ಇಂದು ಭಟ್ಕಳ ಕೋಕ್ತಿ ಮಹಾಸತಿ ದೇವರ ಜಾತ್ರೆ ಮಹೋತ್ಸವ

KannadaprabhaNewsNetwork |  
Published : Jan 17, 2025, 12:47 AM IST
ಫೋಠೊ ಪೈಲ್ : 16ಬಿಕೆಲ್2 | Kannada Prabha

ಸಾರಾಂಶ

ಜಾತ್ರೆಯಲ್ಲಿ ಕಬ್ಬಿನ ಕುಡಿಯನ್ನು ಖರೀದಿಸುವುದು ಒಂದು ಪದ್ಧತಿ

ಭಟ್ಕಳ: ಗೊಂಡ ಸಮಾಜದ ಕುಲದೇವರಾದ ಕೋಕ್ತಿ ಶ್ರೀ ಮಹಾಸತಿ ದೇವಸ್ಥಾನದಲ್ಲಿ ಶುಕ್ರವಾರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದೆ.

ತಾಲೂಕಿನಲ್ಲಿ ಮಕರ ಸಂಕ್ರಾಂತಿಯ ಆನಂತರ ನಡೆಯುವ ಎರಡನೇ ಜಾತ್ರೆ ಇದಾಗಿದೆ. ಕೋಕ್ತಿ ಮಹಾಸತಿ ದೇವಸ್ಥಾನದಲ್ಲಿ ಪಟ್ಟಣದ ಮಧ್ಯದಲ್ಲಿದ್ದು, ಇದು ಇಂದಿಗೂ ಗ್ರಾಮೀಣ ಪದ್ಧತಿಯಲ್ಲೇ ನಡೆದುಕೊಂಡು ಬರುತ್ತಿದೆ. ಗೊಂಡ ಸಮಾಜದ ಜಾನಪದ ಶೈಲಿಯಲ್ಲಿ ಈ ಜಾತ್ರೆ ನಡೆಯಲಿದ್ದು, ದೇವಸ್ಥಾನವೂ ಪ್ರಮುಖವಾಗಿ ಗೊಂಡ ಸಮಾಜದವರೇ ನಂಬಿಕೊಂಡು ಬಂದ ಸ್ಥಳವಾಗಿದೆ. ಪ್ರತಿ ವರ್ಷದ ಜಾತ್ರೆಯಲ್ಲಿಯೂ ಸಂಪ್ರದಾಯಕ್ಕೆ ಧಕ್ಕೆ ಬರದಂತೆ ಜಾತ್ರೆ ಆಚರಿಸಿಕೊಂಡು ಹೋಗಲಾಗುತ್ತಿದೆ. ಪಟ್ಟಣದ ಮಧ್ಯದಲ್ಲಿ ಈ ಜಾತ್ರೆ ನಡೆಯುತ್ತಿದ್ದರೂ ಗ್ರಾಮೀಣ ಭಾಗದ ಜನರೇ ಹೆಚ್ಚಾಗಿ ಇಲ್ಲಿ ಭಾಗವಹಿಸುತ್ತಾರೆ.

