ಇಂದು ಶಿಕ್ಷಣ ಆಯ್ಕೆಯಲ್ಲ ಅವಕಾಶವಾಗಿದೆ: ಡಾ.ಎಸ್.ಆರ್. ನಿರಂಜನ

KannadaprabhaNewsNetwork |  
Published : Oct 11, 2025, 12:02 AM IST
45 | Kannada Prabha

ಸಾರಾಂಶ

ಹಿಂದಿನ ಶಿಕ್ಷಣ ವ್ಯವಸ್ಥೆಗಿಂತ ಇಂದಿನ ಶಿಕ್ಷಣ ವ್ಯವಸ್ಥೆ ಕಾಲಕ್ಕೆ ತಕ್ಕಂತೆ ಬದಲಾಗಿದೆ. ಅಂದು ಅಭಿವೃದ್ಧಿ ಹೊಂದಿದ ದೇಶಗಳಿಂದ ಭಾರತದಲ್ಲಿ ಶಿಕ್ಷಣ ಪಡೆಯಲು ತಕ್ಷಶಿಲಾ, ನಳಂದಾ ವಿದ್ಯಾ ಕೇಂದ್ರಗಳಿಗೆ ಬರುತ್ತಿದ್ದರು. ಈ ಶಿಕ್ಷಣ ಕೇಂದ್ರಗಳಲ್ಲಿ ಬಹುಶಿಸ್ತೀಯ ಅಧ್ಯಯನಗಳು ನಡೆಯುತ್ತಿದ್ದವು. ವಿದ್ಯಾರ್ಥಿಗಳಿಗೆ ಬದುಕಿನಲ್ಲಿ ಮಹತ್ವದ ಗುರಿ ಇರಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಅಂದು ಶಿಕ್ಷಣದ ವ್ಯಾಖ್ಯಾನವೇ ಭಿನ್ನವಾಗಿತ್ತು. ಇಂದು ಆಧುನಿಕ ಭಾರತದಲ್ಲಿ ಶಿಕ್ಷಣ ಆಯ್ಕೆಯಲ್ಲ, ಅವಕಾಶವಾಗಿದೆ. ಇದನ್ನು ಬಳಸಿಕೊಂಡವರಿಗೆ ಮಾತ್ರ ಜ್ಞಾನ ಲಭಿಸುತ್ತದೆ ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ಉಪಾಧ್ಯಕ್ಷ ಡಾ.ಎಸ್.ಆರ್. ನಿರಂಜನ ಹೇಳಿದರು.

ನಗರದ ಊಟಿ ರಸ್ತೆಯಲ್ಲಿನ ಜೆಎಸ್‌ಎಸ್ ಕಾಲೇಜಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ನಡೆಯುತ್ತಿರುವ ಎರಡು ದಿನಗಳ ಅಭಿವಿನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದಿನ ಶಿಕ್ಷಣ ವ್ಯವಸ್ಥೆಗಿಂತ ಇಂದಿನ ಶಿಕ್ಷಣ ವ್ಯವಸ್ಥೆ ಕಾಲಕ್ಕೆ ತಕ್ಕಂತೆ ಬದಲಾಗಿದೆ. ಅಂದು ಅಭಿವೃದ್ಧಿ ಹೊಂದಿದ ದೇಶಗಳಿಂದ ಭಾರತದಲ್ಲಿ ಶಿಕ್ಷಣ ಪಡೆಯಲು ತಕ್ಷಶಿಲಾ, ನಳಂದಾ ವಿದ್ಯಾ ಕೇಂದ್ರಗಳಿಗೆ ಬರುತ್ತಿದ್ದರು. ಈ ಶಿಕ್ಷಣ ಕೇಂದ್ರಗಳಲ್ಲಿ ಬಹುಶಿಸ್ತೀಯ ಅಧ್ಯಯನಗಳು ನಡೆಯುತ್ತಿದ್ದವು. ವಿದ್ಯಾರ್ಥಿಗಳಿಗೆ ಬದುಕಿನಲ್ಲಿ ಮಹತ್ವದ ಗುರಿ ಇರಬೇಕು. ಯಾವ ರೀತಿಯ ಜ್ಞಾನಬೇಕೆಂಬ ಅರಿವು ಇರಬೇಕು. ಅವಶ್ಯ ಮತ್ತು ಅವಶ್ಯವಿಲ್ಲದ ಜ್ಞಾನ ಯಾವುದು ಎಂಬ ತಿಳುವಳಿಕೆ ಮತ್ತು ಸ್ವವಿಮರ್ಶಾ ಪ್ರಜ್ಞೆ ಇರಬೇಕು ಎಂದರು.

ವಿದ್ಯಾರ್ಥಿಗಳ ಯಶಸ್ಸಿಗೆ ಇಂದು ಕೌಶಲ್ಯ ಆಧಾರಿತ ಶಿಕ್ಷಣ ಮತ್ತು ಬಹುಶಿಸ್ತೀಯ ನೆಲೆಯ ಜ್ಞಾನ ಅವಶ್ಯಕತೆ ಇದೆ. ಇಂದು ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕ್ಷೇತ್ರದ ಎಲ್ಲಾ ವಿಷಯಗಳು ಬಹುಮುಖ್ಯ. ಇವುಗಳ ಅಂತರಶಿಸ್ತೀಯ ಅಧ್ಯಯನದ ಮಹತ್ವವನ್ನು ಅರಿಯಬೇಕು. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಮತ್ತು ಕೊರತೆಗಳೇನು ಎಂಬುದನ್ನು ತಿಳಿದುಕೊಳ್ಳಬೇಕು. ಸಾಮರ್ಥ್ಯವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಕೊರತೆಗಳನ್ನು ಜಯಿಸಬೇಕು ಎಂದರು.

