ಚಿತ್ರದುರ್ಗ: ಒಳ ಮೀಸಲಾತಿ ವರ್ಗಿಕರಣದ ವಿರುದ್ಧ ಡಿ.17 ರಂದು ಬೆಳಗಾವಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸುರೇಶ್‌ನಾಯ್ಕ ತಿಳಿಸಿದರು.ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಬಂಜಾರ ಜನಜಾಗೃತಿ ಅಭಿಯಾನ ಸಮಿತಿ, ಕರ್ನಾಟಕ ಬಂಜಾರ ಲಂಬಾಣಿ ಹಕ್ಕು ಸಂರಕ್ಷಣಾ ಸಮಿತಿ ಹಾಗೂ ಕೊಲಂಬೋ ಸಮುದಾಯದ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಚಲೋ ಕಾರ್ಯಕ್ರಮದಲ್ಲಿ ಸುಪ್ರಿಂಕೋರ್ಟ್ ಮಾನದಂಡಗಳು ಹಾಗೂ ಹಲವು ಆಯೋಗಗಳ ಶಿಫಾರಸ್ಸುಗಳನ್ನು ಉಲ್ಲಂಘಿಸಿ ಸಾಮಾಜಿಕ ನ್ಯಾಯದ ವಿರುದ್ಧವಾಗಿ ಸಿದ್ಧಪಡಿಸಲಾಗಿರುವ ಒಳ ಮೀಸಲಾತಿಯ ಸರ್ಕಾರಿ ಆದೇಶ ಪುನರ್ ಪರಿಶೀಲಿಸಲು ಆಗ್ರಹಿಸಚಲಾಗುತ್ತಿದೆ ಎಂದರು. ನ್ಯಾಯಮೂರ್ತಿ ನಾಗಮೋಹನ್‌ದಾಸ್ ವರದಿಯ ಮಾನದಂಡಗಳ ಕೋಷ್ಟಕದಲ್ಲಿರುವಂತೆ ಪರಿಶಿಷ್ಟ ಜಾತಿಯಲ್ಲಿ ಅತ್ಯಂತ ಹಿಂದುಳಿದಿರುವ ಅಲೆಮಾರಿ ಬುಡಕಟ್ಟು ಸಮುದಾಯಗಳಿಗೆ ಎ.ಗುಂಪಿನಲ್ಲೂ ಹೆಚ್ಚು ಹಿಂದುಳಿದಿರುವ ಕೊಲಂಬೋ ಸಮುದಾಯವನ್ನು ಡಿ ಗುಂಪಿನಲ್ಲಿ ಸೇರಿಸಲಾಗಿದೆ. ಇವೆರಡು ಗುಂಪನ್ನು ಒಟ್ಟಾಗಿಸಿ ಸಿ ಗುಂಪಾಗಿ ಪರಿವರ್ತಿಸಿ ಶೇ.5 ಮೀಸಲಾತಿ ನಿಗದಿಗೊಳಿಸಿದೆ. ಆದರೆ ವರದಿಯಲ್ಲಿರುವಂತೆ ಅತ್ಯಂತ ಹಿಂದುಳಿದಿರುವುದು ಹಾಗೂ ಜನಸಂಖ್ಯೆಯ ಆಧಾರದ ಮೇಲೆ ಸಿ ಗುಂಪಿಗೆ ಶೇ.6 ರಷ್ಟು ಮೀಸಲಾತಿ ಸಿಗಬೇಕಾಗಿದೆ. ಹಾಗಾಗಿ ಅತಿ ಹಿಂದುಳಿದಿರುವ ಗುಂಪನ್ನು ಎ ಗುಂಪಾಗಿ ಸರ್ಕಾರಿ ಆದೇಶದಲ್ಲಿ ತಿದ್ದುಪಡಿ ತರಬೇಕು ಎಂದು ಆಗ್ರಹಿಸಿದರು. ಒಳ ಮೀಸಲಾತಿ ಆದೇಶದಿಂದ ಜಾರಿಗೊಂಡಿರುವ ಸರ್ಕಾರಿ ನೇಮಕಾತಿ ಪ್ರಕ್ರಿಯೆಯಲ್ಲಿ ರೋಸ್ಟರ್ ಬಿಂದು ಪದ್ಧತಿಯಿಂದ ಸಿ ಗುಂಪಿನಲ್ಲಿ ಬರುವ ಜಾತಿಗಳಿಗೆ ಅನ್ಯಾಯವಾಗುತ್ತಿರುವುದರಿಂದ ಪರಿಶಿಷ್ಟ ಜಾತಿಯಲ್ಲಿನ ಎಲ್ಲಾ ಜಾತಿಗಳಿಗೂ ಸಮಾನವಾಗಿ ಹುದ್ದೆಗಳ ಹಂಚಿಕೆಯಾಗುವಂತೆ ರೋಸ್ಟರ್ ಬಿಂದು ಮಾರ್ಪಡಿಸಿ ಏಕಗವಾಕ್ಷಿ ಪದ್ಧತಿ ಜಾರಿಗೆ ಸರ್ಕಾರ ಮುಂದಾಗಬೇಕು. ಹಲವು ಆಯೋಗಗಳ ವರದಿಯಲ್ಲಿ ಶಿಫಾರಸ್ಸು ಮಾಡಿರುವಂತೆ ಅಲೆಮಾರಿ ಬುಡಕಟ್ಟುಗಳಿಗೆ ಪ್ರತ್ಯೇಕಿಸುವುದಾದರೆ ಶೇ. ಒಂದರಷ್ಟು ಮೀಸಲಾತಿ ಹೆಚ್ಚಿಸಿ ಸಿ ಗುಂಪಿನಿಂದ ಪ್ರತ್ಯೇಕಿಸಿ ಕೊಲಂಬೋ ಸಮುದಾಯಗಳಿಗೆ ಶೇ.5 ರಷ್ಟು ಮೀಸಲಾತಿ ನಿಗದಿಯಾಗಬೇಕು. ಪ್ರಸ್ತುತ ಖಾಸಗಿ ವಲಯದಲ್ಲಿ ಉದ್ಯೋಗಗಳ ಸೃಷ್ಟಿ ಹೆಚ್ಚಾಗುತ್ತಿರುವುದರಿಂದ ಖಾಸಗಿ ವಲಯದಲ್ಲೂ ಮೀಸಲಾತಿ ಜಾರಿಗಾಗಿ ಒತ್ತಾಯಿಸಲಾಗುವುದೆಂದು ಹೇಳಿದರು.