ಮಳೆ ಬಂದರೆ ಹೊಳೆಯಾಗುವ ಭಟ್ಕಳದ ಸಂಶುದ್ದೀನ್‌ ವೃತ್ತ

KannadaprabhaNewsNetwork |  
Published : Jun 01, 2025, 02:47 AM IST
ಪೊಟೋ ಪೈಲ್ : 31ಬಿಕೆಲ್1 | Kannada Prabha

ಸಾರಾಂಶ

ಭಟ್ಕಳ ಪಟ್ಟಣದ ಹೃದಯಭಾಗವಾದ ಸಂಶುದ್ದೀನ್‌ ವೃತ್ತದ ಹೆದ್ದಾರಿ ದೊಡ್ಡ ಮಳೆ ಬಂತೆಂದರೆ ಹೊಳೆಯಾಗಿ ಜನ ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ಭಟ್ಕಳ; ಪಟ್ಟಣದ ಹೃದಯಭಾಗವಾದ ಸಂಶುದ್ದೀನ್‌ ವೃತ್ತದ ಹೆದ್ದಾರಿ ದೊಡ್ಡ ಮಳೆ ಬಂತೆಂದರೆ ಹೊಳೆಯಾಗಿ ಜನ ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ಗುರುವಾರ ತಡರಾತ್ರಿ ಸುರಿದ ಭಾರೀ ಮಳೆಗೆ ಸಂಶುದ್ದೀನ್‌ ವೃತ್ತದಲ್ಲಿ ಭಾರೀ ಪ್ರಮಾಣದಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಪರದಾಡುವಂತಾಯಿತು. ವೃತ್ತದಲ್ಲಿ ಕಳೆದ ಹಲವು ವರ್ಷಗಳಿಂದ ಮಳೆಗಾಲದ ಸಂದರ್ಭದಲ್ಲಿ ನೀರು ನಿಂತು ಹೊಳೆಯಾಗುತ್ತಿದ್ದರೂ ಸಮಸ್ಯೆ ಬಗೆಹರಿಸಲು ಸಾಧ್ಯವಾಗದೇ ಇರುವುದು ವಿಪರ್ಯಾಸ. ಗುರುವಾರ ತಡರಾತ್ರಿ ವೃತ್ತದಲ್ಲಿ ಹೊಳೆ ಸೃಷ್ಟಿಯಾಗಿದ್ದರಿಂದ ವಾಹನ ಸವಾರರಿಗೆ ಯಾವ ಕಡೆ ಹೋಗುವುದು ಎನ್ನುವಂತಾಗಿತ್ತು. ಕೆಲವು ವಾಹನದವರಂತೂ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ನೀರು ಕಡಿಮೆಯಾದ ನಂತರ ಸಂಚಾರಕ್ಕೆ ಮುಂದಾದರು.

ಸಾಗರ ರಸ್ತೆಯ ಕಾಂಕ್ರಿಟೀಕರಣ ಕಾಮಗಾರಿ ನಡೆಯುತ್ತಿದೆ. ಅಲ್ಲಿ ಸಮರ್ಪಕ ಗಟಾರ ಇಲ್ಲದೇ ಇರುವುದರಿಂದ ಮಳೆ ನೀರು ವೃತ್ತಕ್ಕೆ ಬಂದು ನಿಲ್ಲುತ್ತಿದೆ. ಇಲ್ಲಿಂದಲೂ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲ. ವರ್ಷಂಪ್ರತಿ ಮಳೆಗಾಲದಲ್ಲಿ ಸಂಶುದ್ದೀನ್ ವೃತ್ತ ಹೊಳೆಯಾಗುವ ದೃಶ್ಯ ಎಲ್ಲರಿಗೂ ಗೊತ್ತಿದೆ. ಆದರೆ ಹಲವು ವರ್ಷದ ಸಮಸ್ಯೆ ಬಗೆಹರಿಸಲು ಯಾರಿಂದಲೂ ಸಾಧ್ಯವಾಗದೇ ಇರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೃತ್ತದಲ್ಲಿ ಚತುಸ್ಪಥ ಹೆದ್ದಾರಿ ಅಗಲೀಕರಣವೂ ಆಗಿಲ್ಲ. ಮೊದಲು ಇಲ್ಲಿ ಪ್ಲೈಓವರ್ ನಿರ್ಮಾಣ ಎಂದು ಹೇಳಲಾಗಿದ್ದರೂ ಸಹ ಕೊನೆಗೆ ಇದ್ದ ಹೆದ್ದಾರಿಯನ್ನೇ ಅಗಲೀಕರಣ ಮಾಡಿ ಚತುಸ್ಪಥ ಹೆದ್ದಾರಿ ನಿರ್ಮಾಣ ಮಾಡುವ ನಿರ್ಧಾರಕ್ಕೆ ಬರಲಾಗಿತ್ತು. ಆದರೆ ಇಲ್ಲಿ ಪ್ಲೈಓವರೂ ಇಲ್ಲ. ಇದ್ದ ರಸ್ತೆ ಅಗಲೀಕರಣವೂ ಇಲ್ಲ ಎಂಬಂತಾಗಿದೆ.