ಇವುಗಳೊಂದಿಗೆ ವಿದ್ಯಾರ್ಥಿಗಳಿಗೆ ಶಿಸ್ತು ಮತ್ತು ಉತ್ತಮ ವ್ಯಕ್ತಿತ್ವ ಬಹಳ ಮುಖ್ಯ. ವ್ಯಕ್ತಿತ್ವವನ್ನು ಕಳೆದುಕೊಂಡರೆ ಎಲ್ಲವನ್ನು ಕಳೆದುಕೊಂಡಂತೆ ಎಂದರು.

ಕಾಲೇಜು ಸಮುಚ್ಚಯದ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ ಅವರು ಧಿಕ್ಷಾರಂಭ ಅಥವಾ ಅಭಿವಿನ್ಯಾಸ ಕಾರ್ಯಕ್ರಮದ ಪರಿಕಲ್ಪನೆ ಮತ್ತು ಮಹತ್ವ ವಿವರಿಸುತ್ತಾ, ವಿದ್ಯಾರ್ಥಿಗಳು ಒಂದು ಸ್ನಾತಕ ಪದವಿಯಿಂದ ಸ್ನಾತಕೋತ್ತರ ಪದವಿಯ ಅಧ್ಯಯನಕ್ಕೆ ಪ್ರವೇಶ ಪಡೆದಾಗ ವಿವಿಧ ಆಲೋಚನೆ ಮತ್ತು ಕನಸುಗಳೊಂದಿಗೆ ಬಂದಿರುತ್ತಾರೆ. ಈ ಸಂದರ್ಭದಲ್ಲಿ ಕಾಲೇಜಿನ ಬಗ್ಗೆ, ಅವರ ಆಯ್ಕೆ ವಿಷಯಗಳು, ಪರೀಕ್ಷಾ ಪದ್ಧತಿ, ಕಾಲೇಜಿನ ನಿಯಮಗಳು ಮುಂತಾದ ಶೈಕ್ಷಣಿಕ ವಿಚಾರಗಳ ಬಗ್ಗೆ ಮಾಹಿತಿ ನೀಡುವುದು ಪ್ರಮುಖವಾದ ಕಾರ್ಯ. ವಿದ್ಯಾರ್ಥಿಗಳು ಸಾಮಾಜೀಕರಣ, ಸಹವರ್ತಿಸುವುದು, ಆಡಳಿತವಾಗಿ ಮತ್ತು ಶೈಕ್ಷಣಿಕವಾಗಿ ಅನುಭವವನ್ನು ಪಡೆದುಕೊಳ್ಳುವುದು ಬಹುಮುಖ್ಯ. ಈ ಹಿನ್ನೆಲೆಯಲ್ಲಿ ಈ ಧೀಕ್ಷಾರಂಭ ಎಂಬ ಎರಡು ದಿನದ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಇದು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ವರ್ಷದಲ್ಲಿ ತಮ್ಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕವಾಗಿ ತೊಡಗಿಸಿಕೊಳ್ಳಲು ಸಹಾಯಕವಾಗುತ್ತದೆ ಎಂದರು.

ವಿದ್ಯಾರ್ಥಿನಿ ಧನುಶ್ರೀ ಮತ್ತು ತಂಡದವರು ಪ್ರಾರ್ಥಿಸಿದರು. ಪ್ರಾಂಶುಪಾಲ ಡಾ.ಎಂ. ಪ್ರಭು ಸ್ವಾಗತಿಸಿದರು. ಡಾ.ಎಚ್.ವಿ. ಕಾವ್ಯಾ ನಿರೂಪಿಸಿದರು. ಡಾ. ರಾಜೇಂದ್ರ ಪ್ರಸಾದ್ ವಂದಿಸಿದರು.

ಈ ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಪ್ರೊ. ದೇವಣ್ಣ, ಪ್ರಾಂಶುಪಾಲ ಡಾ.ಎಂ. ಪ್ರಭು, ಡಾ.ಎಂ. ಚೇತನ ಕುಮಾರ್, ಡಾ.ಎನ್. ರಾಜೇಂದ್ರ ಪ್ರಸಾದ್, ಡಾ.ಬಿ. ಪ್ರಭುಸ್ವಾಮಿ, ಡಾ. ಕುಮುದಿನಿ ಅಚ್ಚಿ, ಡಾ.ಜೆ. ಶಿವಾನಂದ ಮನೋಹರ್, ಶ್ರೀನಿವಾಸ, ಜಿ. ಕಾರ್ತಿಕ್, ಕೆ.ಸಿ. ಸುನೀಲ್ ಕುಮಾರ್, ಎಂ. ಕಾರ್ತಿಕ್, ಡಾ,ಎಚ್.ಎಸ್. ಕುಮಾರ್, ಡಾ.ಕೆ.ಎಂ. ಅನಿಲ್ ಕುಮಾರ್, ಡಾ.ಬಿ. ಸುಶ್ಮಿತಾ ಇವರು ವಿವಿಧ ವಿಷಯ ಕುರಿತು ಮಾತನಾಡುವರು. 15 ಸ್ನಾತಕೋತ್ತರ ವಿಭಾಗಗಳ ಪ್ರಥಮ ವರ್ಷದ ಒಟ್ಟು 502 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

PREV

Recommended Stories

ಋತು ರಜೆ ಕೊಡದಿದ್ದರೆ ಕ್ರಮ : ಲಾಡ್‌
ಪ್ರೇಮಿ ಜೊತೆ ಓಡಿ ಹೋದ ಮಗಳ ತಿಥಿ ಮಾಡಿದ ಅಪ್ಪ