ಬ್ಯಾಡಗಿ: ಜಗತ್ತು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಗಳಲ್ಲಿ ತಂಬಾಕು ಸೇವನೆ ಕೂಡ ಒಂದಾಗಿದೆ. ಯಾರಾದರೂ ಸಿಗರೇಟಿನ ದಾಸರಾಗಿದ್ದರೆ, ಒಳ್ಳೆಯದಕ್ಕಾಗಿ ಇಂದೇ ಧೂಮಪಾನ ನಿಲ್ಲಿಸಿ, ತ್ಯಜಿಸಿದ ಕೆಲವೇ ದಿನಗಳಲ್ಲಿ ಅದರ ಪ್ರಯೋಜನಗಳು ಸ್ಪಷ್ಟವಾಗಿ ತಮಗೆ ಗೋಚರಿಸಲಿವೆ ಎಂದು ಹಿರಿಯಶ್ರೇಣಿ ದಿವಾಣಿ ನ್ಯಾಯಾಧೀಶ ಅಮೋಲ ಜಯಕುಮಾರ್ ಹಿರಿಕುಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕೆಲಸದ ಒತ್ತಡ ಮತ್ತು ವೈಯಕ್ತಿಕ ಸಮಸ್ಯೆಗಳಿಂದ ಬಹಳಷ್ಟು ಜನರು ತಂಬಾಕು ಉತ್ಪಾದನೆಗಳ ಸೇವನೆಯಂತಹ ದುರಾಭ್ಯಾಸಕ್ಕಿಳಿಯುತ್ತಾರೆ. ತಂಬಾಕು ಸೇವನೆಯಿಂದ ಹೃದ್ರೋಗ, ಪಾರ್ಶ್ವವಾಯು ಮತ್ತು ರಕ್ತ ಪರಿಚಲನೆ ಸಮಸ್ಯೆ, ರಕ್ತ ಹೆಪ್ಪುಗಟ್ಟುವಿಕೆ ಇನ್ನಿತರ ಅಪಾಯ ತಂದೊಡ್ಡಲಿದೆ ಎಂಬುದನ್ನು ವೈದ್ಯಕೀಯ ಪರೀಕ್ಷೆಗಳಿಂದ ತಿಳಿದು ಬರುತ್ತದೆ. ಹೀಗಾಗಿ ಧೂಮಪಾನ ಮಾಡುವವರಿಗೆ ಹೃದಯಾಘಾತ ಪ್ರಮಾಣ ಹೆಚ್ಚು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ವಿಶ್ವದಲ್ಲಿಯೇ 100 ಕೋಟಿಗೂ ಅಧಿಕ ಜನರು ಧೂಮಪಾನ ಮಾಡುತ್ತಿದ್ದಾರೆ ಎಂಬ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ, ಯಾರಾದರೂ ಸಿಗರೇಟು ಸೇದಿದಲ್ಲಿ ಅವರು ತಮ್ಮನ್ನು ಮಾತ್ರವಲ್ಲದೇ, ಸುತ್ತಲಿನ ಎಲ್ಲರಿಗೂ ಹಾನಿಯುಂಟು ಮಾಡಲಿದ್ದಾರೆ. ಅದರಲ್ಲೂ ಪಕ್ಕದಲ್ಲಿದ್ದವರ ದೇಹದ ಮೇಲೆ ಅನೇಕ ದುಷ್ಪರಿಣಾಮಗಳು ಬೀರುತ್ತದೆ, ಹೀಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡದಂತೆ ನಿರ್ಬಂಧ ಹೇರಿದ್ದು ಇದರಿಂದ ಲಕ್ಷಾಂತರ ಜನರನ್ನು ಅಪಾಯದಿಂದ ಪಾರು ಮಾಡಿದಂತಾಗಿದೆ ಎಂದರು.
ವಕೀಲರ ಸಂಘದ ಉಪಾಧ್ಯಕ್ಷ ಬಿ.ಜಿ. ಹಿರೇಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಕಿರಿಯಶ್ರೇಣಿ ದಿವಾಣಿ ನ್ಯಾಯಾಧೀಶ ಸುರೇಶ ವಗ್ಗನವರ, ಸಹಾಯಕ ಸರ್ಕಾರಿ ಅಭಿಯೋಜಕ ರಾಜಣ್ಣ ನ್ಯಾಮತಿ ಹಾಗೂ ಕೆ.ಆರ್. ಲಮಾಣಿ, ವಕೀಲರ ಸಂಘದ ಕಾರ್ಯದರ್ಶಿ ಎಂ.ಪಿ. ಹಂಜಗಿ, ಸಹ ಕಾರ್ಯದರ್ಶಿ ಎನ್.ಬಿ. ಬಳಿಗಾರ, ತಾಲೂಕು ಆರೋಗ್ಯಾಧಿಕಾರಿ ಡಾ. ಅರಾಫತ್ ಕಾಗದಗಾರ, ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಕಡ್ಡೀಪುಡಿ, ನ್ಯಾಯವಾದಿಗಳಾದ ಭಾರತಿ ಕುಲ್ಕರ್ಣಿ, ಲಕ್ಷ್ಮೀ ಗುಗರಿ, ಎಚ್.ಎಸ್. ಕುಲಮಿ, ಸಿ.ಸಿ. ದಾನಣ್ಣನವರ, ಸುರೇಶ ಕಾಟೇನಹಳ್ಳಿ, ಎಸ್.ಹೆಚ್. ಗುಂಡಪ್ಪನವರ, ಯಶೋಧರ ಅರ್ಕಾಚಾರಿ, ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಸಂತೋಷ್ ಹಾಲುಂಡಿ ಉಪಸ್ಥಿತರಿದ್ದರು.