ಜಿಲ್ಲೆಯಲ್ಲಿ ಅಪರಾಧ ಕೃತ್ಯಗಳ ವಿರುದ್ಧ ಜಂಟಿ ಕಾರ್ಯಾಚರಣೆ: ನೂತನ ಪೊಲೀಸ್‌ ಕಮಿಷನರ್‌ ಸುಧೀರ್‌ ರೆಡ್ಡಿ ಖಡಕ್‌ ಮಾತು

KannadaprabhaNewsNetwork |  
Published : Jun 01, 2025, 02:46 AM IST
ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಸುಧೀರ್‌ ಕುಮಾರ್‌ ರೆಡ್ಡಿ ಮಾತನಾಡುತ್ತಿರುವುದು  | Kannada Prabha

ಸಾರಾಂಶ

ಮಂಗಳೂರಿನ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ಶನಿವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರ ಜತೆ ಮಾತನಾಡಿದ ಅವರು, ಕ್ರಿಮಿನಲ್‌ಗಳು ಜಿಲ್ಲೆಯ ಯಾವುದೇ ಮೂಲೆಯಲ್ಲಿ ಯಾವುದೇ ರೀತಿಯ ಅಪರಾಧ ಕೃತ್ಯ ಎಸಗಿದರೂ ಎಸ್ಪಿ, ಡಿಸಿಪಿಗಳ ಜತೆ ಜಂಟಿ ಕಾರ್ಯಾಚರಣೆ ಮೂಲಕ ಅಪರಾಧಿಗಳಿಗೆ ತಕ್ಕ ಉತ್ತರ ನೀಡಲಾಗುವುದು. ಈ ಕಾರ್ಯಾಚರಣೆ ಇತರ ಅಕ್ರಮ ಚಟುವಟಿಕೆಗಳಿಗೂ ಅನ್ವಯವಾಗಲಿದೆ ಎಂದವರು ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ದ.ಕ. ಜಿಲ್ಲೆಯ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಯಾವುದೇ ರೀತಿಯ ಅಪರಾಧ ಕೃತ್ಯ ಅಥವಾ ಅಕ್ರಮ ಚಟುವಟಿಕೆಗಳು ನಡೆದಾಗ ಅದನ್ನು ಜಂಟಿ ಕಾರ್ಯಾಚರಣೆಯ ಮೂಲಕ ನಿಭಾಯಿಸಲಿದ್ದೇವೆ ಎಂದು ಮಂಗಳೂರಿನ ನೂತನ ಪೊಲೀಸ್‌ ಕಮಿಷನರ್‌ ಸುಧೀರ್‌ ಕುಮಾರ್‌ ರೆಡ್ಡಿ ಹೇಳಿದ್ದಾರೆ.

ಮಂಗಳೂರಿನ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ಶನಿವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರ ಜತೆ ಮಾತನಾಡಿದ ಅವರು, ಕ್ರಿಮಿನಲ್‌ಗಳು ಜಿಲ್ಲೆಯ ಯಾವುದೇ ಮೂಲೆಯಲ್ಲಿ ಯಾವುದೇ ರೀತಿಯ ಅಪರಾಧ ಕೃತ್ಯ ಎಸಗಿದರೂ ಎಸ್ಪಿ, ಡಿಸಿಪಿಗಳ ಜತೆ ಜಂಟಿ ಕಾರ್ಯಾಚರಣೆ ಮೂಲಕ ಅಪರಾಧಿಗಳಿಗೆ ತಕ್ಕ ಉತ್ತರ ನೀಡಲಾಗುವುದು. ಈ ಕಾರ್ಯಾಚರಣೆ ಇತರ ಅಕ್ರಮ ಚಟುವಟಿಕೆಗಳಿಗೂ ಅನ್ವಯವಾಗಲಿದೆ ಎಂದವರು ಹೇಳಿದರು.

ಈ ಸಂದರ್ಭ ಎಸ್ಪಿ ಡಾ. ಅರುಣ್‌ ಕುಮಾರ್‌ ಮಾತನಾಡಿ, ಅದಕ್ಕಾಗಿಯೇ ನಾವು ಜತೆಯಲ್ಲಿಯೇ ಇಲ್ಲಿದ್ದೇವೆ. ಜತೆಯಾಗಿಯೇ ಕಾರ್ಯಾಚರಣೆ ನಡೆಸಲಿದ್ದೇವೆ ಎಂದರು.

