ಕನ್ನಡಪ್ರಭ ವಾರ್ತೆ ಕಲಬುರಗಿ
ನಗರದ ಶರಣಬಸವೇಶ್ವರ ದೇವಾಲಯದ ಆವರಣದಲ್ಲಿರುವ ಡಾ. ಶರಣಬಸವಪ್ಪ ಅಪ್ಪಾ ಅನುಭವ ಮಂಟಪದಲ್ಲಿ ಮಂಗಳವಾರ ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿಗಳಾಗಿದ್ದ ಲಿಂ.ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿಯವರ ಪ್ರಥಮ ಪುಣ್ಯಸ್ಮರಣೋತ್ಸವ ಮುನ್ನಾದಿನವಾದ ಮಂಗಳವಾರ ಡಾ. ಗುರು ಮಹಾಂತ ಶಿವಯೋಗಿಗಳು ಸಾಮೂಹಿಕ ಇಷ್ಟಲಿಂಗ ಪೂಜೆಗೆ ಚಾಲನೆ ನೀಡಿ ಮಾತಾಡಿದರು.
ಸೆ. 2ರ ಬುಧವಾರ ಡಾ. ಅಪ್ಪಾಜಿಯವರ ಪ್ರಥಮ ಪುಣ್ಯಸ್ಮರಣೋತ್ಸವ ಮಹಾ ಸಂಸ್ಥಾನದಲ್ಲಿ ನಡೆಯುತ್ತಿದೆ. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ ಹಾಗೂ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪಾಜಿಯವರು, ವಿವಿಧ ಕ್ಷೇತ್ರಗಳ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಗಣ್ಯರೊಂದಿಗೆ ಸಾಮೂಹಿಕ ಇಷ್ಟಲಿಂಗ ಪೂಜೆಯಲ್ಲಿ ಪಾಲ್ಗೊಂಡರು.ಇಷ್ಟಲಿಂಗ ಪೂಜೆಯ ಮಹತ್ವ ಹಾಗೂ ಅದರ ಮೂಲಕ ಮನಸ್ಸಿನಲ್ಲಿರುವ ನಕಾರಾತ್ಮಕ ಆಲೋಚನೆಗಳನ್ನು ತೊಡೆದುಹಾಕುತ್ತದೆ. ಮಹಾತ್ಮ ಬಸವೇಶ್ವರರು ಪ್ರತಿಪಾದಿಸಿದ ಇಷ್ಟಲಿಂಗವು ಮನಸ್ಸನ್ನು ಏಕಾಗ್ರಗೊಳಿಸಿ ಪ್ರತಿಯೊಬ್ಬ ಮನುಷ್ಯನಲ್ಲಿಯೂ ದೇವರನ್ನು ಕಾಣುವ ದೃಷ್ಟಿಯನ್ನು ನೀಡುತ್ತದೆ ಎಂದು ಶಿವಯೋಗಿಗಳು ಹೇಳಿದರು.
ಇಷ್ಟಲಿಂಗ ಪೂಜೆಯು ಲಿಂಗಾಯತ ಹಾಗೂ ವೀರಶೈವ ಸಮುದಾಯದ ಅವಿಭಾಜ್ಯ ಅಂಗ, ಸಾಮೂಹಿಕ ಇಷ್ಟಲಿಂಗ ಪೂಜೆಯನ್ನು ಆಯೋಜಿಸುವ ಮೂಲಕ ಜನರಲ್ಲಿ ಇಷ್ಟಲಿಂಗ ಪೂಜೆಯ ಮಹತ್ವದ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಿರುವ ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿ ಹಾಗೂ ಪೂಜ್ಯ ದೊಡ್ಡಪ್ಪ ಅಪ್ಪಾಜಿ ಅವರನ್ನು ಶಿವಯೋಗಿಗಳು ಶ್ಲಾಘಿಸಿದರು.
ಸಾಮೂಹಿಕ ಇಷ್ಟಲಿಂಗ ಪೂಜೆಯಲ್ಲಿ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಸಹೋದರಿಯರಾದ ಶಿವಾನಿ, ಭವಾನಿ , ಮಹೇಶ್ವರಿ, ಡಾ. ಗಂಗಾಂಬಿಕಾ ನಿಷ್ಠಿ, ಗೋದಾವರಿ ಭೀಮಳ್ಳಿ, ಡಾ. ಅಲ್ಲಮಪ್ರಭು ದೇಶಮುಖ, ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ, ಡಾ. ಜಯಶ್ರೀ ದಂಡೆ, ಭಾಗ್ಯಶ್ರೀ ಎಸ್. ಪಾಟೀಲ್, ಸಂತೋಷಿ ರಾಣಿ ತೇಲ್ಕೂರ, ಅರುಣಕುಮಾರ ಪಾಟೀಲ್ ಕೊಡಲಹಂಗರಗಾ ಸೇರಿದಂತೆ ಪೂಜ್ಯ ಡಾ. ಅಪ್ಪಾಜಿಯವರ ಕುಟುಂಬ ಸದಸ್ಯರು ಹಾಗೂ ಇತರರು ಪಾಲ್ಗೊಂಡಿದ್ದರು.