ಉಡುಪಿ ಜಿಲ್ಲಾದ್ಯಂತ ಇಂದು ರಾಮೋತ್ಸವ

KannadaprabhaNewsNetwork | Published : Jan 22, 2024 2:16 AM

ಸಾರಾಂಶ

ಅಯೋಧ್ಯೆ ಶ್ರೀರಾಮ ಪ್ರಾಣ ಪ್ರತಿಷ್ಠೆ ಪ್ರಯುಕ್ತ ಸೋಮವಾರ ಉಡುಪಿ ಶ್ರೀಕೃಷ್ಣಮಠದಲ್ಲಿ ಬೆಳಗ್ಗೆ ಭಜನೆ ಸಂಕೀರ್ತನೆ, ಶ್ರೀ ಕೃಷ್ಣನಿಗೆ ವಿಶೇಷ ಅಲಂಕಾರ ಪೂಜೆ, ಮಧ್ಯಾಹ್ನ ಹತ್ತಾರು ಸಾವಿರ ಮಂದಿ ಹಾಲು ಪಾಯಸ ವಿತರಣೆಗೆ ಏರ್ಪಾಡು ಮಾಡಲಾಗಿದೆ. ಸಂಜೆ 5 ರಥಗಳ ವಿಶೇಷ ರಥೋತ್ಸವವನ್ನು ನಡೆಸಲಾಗುತ್ತದೆ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಅಯೋಧ್ಯೆಯಲ್ಲಿ ಸೋಮವಾರ ನಡೆಯುವ ಬಾಲರಾಮನ ಪ್ರಾಣಪ್ರತಿಷ್ಠೆ ಮತ್ತು ರಾಮಮಂದಿರದ ಲೋಕಾರ್ಪಣೆಯ ಸಂಭ್ರಮದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ದೇವಾಲಯಗಳಲ್ಲಿ ವೈವಿಧ್ಯಮಯ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಮುಖ್ಯವಾಗಿ ಉಡುಪಿ ಶ್ರೀಕೃಷ್ಣಮಠದಲ್ಲಿ ಬೆಳಗ್ಗೆ ಭಜನೆ ಸಂಕೀರ್ತನೆ, ಶ್ರೀ ಕೃಷ್ಣನಿಗೆ ವಿಶೇಷ ಅಲಂಕಾರ ಪೂಜೆ, ಮಧ್ಯಾಹ್ನ ಹತ್ತಾರು ಸಾವಿರ ಮಂದಿ ಹಾಲು ಪಾಯಸ ವಿತರಣೆಗೆ ಏರ್ಪಾಡು ಮಾಡಲಾಗಿದೆ.

ಸಂಜೆ 5 ರಥಗಳ ವಿಶೇಷ ರಥೋತ್ಸವವನ್ನು ನಡೆಸಲಾಗುತ್ತದೆ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.

ನೇರ ವೀಕ್ಷಣೆಗೆ ವ್ಯವಸ್ಥೆ:

ಕೃಷ್ಣಮಠ ರಾಜಾಂಗಣದ ಜೊತೆಗೆ ಜಿಲ್ಲೆಯಾದ್ಯಂತ ಸಾಕಷ್ಟು ದೇವಾಲಯಗಳಲ್ಲಿ ಬೃಹತ್ ಎಲ್ ಇಡಿ ಪರದೆಗಳಲ್ಲಿ ಅಯೋಧ್ಯೆಯ ರಾಮಂದಿರದ ಲೋಕಾರ್ಪಣೆಯ ನೇರಪ್ರಸಾರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.

ಕಲ್ಯಾಣಪುರ ಮೂಡುತೋನ್ಸೆ ಗ್ರಾಮದಲ್ಲಿ ಶಾಸಕ ಯಶ್ ಪಾಲ್ ಸುವರ್ಣ ನೇತೃತ್ವದಲ್ಲಿ ಹಿಂದೂ ಯುವಸೇನೆಯ ವತಿಯಿಂದ ನಿರ್ಮಿಸಲಾದ ಮನೆ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ.

