ಇಂದು ದಂಡಿನ ದುರ್ಗಮ್ಮ ಜಾತ್ರೆ

KannadaprabhaNewsNetwork | Published : May 28, 2024 1:15 AM

ಸಾರಾಂಶ

ಸೋಮವಾರ ಡೊಳ್ಳು ಭಜನೆ, ಶಹನಾಯಿ, ವಿವಿಧ ವಾದ್ಯಮೇಳಗಳೊಂದಿಗೆ ಮೆರವಣಿಗೆಯ ಜತೆಗೆ ಹೊರಡುವ ಪಾಲಕಿ ದಂಡಿನ ದುರ್ಗಾದೇವಿ ದೇವಸ್ಥಾನ ತಲುಪಿದೆ

ಗದಗ: ದೇಶದ ವಿಶಿಷ್ಟ ಸಮುದಾಯ ಎಂದು ಗುರುತಿಸುವ ಪಾರ್ದಿ (ಹರಿಣಿಶಿಕಾರಿ) ಸಮುದಾಯದ ಆರಾಧ್ಯ ದೇವಿಯಾಗಿರುವ ಗದಗ ನಗರದ ರೋಣ ರಸ್ತೆಯಲ್ಲಿರುವ ಶ್ರೀ ದಂಡಿನ ದುರ್ಗಾದೇವಿ ಜಾತ್ರೆ ಮಂಗಳವಾರ ಸಾಂಪ್ರದಾಯಿಕವಾಗಿ ಜರುಗಲಿದೆ. ಭಾನುವಾರ ಶ್ರೀ ದಂಡಿನ ದುರ್ಗಾದೇವಿಯ ಪಾಲಕಿ ಮುಳಗುಂದದಿಂದ ಮೆರವಣಿಗೆ ಹೊರಟಿದ್ದು, ಗದಗ-ಬೆಟಗೇರಿ ಸೆಟ್ಲಮೆಂಟ್ ಹಳೆಕಟ್ಟೆಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಸೋಮವಾರ ಡೊಳ್ಳು ಭಜನೆ, ಶಹನಾಯಿ, ವಿವಿಧ ವಾದ್ಯಮೇಳಗಳೊಂದಿಗೆ ಮೆರವಣಿಗೆಯ ಜತೆಗೆ ಹೊರಡುವ ಪಾಲಕಿ ದಂಡಿನ ದುರ್ಗಾದೇವಿ ದೇವಸ್ಥಾನ ತಲುಪಿದೆ.

ಈ ದೇವಿಯ ಜಾತ್ರೆಗೆ ದೇಶದ ಮೂಲೆ ಮೂಲೆಯಲ್ಲಿರುವ ಪಾರ್ದಿ ಜನಾಂಗದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಮಹಾರಾಷ್ಟ ಮಧ್ಯಪ್ರದೇಶ, ರಾಜಸ್ಥಾನ, ಆಂಧ್ರಪ್ರದೇಶ, ತಮಿಳುನಾಡಿನಿಂದ ಕುಟುಂಬ ಸದಸ್ಯರ ಸಮೇತ ಆಗಮಿಸುವುದಲ್ಲದೇ, ಆ ಪ್ರದೇಶದಲ್ಲಿ ಎರಡು ದಿನಗಳ ಕಾಲ ತಾತ್ಕಾಲಿಕ ಟೆಂಟ್‌ ನಿರ್ಮಿಸಿ ವಾಸ್ತವ್ಯ ಹೂಡುತ್ತಾರೆ.

ಜಾತ್ರೆ ಹಿನ್ನೆಲೆಯಲ್ಲಿ ಪಾಲಾ ಬದಾಮಿ ರಸ್ತೆಯ ಎರಡೂ ಬದಿಗೆ ನೂರಾರು ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ಹೀಗಾಗಿ ಇಲ್ಲಿ ವಾಹನ ದಟ್ಟಣೆ ಉಂಟಾಗುತ್ತದೆ. ಪೊಲೀಸರು ಸುಗಮ ವಾಹನ ಸಂಚಾರಕ್ಕೆ ಕೆಲವು ಮಾರ್ಗ ಬದಲಾವಣೆ ಮಾಡುತ್ತಾರೆ.

ಈ ಜಾತ್ರೆಗೆ ಆಗಮಿಸಿರುವ ಭಕ್ತರು ದೇವಿಗೆ ಪೂಜೆ, ನೈವೇದ್ಯ, ಅಭಿಷೇಕದ ಜತೆಗೆ ಕೆಲವರು ಬೇವಿನ ಉಡುಗೆ ಧರಿಸುವುದು, ದೀಡ್ ನಮಸ್ಕಾರ ಹಾಕುವುದು ಮಾಡುತ್ತಾರೆ. ಇನ್ನು ದೇವಿಗೆ ವಿಶೇಷವಾಗಿ ಕೋಳಿ, ಕುರಿಗಳನ್ನು ಬಲಿ ಕೊಟ್ಟು ಹರಕೆ ತೀರಿಸಿ, ಅದರಲ್ಲಿಯೇ ಅಡುಗೆ ತಯಾರಿಸಿ ದೇವಿಗೆ ನೈವೇದ್ಯ ಮಾಡಿ, ಕುಟುಂಸ್ಥರೆಲ್ಲ ಸೇರಿ ಆಹಾರ ಸೇವಿಸುವುದು ಈ ಜಾತ್ರೆಯ ಮತ್ತೊಂದು ವಿಶೇಷತೆ.

ಕೋಳಿ ಖರೀದಿ ಜೋರು: ಶ್ರೀ ದಂಡಿನ ದುರ್ಗಾದೇವಿ ಜಾತ್ರಾಮಹೋತ್ಸವಕ್ಕೆ ಆಗಮಿಸುವ ಸಾವಿರಾರು ಸಂಖ್ಯೆಯ ಭಕ್ತರು ದೇವಿಗೆ ಅರ್ಪಿಸಲು ಕೋಳಿ ಬಲಿ ಕೊಡುವುದು ಸಾಮಾನ್ಯ. ಅದಕ್ಕಾಗಿ ಬೆಟಗೇರಿಯ ವಿವಿಧ ಬಡಾವಣೆಗಳಲ್ಲಿ ಸೋಮವಾರ ಬೆಳಗ್ಗೆಯಿಂದಲೇ ಕೋಳಿಗಳ ವ್ಯಾಪಾರ ಬಲು ಜೋರಾಗಿಯೇ ನಡೆಯುತ್ತಿದೆ. ಭಕ್ತರು ಸಾಕಷ್ಟು ಸಂಖ್ಯೆಯಲ್ಲಿ ಕೋಳಿಗಳನ್ನು ಖರೀದಿಸುವುದು ಕೂಡಾ ಅಲ್ಲಲ್ಲಿ ಕಂಡು ಬಂದಿತು.

Share this article