ಜಾಲತಾಣಗಳಲ್ಲಿ ಪ್ರಚೋದನೆ ಬೇಡ:

ಕೋಮು ದ್ವೇಷ ಭಾಷಣ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿ ಪೋಸ್ಟ್‌ಗಳನ್ನು ಹಾಕುತ್ತಿರುವವರ ಕುರಿತು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಸುಧೀರ್‌ ಕುಮಾರ್‌ ರೆಡ್ಡಿ, ಯಾರದ್ದೇ ಯಾವ ಮಾತೂ ಅಪರಾಧ ಕೃತ್ಯಗಳಿಗೆ ಪ್ರಚೋದನೆ ನೀಡುವಂತಿರಬಾರದು. ವಾಕ್‌ ಸ್ವಾತಂತ್ರ್ಯ ಮತ್ತು ಅಪರಾಧ ಕೃತ್ಯಗಳಿಗೆ ಜನರನ್ನು ಪ್ರಚೋದಿಸುವ ಮಾತುಗಳ ನಡುವೆ ಸ್ಪಷ್ಟವಾದ ಅಂತರವಿದೆ. ಪ್ರಚೋದನೆ ನೀಡುವ ರೀತಿಯಲ್ಲಿ ಕಾನೂನಿಗೆ ವಿರುದ್ಧವಾಗಿ ಮಾತನಾಡಿದರೆ ಸಿಆರ್‌ಪಿಸಿ, ಐಪಿಸಿ ಕಾನೂನುಗಳಿವೆ. ಕಾನೂನಿನಲ್ಲಿ ಈ ಬಗ್ಗೆ ಕ್ರಮಕ್ಕೆ ಸಾಕಷ್ಟು ಅವಕಾಶಗಳಿದ್ದು, ಇಲಾಖೆ ಸೂಕ್ತ ಕ್ರಮ ವಹಿಸಲಿದೆ ಎಂದು ಹೇಳಿದರು.

ಸಿಬ್ಬಂದಿ ಬದಲಾವಣೆ ಇಲ್ಲ:

ಠಾಣೆಗಳಲ್ಲಿ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ತಳ ಹಂತದ ಪೊಲೀಸ್‌ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಯ ಅಗತ್ಯವಿರುವ ಬೇಡಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುಧೀರ್‌ ರೆಡ್ಡಿ, ಎಲ್ಲ ಅಧಿಕಾರಿ, ಸಿಬ್ಬಂದಿ ಉತ್ತಮವಾಗಿದ್ದಾರೆ. ಯಾರೇ ತಮ್ಮ ಕರ್ತವ್ಯದಲ್ಲಿ ವಿಫಲ ಆಗಿದ್ದಾರೆ ಎಂದರೆ ಅದರ ಜವಾಬ್ದಾರಿಯನ್ನು ನಾನು ವಹಿಸುತ್ತೇನೆ. ನಮ್ಮ ಮಾರ್ಗದರ್ಶನವನ್ನು ಸರಿಯಾದ ದಿಸೆಯಲ್ಲಿ ಬಳಸಿಕೊಂಡು ಅವರು ಕಾರ್ಯ ನಿರ್ವಹಿಸಿದಾಗ ಯಾವುದೇ ತೊಂದರೆ ಆಗದು ಎಂದವರು ಹೇಳಿದರು.

ನೇರವಾಗಿ ದೂರು ನೀಡಬಹುದು:

ಪೊಲೀಸ್‌ ಕಮಿಷನರ್‌ ನಡೆಸುತ್ತಿದ್ದ ಫೋನ್‌ ಇನ್‌ ಕಾರ್ಯಕ್ರಮ ಮತ್ತೆ ಪುನರಾರಂಭ ಆಗಲಿದೆಯೇ ಎಂಬ ಪ್ರಶ್ನೆಗೆ, ಯಾವುದೇ ದೂರನ್ನು ಸಾರ್ವಜನಿಕರು ನೇರವಾಗಿ ನಮಗೆ ತರಬಹುದು. ಮಾಧ್ಯಮದ ಮೂಲಕ ಬಂದ ದೂರನ್ನೂ ಪರಿಗಣಿಸಲಾಗುವುದು. ಯಾವುದೇ ಅಪರಾಧ ಪ್ರಕರಣಗಳು ನಡೆದಾಗಲೂ ಹಿಂದೆಯೂ ತನಿಖೆ ಆಗಿದೆ. ಮುಂದೆಯೂ ಆಗಲಿದೆ. ನಮ್ಮ ಕೆಲಸವೇ ಪೊಲೀಸಿಂಗ್‌ ಮಾಡುವಂತದ್ದು. ಅದನ್ನು ನಾವು ನಿಭಾಯಿಸುತ್ತೇವೆ ಎಂದು ಅವರು ಹೇಳಿದರು.

ಡಿಸಿಪಿ ಸಿದ್ದಾರ್ಥ್‌ ಗೋಯಲ್‌ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!