ಯಲಹಂಕ ಕ್ಷೇತ್ರದ ಹೊಸಹಳ್ಳಿಪಾಳ್ಯ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಬೆಂಗಳೂರು ಹಾಲು‌ ಒಕ್ಕೂಟದ ನಿರ್ದೇಶಕ ಸತೀಶ್ ಕಡತನಮಲೆ ಅವರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಯಲಹಂಕ

ಬಮೂಲ್‌ನಿಂದ ಸಿಗುವ ಅನುದಾನ ಮತ್ತು ಸೌಲಭ್ಯಗಳನ್ನು ಸದುಪಯೋಗಪಡಿಸಿ ಕೊಳ್ಳುವ ಮೂಲಕ ಹಾಲು ಉತ್ಪಾದಕ ರೈತರು ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಬೇಕು ಎಂದು ಬೆಂಗಳೂರು ಹಾಲು‌ ಒಕ್ಕೂಟದ ನಿರ್ದೇಶಕ ಸತೀಶ್ ಕಡತನಮಲೆ ಸಲಹೆ ನೀಡಿದರು.

ಯಲಹಂಕ ಕ್ಷೇತ್ರದ ಹೊಸಹಳ್ಳಿಪಾಳ್ಯ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರು ಮತ್ತು ಆಡಳಿತ‌ ಮಂಡಳಿ ಸದಸ್ಯರಿಂದ ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿದ ಅವರು ಒಕ್ಕೂಟದ ವ್ಯಾಪ್ತಿಯಲ್ಲಿ ಹಾಲಿನ ಉತ್ಪಾದನೆಯ ಹೆಚ್ಚಳ, ಉತ್ತಮ ಗುಣಮಟ್ಟದ ಹಾಲು ಶೇಖರಣೆ, ಸಂಘಗಳಲ್ಲಿ ಲೆಕ್ಕ ಪುಸ್ತಕಗಳ ಅಚ್ಚುಕಟ್ಟಾದ ನಿರ್ವಹಣೆ ಮಾಡುವುದು ಮುಂತಾದ ವಿಷಯಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದರು.

ಹಾಲು ಉತ್ಪಾದಕ ರೈತರು ತಮ್ಮ ರಾಸುಗಳ ತಳಿ ಅಭಿವೃದ್ಧಿ, ಹೆಚ್ಚಿನ ಹಾಲು ಉತ್ಪಾದನೆಗೆ ಪ್ರಾಮುಖ್ಯತೆ ನೀಡಬೇಕು, ಈ ದಿಸೆಯಲ್ಲಿ ಪಶು ಆಹಾರವನ್ನು ಹಾಲಿನ ಉತ್ಪಾದನೆಗೆ ತಕ್ಕಂತೆ ನೀಡಬೇಕು ಮತ್ತು ಪ್ರತಿದಿನ ಖನಿಜಾಂಶಗಳ ಮಿಶ್ರಣವನ್ನು ಬಳಸಬೇಕು. ಹಾಲು ಉತ್ಪಾದಕರ ಶ್ರೇಯೋಭಿವೃದ್ಧಿಗಾಗಿ ಬಿಡಿಸಿಸಿ ಬ್ಯಾಂಕ್ ನಿಂದ ಸಾಲ ಸೌಲಭ್ಯವಿದ್ದು, ಇದರ ಸದುಪಯೋಗವನ್ನು ಹಾಲು ಉತ್ಪಾದಕರು ಪಡೆದುಕೊಳ್ಳುವ ಮೂಲಕ ಹೆಚ್ಚಿನ ಆದಾಯ ಗಳಿಸುವಂತಾಗಬೇಕು ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಹೊಸಹಳ್ಳಿ ಪಾಳ್ಯ ಹಾಲು ಉತ್ಪಾದಕರ ಸಹಕಾರ ಸಂಘದ ನೂತ‌ನ ಅಧ್ಯಕ್ಷ ನವಾನಂದ, ನಿರ್ದೇಶಕರಾದ ರೇವಣ್ಣ, ಸಿದ್ದಗಂಗಪ್ಪ, ಚಂದ್ರಕಾಂತ್, ಲಕ್ಷ್ಮಮ್ಮ, ನಾಗರಾಜು, ಬಸವರಾಜು, ಸಿದ್ದಗಂಗಮ್ಮ, ಮುನಿರತ್ನಮ್ಮ, ಕಾಂತರಾಜು, ಹೆಸರಘಟ್ಟ ರೈತರ ಸೇವಾ ಸಹಕಾರ ಸಂಘದ ನಿರ್ದೇಶಕ ಹನಿಯೂರು ಕೃಷ್ಣಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀನಿವಾಸ್. ನಯನ್ ಕುಮಾರ್, ಶ್ರೀನಿವಾಸ್ ಸೇರಿ ಶಿಬಿರ ಕಚೇರಿಯ ಅಧಿಕಾರಿಗಳು ಹಾಗೂ ಗ್ರಾಮಸ್ಥರಿದ್ದರು.