ಜಾತ್ರೆಯಲ್ಲಿ ಕಬ್ಬಿನ ಕುಡಿಯನ್ನು ಖರೀದಿಸುವುದು ಒಂದು ಪದ್ಧತಿಯಾಗಿದೆ. ಇಲ್ಲಿ ಕಬ್ಬಿನ ಕುಡಿಯನ್ನು ಕೊಂಡುಕೊಳ್ಳುವುದಕ್ಕೂ ಒಂದು ವಿಶೇಷ ಮಹತ್ವವನ್ನು ಕಲ್ಪಿಸಲಾಗಿದೆ. ಸುಗ್ಗಿಯ ಸಂಭ್ರಮದಲ್ಲಿರುವ ರೈತರು ತಮ್ಮ ಬಿಡುವಿನ ವೇಳೆಯಲ್ಲಿ ಜಾತ್ರೆಯಲ್ಲಿ ಬಂದು ಮನೆ ಮನೆಗೆ ಕಬ್ಬು ಕೊಂಡೊಯ್ಯಲಿ, ಆ ಕುಡಿಯು ಸಹಸ್ರ ಕುಡಿಯಾಗಿ ಮನೆ ಯಜಮಾನನ ಸಂಪತ್ತು ವೃದ್ಧಿಯಾಗಲಿ ಎನ್ನುವುದು ಹಿಂದಿನಿಂದ ಬಂದ ಪದ್ಧತಿಯಾಗಿದೆ. ಇನ್ನೊಂದು ಪ್ರತೀತಿಯೆಂದರೆ ಜಾತ್ರೆಯ ನಂತರ ಮುಂದಿನ ಜಾತ್ರೆಯ ತನಕ ಮದುವೆಯಾಗಿರುವ ಗೊಂಡ ಸಮಾಜದ ನೂತನ ವಧೂ-ವರರು ಜಾತ್ರೆಗೆ ಬಂದು ಇಲ್ಲಿನ ಕೋಕ್ತಿ ಕೆರೆಯಲ್ಲಿ ಸ್ನಾನ ಮಾಡಿ ದೇವರ ದರ್ಶನವನ್ನು ಪಡೆದು ವಾಪಸು ಮನೆಗೆ ಹೋಗುವಾಗ ಕಬ್ಬಿನ ಕುಡಿಯನ್ನು ತೆಗೆದುಕೊಂಡು ಹೋದರೆ ಅವರ ಕುಟುಂಬದ ಕುಡಿ ಮುಂದುವರಿಯುವುದು ಎನ್ನುವ ನಂಬಿಕೆ ಕೂಡಾ ಇಲ್ಲಿ ಅಡಗಿದೆ. ಆದರೆ ಕಳೆದ ಹಲವಾರು ವರ್ಷಗಳಿಂದ ಕೋಕ್ತಿ ಕೆರೆಯಲ್ಲಿ ಹೂಳು ತುಂಬಿ ನೀರು ಕಲುಷಿತಗೊಂಡಿದ್ದರಿಂದ ಸ್ನಾನ ಮಾಡಲು ಯೋಗ್ಯವಾಗಿಲ್ಲವಾದ್ದರಿಂದ ಸ್ನಾನ ಮಾಡುವ ಪದ್ಧತಿಯನ್ನು ನಿಲ್ಲಿಸಲಾಗಿದೆ. ಹಲವರು ನಂಬಿಕೆ ಪ್ರತೀಕವಾಗಿ ಕೆರೆಯ ನೀರನ್ನು ಪ್ರೋಕ್ಷಣ್ಯ ಮಾಡಿಕೊಂಡು ದೇವರಲ್ಲಿ ಪ್ರಾರ್ಥಿಸುತ್ತಾರೆ. ಇಲ್ಲಿ ಮಹಾಸತಿ ದೇವರ ಪೂಜೆ, ಶೇಡಿ ಮರದ ಪೂಜೆ ವಿಶೇಷ ಹರಕೆಯಾಗಿದೆ.

ಜಾತ್ರೆಯಂದು ಭಕ್ತರು ದೇವಸ್ಥಾನಕ್ಕೆ ಬಂದು ತಮ್ಮ ಹರಕೆ, ಕಾಣಿಕೆಯನ್ನು ಸಲ್ಲಿಸಿ, ಆನಂತರ ಜಾತ್ರೆಯಲ್ಲಿ ಬಂದ ಕಬ್ಬು ಖರೀದಿಸಿಯೇ ಮನೆಗೆ ಮರಳುತ್ತಾರೆ. ಕೋಕ್ತಿ ಶ್ರೀ ಮಹಾಸತಿ ದೇವಿಯೊಂದಿಗೆ ಶ್ರೀ ನಾಗ, ಶ್ರೀ ಜಟಕ ಇತ್ಯಾದಿ ದೇವತೆಗಳನ್ನು ಕೂಡಾ ಪೂಜಿಸಲ್ಪಡುತ್ತಿದ್ದು ಸಾವಿರಾರು ಭಕ್ತರು ಜಾತ್ರೆಗೆ ಆಗಮಿಸುತ್ತಾರೆ. ಕೋಕ್ತಿ ಜಾತ್ರೆಯ ಅಂಗವಾಗಿ ಶುಕ್ರವಾರ ಬೆಳಗ್ಗೆ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಪೂಜೆ, ಮಹಾ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಸಂಜೆ 4 ಗಂಟೆಗೆ ಗುಡಿ ಜಟಕಾ ದೇವಸ್ಥಾನದಿಂದ ದೈವಾರಾಧನೆ ಮತ್ತು ಗೊಂಡರ ಸಾಂಪ್ರದಾಯಿಕ ಡಕ್ಕೆ ಕುಣಿತದೊಂದಿಗೆ ಕೋಕ್ತಿ ಮಹಾಸತಿ ದೇವಸ್ಥಾನದ ವರೆಗೆ ಮೆರವಣಿಗೆ ನಡೆಯಲಿದೆ. ಸಂಜೆ ಸಭಾ ಕಾರ್ಯಕ್ರಮ ಮತ್ತು ಸಾಧಕರಿಗೆ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ 10 ಗಂಟೆಗೆ ಹಾಸ್ಯಮಯ ವಾಚ್‌ಮ್ಯಾನ್‌ ನಗೆ ನಾಟಕ ನಡೆಯಲಿದ್ದರೆ, ದೇವಸ್ಥಾನದ ಮುಂಭಾಗದಲ್ಲಿ ಆಹೋರಾತ್ರಿ ಗೊಂಡರ ಮಂಡಲ ಕುಣಿತ ಜರುಗಲಿದೆ. ಜಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಗೊಂಡ ಸಮಾಜದ ಅಭಿವೃದ್ಧಿ ಸಂಘದ ಅಧ್ಯಕ್ಷ ನಾರಾಯಣ ಗೊಂಡ ಹಾಗೂ ಪದಾಧಿಕಾರಿಗಳು ಕೋರಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!