ವಕ್ಫ್‌ ವಿರುದ್ಧ ಇಂದು ಬಿಜೆಪಿ ಅಹೋರಾತ್ರಿ ಪ್ರತಿಭಟನೆ

KannadaprabhaNewsNetwork | Published : Nov 21, 2024 1:00 AM

ಸಾರಾಂಶ

ವಕ್ಫ್‌ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಚಿಕ್ಕಮಗಳೂರಿನಲ್ಲಿ ನ.21 ರಂದು ಜಿಲ್ಲಾ ಬಿಜೆಪಿ ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಎಂ.ಆರ್‌. ದೇವರಾಜ್‌ ಶೆಟ್ಟಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ವಕ್ಫ್‌ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಚಿಕ್ಕಮಗಳೂರಿನಲ್ಲಿ ನ.21 ರಂದು ಜಿಲ್ಲಾ ಬಿಜೆಪಿ ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಎಂ.ಆರ್‌. ದೇವರಾಜ್‌ ಶೆಟ್ಟಿ ಹೇಳಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ. 21ರ ಬೆಳಿಗ್ಗೆ 10 ಗಂಟೆಯಿಂದ ನ. 22ರ ಬೆಳಿಗ್ಗೆ 10 ಗಂಟೆಯವರೆಗೆ ಅಂದರೆ, 24 ಗಂಟೆಗಳ ಕಾಲ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ನಮ್ಮ ಭೂಮಿ - ನಮ್ಮ ಹಕ್ಕು ಶೀರ್ಷಿಕೆಯಡಿ ಜನಜಾಗೃತಿ ಆಂದೋಲನವನ್ನು ಜಿಲ್ಲಾ ಬಿಜೆಪಿ ರೈತರು ಮತ್ತು ಸಾರ್ವಜನಿಕರ ಪರವಾಗಿ ವಕ್ಫ್‌ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಅಹೋರಾತ್ರಿ ಆಜಾದ್‌ ಪಾರ್ಕ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗುವುದು. ಶೋಷಣೆಗೆ ಒಳಗಾದ ಸಾರ್ವಜನಿಕರು, ರೈತರು, ಮಠ ಮಂದಿರಗಳು, ಶಾಲೆಗಳು ಹಾಗೂ ಸಾರ್ವಜನಿಕರ ಆಸ್ತಿಗಳ ಕುರಿತು ನಡೆಸುತ್ತಿರುವ ಹೋರಾಟದಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬೇಕು ಎಂದು ಹೇಳಿದರು.

ವಕ್ಫ್ ಆಸ್ತಿ ಸಂಬಂಧ ನಮ್ಮ ಜಿಲ್ಲೆಯಲ್ಲಿ ಸಮಸ್ಯೆ ಎದುರಾಗಿದ್ದು, ಈ ಸಮಸ್ಯೆಗೆ ತಾರ್ಕಿಕ ಅಂತ್ಯ ಹುಡುಕುವ ನಿಟ್ಟಿನಲ್ಲಿ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ನೇತೃತ್ವದಲ್ಲಿ ಕಳೆದ ಹತ್ತಾರು ದಿನಗಳಿಂದ ಪಕ್ಷದೊಳಗೆ ಆಂತರಿಕವಾಗಿ ಚರ್ಚೆ ನಡೆಸಿ ಜನರನ್ನು ಸಂಪರ್ಕಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ಪಕ್ಷದ ಕರೆಯ ಮೇರೆಗೆ ಸದಸ್ಯತ್ವ ಅಭಿಯಾನದಲ್ಲಿ ಟಾಪ್‌ - 10 ಜಿಲ್ಲೆಯ ಪಟ್ಟಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯೂ ಕೂಡ ಸ್ಥಾನ ಪಡೆದುಕೊಂಡಿದೆ. ಸುಮಾರು 2 ಲಕ್ಷ ಜನರನ್ನು ಪಕ್ಷಕ್ಕೆ ನೋಂದಾಣಿ ಮಾಡಿಕೊಳ್ಳಲಾಗಿದೆ. ತಲಾ 50 ಕ್ಕಿಂತ ಹೆಚ್ಚು ಮಂದಿ ಸದಸ್ಯರನ್ನು ನೋಂದಾಣಿ ಮಾಡಿಕೊಂಡವರಿಗೆ ಸಕ್ರಿಯ ಕಾರ್ಯಕರ್ತರೆಂದು ಪಕ್ಷವು ಪರಿಗಣಿಸಿದ್ದು, ಮುಂದಿನ ದಿನಗಳಲ್ಲಿ ಅವರಿಗೆ ವಿವಿಧ ಜವಬ್ದಾರಿ ನೀಡಲಾಗುವುದು ಎಂದು ಹೇಳಿದರು.

ಸುದ್ಧಿಗೋಷ್ಠಿಯಲ್ಲಿ ಬಿಜೆಪಿಯ ಮುಖಂಡರಾದ ಕೋಟೆ ರಂಗನಾಥ್‌, ಬೀಕನಹಳ್ಳಿ ಸೋಮಶೇಖರ್‌, ರವೀಂದ್ರ ಬೆಳವಾಡಿ, ಡಾ. ನರೇಂದ್ರ, ಹಿರೇಮಗಳೂರು ಪುಟ್ಟಸ್ವಾಮಿ, ಮುಗುಳವಳ್ಳಿ ದಿನೇಶ್‌ ಇದ್ದರು.

Share this article