ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಂಬಾಕು ಮುಕ್ತ ಯುವ ಸಮಾಜ ನಿರ್ಮಾಣದ ಅಭಿಯಾನ ಪ್ರತಿಯೊಂದು ಮನೆಯಲ್ಲಿ ನಡೆಯಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ ಬೆನ್ನೂರ ಹೇಳಿದರು.ತಾಲೂಕಿನ ನಗುವಿನಹಳ್ಳಿಯ ಗ್ರಾಪಂ ಸಭಾಂಗಣದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ಮಹದೇವಪುರ ಆಯುಷ್ಮಾನ್ ಆರೋಗ್ಯ ಮಂದಿರ ವತಿಯಿಂದ ಆಯೋಜಿಸಿದ್ದ ತಂಬಾಕು ಮುಕ್ತ ಯುವ ಅಭಿಯಾನದಲ್ಲಿ ಮಾತನಾಡಿದರು.
ಬದುಕಿಗೆ ಕಂಟಕವಾಗಿರುವ ತಂಬಾಕು ಯುವ ಜನರಲ್ಲಿ ಒಂದು ಪ್ರವೃತ್ತಿಯಾಗಿದೆ. ತಂಬಾಕು ಸೇವನೆಯಿಂದ ಆಗುವ ಅಪಾಯಗಳ ಬಗ್ಗೆ ಬಹುತೇಕ ಜನರಿಗೆ ಅರಿವಿದೆ. ಆದರೂ ಈ ಚಟದಿಂದ ಹೊರಬರಲು ಸಾಧ್ಯವಾಗದೆ ಬಳಲುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.ಭಾರತದಲ್ಲಿ ಪ್ರತಿದಿನ 3500 ಹದಿಹರೆಯದ ಮಕ್ಕಳು ತಂಬಾಕು ಪದಾರ್ಥಗಳ ಗುಲಾಮರಾಗುತ್ತಿದ್ದಾರೆ. ಇದರಿಂದ ಯುವಕರಲ್ಲಿ ಹೃದಯಾಘಾತ, ರಕ್ತ ನಾಳಗಳ ಕಾಯಿಲೆ, ಕ್ಯಾನ್ಸರ್, ದೀರ್ಘಕಾಲದ ಉಸಿರಾಟ ತೊಂದರೆ ಹಾಗೂ ಮಧುಮೇಹದಂತಹ ಕಾಯಿಲೆಗಳು ಕಂಡುಬರುತ್ತಿವೆ ಎಂದು ಎಚ್ಚರಿಸಿದರು.
ನಂತರ ಆರೋಗ್ಯ ನಿರೀಕ್ಷಣಾಧಿಕಾರಿ ಎಂ ಎನ್ ಕೃಷ್ಣೇಗೌಡ ತಂಬಾಕು ಮುಕ್ತ ಯುವ ಅಭಿಯಾನದ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು. ಗ್ರಾಪಂ ಅಧ್ಯಕ್ಷ ಜವರಪ್ಪ, ಸದಸ್ಯರಾದ ರಮೇಶ್, ಲೋಕೇಶ್ ಬಾಬು, ಚೇತನ್, ಚಂದಗಾಲು ರಮೇಶ್, ಪಿಡಿಒ ಶಿಲ್ಪ, ಕಾರ್ಯದರ್ಶಿ ಸೋಮಣ್ಣ, ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕ ನಾಗರಾಜು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಪುಷ್ಪಾ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶಾಂತ ರಾಮು, ಸಮುದಾಯ ಆರೋಗ್ಯ ಅಧಿಕಾರಿ ಸಹನಾ, ಮೌಲ್ಯ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ವಿನಯ, ಆಶಾ, ಅಂಗನವಾಡಿ ಕಾರ್ಯಕರ್ತರು, ಶಾಲಾ ಶಿಕ್ಷಕರು, ಗ್ರಾಪಂ ಸಿಬ್ಬಂದಿ ಸೇರಿದಂತೆ ಇತರರು ಹಾಜರಿದ್ದರು.