ಕನ್ನಡಪ್ರಭ ವಾರ್ತೆ ಕೋಲಾರ ನರಸಾಪುರ ಕೈಗಾರಿಕ ಪ್ರಾಂಗಣದಲ್ಲಿ ೧೦೦ ಹಾಸಿಗೆಯ ಸುಸಜ್ಜಿತವಾದ ಇ.ಎಸ್.ಐ. ಆಸ್ಪತ್ರೆಯ ಕಾಮಗಾರಿಗೆ ಗುದ್ದಲಿ ಪೂಜೆ ಕಾರ್ಯಕ್ರಮ ಮಂಗಳವಾರ ಮಧ್ಯಾಹ್ನ ೧೨.೩೦ಕ್ಕೆ ಪ್ರಧಾನ ಮಂತ್ರಿ ವಿಡಿಯೋ ಕಾನ್‌ಪ್ರೆಸ್ ಮೂಲಕ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.
ಆಸ್ಪತ್ರೆಯು ೫ ಎಕರೆ ವಿಶಾಲವಾದ ಪ್ರದೇಶದಲ್ಲಿ ೧೫೪.೭೭ ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಇದರ ಜೂತೆಗೆ ೩೨ ಸಿಬ್ಬಂದಿಗಳ ಕ್ವಾಟರ್‍ಸ್ ನಿರ್ಮಿಸಲಾಗುವುದು, ನೆಲ ಮತ್ತು ಎರಡು ಅಂತಸ್ತಿನ ಕಟ್ಟಡವು ಸೇರಿದಂತೆ ಒಟ್ಟು ೨೧ ಚದರ ಅಡಿ ವಿಸ್ತೀರ್ಣ ಹೊಂದಿದೆ, ೩೨ ತಿಂಗಳಲ್ಲಿ ಆಸ್ಪತ್ರೆಯ ಕಾಮಗಾರಿ ಪೂರ್ಣಗೊಂಡು ಲೋಕಾರ್ಪಣೆ ಮಾಡಲಾಗುವುದು ಎಂದು ವಿವರಿಸಿದರು.
ಸರ್ಕಾರವು ರಸ್ತೆ ಅಭಿವೃದ್ದಿಗೆ ೩,೧೯೦ ಕೋಟಿ ರು.ಗಳ ವೆಚ್ಚದಲ್ಲಿ ೪ ಪಥದ ಕಾಮಗಾರಿ ಕೈಗೆತ್ತಿಕೊಳ್ಳಲಿದೆ. ಸಂಚಾರದ ಒತ್ತಡ ಕಡಿಮೆ ಮಾಡುವ ದೆಸೆಯಲ್ಲಿ ರಸ್ತೆ ಅಭಿವೃದ್ದಿ ಯೋಜನೆಗೆ ಹಸಿರು ನಿಶಾನೆ ದೊರೆಯಲಿದೆ. ತುಮಕೂರು ಡಾಬಸ್‌ಪೇಟೆ, ದೇವನಹಳ್ಳಿ, ವಿಜಯಪುರ, ಹೆಚ್.ಕ್ರಾಸ್, ಜಂಗಮಕೋಟೆ, ನರಸಾಪುರ, ಮಾಲೂರು, ಹೊಸೂರು ದರ್ಮಪುರಿ ಮಾರ್ಗವಾಗಿ ಚೆನೈ ಹಾಗೂ ಮೈಸೂರು ನೈಸ್ ರಸ್ತೆಗೂ ಸಂರ್ಪಕ ಕಲ್ಪಿಸಲಾಗುವುದು ಎಂದು ವಿವರಿಸಿದರು.ಸುಮಾರು ೧೧೧ ಕಿ.ಮೀ ರಸ್ತೆಯ ನಿರ್ಮಾಣದ ಯೋಜನೆಗೆ ೨೦೩೨ ಕೋಟಿ ರೂ. ರಸ್ತೆ ಕಾಮಗಾರಿಗೆ ಹಾಗೂ ೧೧೧೦ ಕೋಟಿ ರೂ. ಭೂ ಸ್ವಾದೀನಕ್ಕೆ ನಿಗದಿಪಡಿಸಲಾಗಿದೆ, ಈಗಾಗಲೇ ಸರ್ವೆಕಾರ್ಯ ಮುಗಿಸಿದ್ದು, ಕ್ರಿಯಾಯೋಜನೆ ರೂಪಿಸಲಾಗಿದೆ. ಯಾರಿಗೂ ತೊಂದರೆ ಉಂಟಾಗದಂತೆ ಯೋಜನೆ ರೂಪಿಸಲಾಗಿದೆ ಎಂದರು.
ರಿಂಗ್ ರಸ್ತೆ ಮರು ಮಂಜೂರಾತಿ:ಇದೇ ಸಂದರ್ಭದಲ್ಲಿ ಕೋಲಾರ ರಿಂಗ್ ರಸ್ತೆಗೆ ಮಂಜೂರಾಗಿದ್ದ ಅನುದಾನವು ವಾಪಸ್ ಆಗಿರುವುದನ್ನು ಮರು ಮಂಜೂರಾತಿಗೆ ನಸೀರ್ ಅಹ್ಮದ್ ನೇತೃತ್ವದ ನಿಯೋಗವು ಮುಖ್ಯ ಮಂತ್ರಿಗಳ ಗಮನಕ್ಕೆ ತಂದಿದ್ದು ಇದಕ್ಕೆ ಅಗತ್ಯವಾದ ೩೦೦-೪೦೦ ಕೋಟಿ ರೂ ಮಂಜೂರು ಮಾಡಲು ಪರಿಶೀಲಿಸುತ್ತಿದೆ ಎಂದು ಹೇಳಿದರು. ವೈದ್ಯಕೀಯ ಕಾಲೇಜು ಸ್ಥಾಪನೆ
ಸರ್ಕಾರಿ ವೈದ್ಯಕೀಯ ಕಾಲೇಜನ್ನು ನಗರದ ಸಮೀಪವೇ ಸಾರ್ವಜನಿಕರಿಗೆ ಅನುಕೂಲವಾಗುವಂತೆ ೧-೨ ಕಿ.ಮೀ ಅಂತರದಲ್ಲಿ ನಿರ್ಮಾಣ ಮಾಡಲಾಗುವುದು. ಯೋಜನೆ ಸ್ವಲ್ಪ ವಿಳಂಬವಾದರೂ ಭವಿಷ್ಯದ ದೃಷ್ಟಿಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ವೈಜ್ಞಾನಿಕವಾದ ಆಧುನಿಕ ವ್ಯವಸ್ಥೆಗಳನ್ನು ಒಳಗೊಂಡಂತೆ ನಿರ್ಮಿಸಲು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ.ಶಿವಕುಮಾರ್, ವಕ್ಕಲೇರಿ ಗ್ರಾಪಂ ಮಾಜಿ ಅಧ್ಯಕ್ಷ ಮೈಲಾಂಡ್ಲಹಳ್ಳಿ ಮುರಳಿ, ನಗರಸಭೆ ಸದಸ್ಯ ಅಂಬರೀಶ್, ಮುಖಂಡರಾದ ಕಿಲಾರಿಪೇಟೆ ಮಣಿ, ಉಮಾಶಂಕರ್, ಖಾದ್ರಿಪುರ ಬಾಬು ಇದ್ದರು.