ಅರಸೀಕೆರೆ: ಶಿಕ್ಷಣದ ಜತೆಗೆ ಸಂಸ್ಕಾರ ಹಾಗೂ ನಯ, ವಿನಯ ಗುಣಗಳನ್ನು ಬಾಲ್ಯದಿಂದಲೇ ಮಕ್ಕಳಿಗೆ ತಂದೆ- ತಾಯಂದಿರು ನೀಡಿದರೆ ಪ್ರತಿ ಮಗುವೂ ಸುಸಂಸ್ಕೃತ ಪ್ರಜೆಯಾಗುವುದರಲ್ಲಿ ಸಂದೇಹವಿಲ್ಲ ಎಂದು ಹಾಸನ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶಂಭುನಾಥ ಸ್ವಾಮೀಜಿ ಹೇಳಿದರು.
ಮಕ್ಕಳ ಅಂಕ ಪಟ್ಟಿಯಲ್ಲಿ ಹೆಚ್ಚಿನ ಫಲಿತಾಂಶ ನಿರೀಕ್ಷಿಸುವ ಪೋಷಕರು, ಅದೇ ರೀತಿ ಮಕ್ಕಳಿಗೆ ಸಂಸ್ಕಾರದ ಗುಣಗಳನ್ನು ಬೆಳೆಸಲು ತೋರದೆ ಇರುವುದು ಭವಿಷ್ಯದಲ್ಲಿ ಮಕ್ಕಳ ಬೆಳವಣಿಗೆಗೆ ಕಂಟಕವಾಗುವುದು. ತಂದೆ- ತಾಯಿ ಹಾಗೂ ಗುರು, ಹಿರಿಯರಲ್ಲಿ ಗೌರವ ಭಾವ ಕಾಣದೆ ಪರಿತಪಿಸುವುದು ಬೇಡವೆಂದರೆ ಪೋಷಕರು ಮಕ್ಕಳಿಗೆ ಶಿಕ್ಷಣಕ್ಕೆ ನೀಡಿದಷ್ಟೇ ಮಹತ್ವವನ್ನು ಸಂಸ್ಕಾರಯುತ ನಡೆ, ನುಡಿ ಜೀವನದ ಮೌಲ್ಯವನ್ನು ತಿಳಿಸಿಕೊಡುವಲ್ಲಿಯೂ ಕೊಡಬೇಕು ಎಂದು ಕಿವಿ ಮಾತು ಹೇಳಿದರು.
ಆದಿಚುಂಚನಗಿರಿ ಆದಿಹಳ್ಳಿ ಶಾಖಾ ಮಠದ ಶಿವಪುತ್ರನಾಥ ಸ್ವಾಮೀಜಿ ಮಾತನಾಡಿ, ಭೈರವೈಕ್ಯ ಪೂಜ್ಯ ಬಾಲಗಂಗಾಧರನಾಥ ಸ್ವಾಮೀಜಿಗಳ ಮಹಾ ಸಂಕಲ್ಪದಂತೆ ಹಾಸನ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶಂಭುನಾಥ ಸ್ವಾಮೀಜಿಗಳು ಹಾಸನ ಹಾಗೂ ಕೊಡಗು ಜಿಲ್ಲೆ ವ್ಯಾಪ್ತಿಯಲ್ಲಿ ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕ, ಸಾಮಾಜಿಕ, ಪರಿಸರ, ಆರೋಗ್ಯ ಹೀಗೆ ಹಲವು ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಸೇವೆ ಮತ್ತು ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರಯುತ ಜೀವನದ ಮೌಲ್ಯದ ತಿಳಿಸಿಕೊಡುವ ಕಾಯಕ ಮಾಡುತ್ತಿರುವುದು ನಮ್ಮೆಲ್ಲರಿಗೂ ಆದರ್ಶವಾಗಿದೆ ಎಂದು ಸಂತಸ ಪಟ್ಟರು.ಸಮಾರಂಭಕ್ಕೆ ಮುನ್ನ ಆದಿಲಕ್ಷ್ಮೀ ಅಮ್ಮನವರ ಉತ್ಸವ ಮೂರ್ತಿಗೆ ವಿಶೇಷ ಪೂಜೆಯನ್ನು ಸ್ವಾಮೀಜಿ ನಡೆಸಿಕೊಟ್ಟರು. ಮಹಾ ಮಂಗಳಾರತಿ ಬಳಿಕ ಭಕ್ತಾದಿಗಳಿಗೆ ತೀರ್ಥ ಪ್ರಸಾದ ನೀಡಲಾಯಿತು.