ಮಲ್ಪೆಯ ಜಿ.ಎಸ್.ಬಿ. ಸಮಾಜದ ಶ್ರೀ ರಾಮ ಮಂದಿರದಲ್ಲಿ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ರಾಮನಾಮ ಹವನ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ಕರಂಬಳ್ಳಿಯ ವೆಂಕಟರಮಣ ದೇವಾಲಯದಲ್ಲಿ ರಾಮತಾರಕ ನಾಮ ಹೋಮ, ಆಂಜನೇಯ ದೇವರಿಗೆ ಕಲಶಾಭಿಷೇಕ, ಪ್ರಸನ್ನಪೂಜೆ, ಸಂಜೆ 6 ಗಂಟೆಗೆ ಶ್ರೀ ರಾಮ ದೀಪೋತ್ಸವವನ್ನು ಆಯೋಜಿಸಲಾಗಿದೆ.

ಉಚಿತ ಬಸ್ ಪ್ರಯಾಣ:

ಬಾಲರಾಮನ ಪ್ರಾಣಪ್ರತಿಷ್ಠೆಯ ಸಂಭ್ರಮವನ್ನು ಜನರು ನಾನಾ ರೀತಿಯಲ್ಲಿ ಆಚರಿಸುತ್ತಿದ್ದು, ಇಲ್ಲಿನ 3 ಬಸ್ಸುಗಳ ಮಾಲಕರು ದಿನವಿಡೀ ಪ್ರಯಾಣಿಕರಿಗೆ ಉಚಿತ ಪ್ರಯಾಣವನ್ನು ಘೋಷಿಸಿದ್ದಾರೆ. ಉಡುಪಿ - ಹೆಬ್ರಿಗೆ ನಡುವೆ ಸಂಚರಿಸುವ ಎಸ್.ಆರ್.ಎಮ್., ಎಸ್.ಡಿ.ಎಮ್ ಮತ್ತು ಮುಟ್ಲುಪಾಡಿ - ಉಡುಪಿ ನಡುವೆ ಸಂಚರಿಸುವ ಎಸ್.ಎಮ್.ಎಮ್.ಎಸ್. ಬಸ್ಸಿನವರು ಸೋಮವಾರ ದಿನವಿಡೀ ಜನರಿಗ ಟಿಕೆಟ್ ಇಲ್ಲದೆ ಪ್ರಯಾಣಕ್ಕೆ ಅವಕಾಶ ನೀಡಿದ್ದಾರೆ.

ಜಿಲ್ಲಾ ಪೊಲೀಸ್ ಕಟ್ಟೆಚ್ಚರ

ಅಯೋಧ್ಯೆಯ ರಾಮಮಂದಿರ ಲೋಕಾರ್ಪಣೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಯಾವುದೇ ಅನಪೇಕ್ಷಿತ ಘಟನೆಗಳು ನಡೆಯದಂತೆ ಜಿಲ್ಲಾ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದ್ದು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ಎಸ್ಪಿ ಡಾ.ಅರುಣ್ ಕೆ. ತಿಳಿಸಿದ್ದಾರೆ.

ಇಬ್ಬರು ಹೆಚ್ಚುವರಿ ಎಸ್ಪಿ, 3 ಡಿವೈಎಸ್ಪಿ, 10 ಇನ್ಸ್ ಪೆಕ್ಟರ್, 47 ಸಬ್ ಇನ್ಸ್ ಪೆಕ್ಟರ್, 670 ಪೊಲೀಸ್ ಸಿಬಂದಿ ಜೊತೆಗೆ 100 ಮಂದಿ ಹೋಮ್ ಗಾರ್ಡ್ಸ್, 3 ಕೆಎಸ್ ಆರ್ ಪಿ ತುಕಡಿ, 8 ಡಿಎಆರ್ ತಂಡಗಳು ಬಂದೋಬಸ್ತ್ ಕಾರ್ಯದಲ್ಲಿ ಸಹಕರಿಸಲಿದ್ದಾರೆ ಎಂದವರು ತಿಳಿಸಿದ್ದಾರೆ.

Share this article