರ: ತಂಬಾಕು ಸೇವನೆಯಿಂದ ಮನುಷ್ಯನ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮಗಳು ಬೀರುತ್ತಿದ್ದು, ತಂಬಾಕಿನಿಂದ ವ್ಯಕ್ತಿಯ ಮಾನಸಿಕ ಖಿನ್ನತೆಯು ಉಂಟಾಗಬಹುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸುಭಾಷ ದಾಯಗೊಂಡ ಹೇಳಿದರು.
ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು ಆವರಿಸಿಕೊಳ್ಳುತ್ತವೆ. ತಂಬಾಕಿನಿಂದ ಮಾಡಿದ ಉತ್ಪನ್ನಗಳಾದ ಗುಟ್ಕಾ, ಬೀಡಿ, ಸಿಗರೇಟು ಇತ್ಯಾದಿಗಳ ಚಟಕ್ಕೆ ಬಲಿಯಾಗುತ್ತಿರುವ ಯುವ ಜನಾಂಗ ಎಚ್ಚೆತ್ತುಕೊಂಡು ಇವುಗಳಿಂದ ದೂರ ಇರಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ವಕೀಲ ಹಾಗೂ ಬಾಲ ನ್ಯಾಯ ಮಂಡಳಿ ಸದಸ್ಯ ಪಿ.ಎಂ. ವಾಲಿ ಮಾತನಾಡಿ, ತಂಬಾಕದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಹಾಗೂ ತಂಬಾಕು ನಿಷೇಧ ಕಾಯ್ದೆ ಬಗ್ಗೆ ಹಾಗೂ ಸೆಕ್ಷನ್ ಬಗ್ಗೆ ಹಾಗೂ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಹಾಗೂ ಇನ್ನಿತರ ವಿಷಯದ ಬಗ್ಗೆ ಮಾಹಿತಿಯನ್ನು ನೀಡಿದರು. ಡಾಕ್ಟರ್ ಪ್ರವೀಣ್‌ಕುಮಾರ್ ಸಜ್ಜನ್ ಮಾತನಾಡಿದರು. ಎಫ್.ಬಿ. ಹೂಗಾರ್ ಪ್ರಸ್ತಾವಕವಾಗಿ ಮಾತನಾಡಿ, ಪ್ರತಿ ವರ್ಷ ತಂಬಾಕ ಸೇವನೆಯಿಂದ ಭಾರತದಲ್ಲಿ ೧೦ ಲಕ್ಷ ಜನ ಸಾವನ್ನಪ್ಪುತ್ತಾರೆ ಪ್ರತಿ ೮ ಸೆಕೆಂಡಿಗೆ ಒಬ್ಬರು ಮರಣವನ್ನು ಹೊಂದುತ್ತಾರೆ. ಕರ್ನಾಟಕದಲ್ಲಿ ೨೮ ಶೇಕಡಾ ಜನರು ತಂಬಾಕ ಸೇವನೆಯನ್ನು ಮಾಡುತ್ತಾರೆ ಎಂದು ಹೇಳಿದ ಅವರು, ತಂಬಾಕು ಸೇವನೆ ಮುಂಜಾಗ್ರತೆ ಕುರಿತು ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಮಂಜುಳಾ ಹೂಗಾರ್, ಶಿರಹಟ್ಟಿ ಡಿಓಟಿ ಎಫ್.ಸಿ. ಹೊಸಮಠ, ಗಂಗಾಧರ್ ಬಣಗಾರ, ರೇಣುಕಾ ಡೋಂಬರ್, ಸುಧಾ ಪಫ್ತಿ ಹಾಗೂ ಸಾರ್ವಜನಿಕರು ಆಶಾ ಕಾರ್ಯಕರ್ತರು ಆರೋಗ್ಯ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು.