ಹುಬ್ಬಳ್ಳಿ: ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಇಲ್ಲಿಯ ದುರ್ಗದಬೈಲ್, ಶಾ ಬಜಾರ್ ಮಾರ್ಕೆಟ್‌ನಲ್ಲಿ ಶುಕ್ರವಾರ ರಶ್ಶೋ ರಶ್. ಎಂದಿಗಿಂತ ಜನಸಂದಣಿ ಜಾಸ್ತಿ!
ಹಣ್ಣುಗಳ ದರ ಹೆಚ್ಚಳ: ಈ ವರ್ಷ ಡ್ರೈಪ್ರೂಟ್ಸ್ ದರ ಹೆಚ್ಚಾಗಿದ್ದು, ಪಿಸ್ತಾ 1 ಕೆಜಿಗೆ ₹2,600 ರೂ. ಬದಾಮು 100 ಗ್ರಾಂ ₹100, ಚಾರೂಲಿ 100 ಗ್ರಾಂ ₹120, ಚಿಂಬಿಲ್ ಶಾವಿಗೆ ಅರ್ಧ ಕೆಜಿ ₹80ಕ್ಕೆ ಮಾರಾಟವಾಗುತ್ತಿವೆ. ಇರಾನ್‌ನಿಂದ ಡ್ರೈಪ್ರೂಟ್ಸ್ ತರಿಸುತ್ತಿದ್ದೆವು. ಈ ಬಾರಿ ಸಂಗ್ರಹವಿದ್ದ ಸರಕನ್ನೇ ಮಾರಾಟ ಮಾಡುತ್ತಿದ್ದೇವೆ’ ಎಂದು ಶಾ ಬಜಾರ್‌ನ ಡ್ರೈಪ್ರೂಟ್ಸ್ ವ್ಯಾಪಾರಿ ರಿಹಾನ್ ಹೇಳಿದರು.
ಪ್ರತಿ ವರ್ಷವೂ ರಂಜಾನ್ ಹಬ್ಬದ ಖರೀದಿ ಜೋರಾಗಿರುತ್ತದೆ. ಹೀಗಾಗಿ ವ್ಯಾಪಾರಸ್ಥರು ರಸ್ತೆ ಬದಿ, ಮಧ್ಯೆ, ವೃತ್ತದ ಸುತ್ತಲೂ ತಮ್ಮ ಸಾಮಗ್ರಿಗಳನ್ನು ಇಟ್ಟು ಗ್ರಾಹಕರನ್ನು ಸೆಳೆದರು. ಬಟ್ಟೆ ಮಾರಾಟ, ಚಪ್ಪಲಿ, ಡ್ರೈಫ್ರುಟ್ಸ್ , ಶಾವಿಗೆ, ಬ್ಯಾಗ್, ಪರ್ಸ್, ವೈವಿಧ್ಯಮಯ ಆಭರಣ, ಬಗೆಬಗೆಯ ಬಳೆಗಳು, ಮೆಹಂದಿ, ಗೃಹೋಪಯೋಗಿ ಸಾಮಗ್ರಿಗಳು ಖರೀದಿಗೆ ಜನರು ಮುಗಿಬಿದ್ದಿದ್ದರು. ವಿಶೇಷವಾಗಿ ಸುಗಂಧ ದ್ರವ್ಯ, ಖರ್ಜೂರ ಸೇರಿದಂತೆ ವಿವಿಧ ಬಗೆಯ ಹಣ್ಣುಗಳು ಮಾರಾಟ ಜೋರಾಗಿತ್ತು.ಇನ್ನೊಂದೆಡೆ ಪ್ರಾರ್ಥನೆಗೆ ಧರಿಸುವ ತರಹೇವಾರಿ ಟೋಪಿ, ಟರ್ಕಿ, ಅಫಘಾನಿಸ್ತಾನ್ ಸೇರಿದಂತೆ ಇತರ ದೇಶಗಳ ಟೋಪಿ ಹಾಗೂ ಕುರ್ತಾ, ಆಲ್ಕೋಹಾಲ್ ಬಳಸದ ಸುಗಂಧ ದ್ರವ್ಯ, ಬಟ್ಟೆ, ತಿನಿಸು ಮಾತ್ರವಲ್ಲದೆ ಗೃಹೋಪಯೋಗಿ ವಸ್ತುಗಳನ್ನು ಜನರು ಖರೀದಿಸಿದರು. ಇದರೊಟ್ಟಿಗೆ ಮಾರ್ಕೆಟ್‌ಗೆ ಆಗಮಿಸಿದ ಜನರ ದಾಹ ನೀಗಿಸಲು ತಂಪುಪಾನೀಯ ಮಾರಾಟವೂ ಭರ್ಜರಿಯಾಗಿ ನಡೆಯಿತು.