ರಂಗೀಕಟ್ಟೆಯ ನೀರು ಕೋಕ್ತಿ ಬೈಲಿನ ಮೂಲಕ ಕೋಕ್ತಿ ಕೆರೆ ಸೇರಬೇಕಾಗಿದೆ. ಈಗ ಸಂಪೂರ್ಣ ಮನೆಗಳನ್ನು ಕಟ್ಟಿಕೊಂಡು ಮನೆಗಳ ಅಕ್ಕಪಕ್ಕದಲ್ಲಿ ಚರಂಡಿ ಕೂಡಾ ಬಿಡದೇ ಇರುವುದಲ್ಲದೇ ಇರುವ ಚರಂಡಿಯನ್ನು ಪುರಸಭೆ ಸ್ವಚ್ಛಗೊಳಿಸದಿರುವುದೇ ನೀರು ಸರಾಗವಾಗಿ ಹರಿದು ಹೋಗದಿರಲು ಕಾರಣವಾಗಿದೆ.

ತಕ್ಷಣ ಪುರಸಭಾ ಅಧಿಕಾರಿಗಳು ಕೋಕ್ತಿ ಬೈಲಿನಿಂದ ಕೋಕ್ತಿ ಕೆರೆಗೆ ಹೋಗುವ ಚರಂಡಿಯನ್ನು ಸ್ವಚ್ಛಗೊಳಿಸಿದಲ್ಲಿ ರಂಗೀಕಟ್ಟೆಯಲ್ಲಿ ಭಾರೀ ಮಳೆ ಬಂದರೂ ನೀರು ಸರಾಗವಾಗಿ ಹರಿದು ಹೋಗಿ ಸಾರ್ವಜನಿಕರಿಗಾಗುವ ತೊಂದರೆ ತಪ್ಪುತ್ತದೆ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ.

ಮಳೆಗಾಲದಲ್ಲಿ ಪಟ್ಟಣದ ಸಂಶುದ್ದೀನ್‌ ವೃತ್ತ ಮತ್ತು ರಂಗಿನಕಟ್ಟೆ ಹೆದ್ದಾರಿ ಹೊಳೆಯಾಗುವ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಬೇಕಿದೆ. ಇದೀಗ ಮಳೆ ಆರಂಭ ಮಾತ್ರವಾಗಿರುವುದರಿಂದ ಹೆದ್ದಾರಿ ಪ್ರಾಧಿಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಈ ಎರಡೂ ಪ್ರದೇಶದಲ್ಲಿ ಮಳೆ ನೀರು ನಿಲ್ಲದಂತೆ ತುರ್ತು ಗಮನ ಹರಿಸಬೇಕು. ಇಲ್ಲದಿದ್ದಲ್ಲಿ ವರ್ಷಂಪ್ರತಿಯಂತೆ ಈ ಎರಡೂ ಪ್ರದೇಶದಲ್ಲಿ ಜನರ ಮತ್ತು ವಾಹನಿಗರ ಗೋಳು ತಪ್ಪಿದ್ದಲ್ಲ.

PREV

Recommended Stories

ಯೂರಿಯಾ: ರೈತ ಬಾಂಧವರಲ್ಲಿ ಅತಂಕ ಬೇಡ
ಪಂಚಪೀಠ ನಿರ್ಣಯ ಒಪ್ಪಲ್ಲ, ರಂಭಾಪುರಿ ಶ್ರೀಗಳ ಮನಸ್ಥಿತಿ ಕಲುಷಿತ: ವಚನಾನಂದ ಶ್ರೀ