ಮಧ್ಯಾಹ್ನ 3 ಗಂಟೆಗೆ ಶ್ರೀಮಠದ ಮುಂಭಾಗದಿಂದ ಆಚಾರ್ಯ ಶ್ರೀ ಶಾಂತಿಸಾಗರ ಮಹಾರಾಜರ ಪ್ರತಿಮೆಯೊಂದಿಗೆ ವಿವಿಧ ಮಂಗಳವಾದ್ಯ, ಧರ್ಮಧ್ವಜ, ಮಂಗಳ ಕಳಶಗಳೊಂದಿಗೆ ಬೃಹತ್ ಮೆರವಣಿಗೆ ಹಾಗೂ ಸಂಜೆ 6ಗಂಟೆಗೆ ಮೆರವಣಿಗೆಯಲ್ಲಿ ಸಾಗಿ ನೂತನವಾಗಿ ಸ್ಥಾಪಿತಗೊಂಡಿರುವ ಪ್ರತಿಮೆಯ ಎದುರು ಆರತಿ ಕಾರ್ಯಕ್ರಮ ಇರಲಿದೆ.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಚಾರಿತ್ರ್ಯ ಚಕ್ರವರ್ತಿ ಆಚಾರ್ಯ ಶ್ರೀ 108ನೇ ಶಾಂತಿಸಾಗರ ಮಹಾರಾಜರ ಪ್ರತಿಮೆ ಪ್ರತಿಷ್ಠಾಪನಾ ಮಹೋತ್ಸವ ಮತ್ತು ಶ್ರೀ ಕ್ಷೇತ್ರದಲ್ಲಿ ನಾಲ್ಕನೇ ಬೆಟ್ಟದ ಪದನಾಮ ಅನಾವರಣ ಕಾರ್ಯಕ್ರಮ ನ. 9ರಂದು ಜರುಗಲಿದೆ ಎಂದು ಶ್ರೀ ಕ್ಷೇತ್ರದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ತಿಳಿಸಿದರು. ಶ್ರೀಮಠದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪೂಜ್ಯರು, ಹಿರಿಯ ಶ್ರೀಗಳು ಬೆಳಗೊಳಕ್ಕೆ ಬಂದು 100 ವಸಂತಗಳ ಪುಣ್ಯಸ್ಮೃತಿ ಸವಿ ನೆನಪಿನಲ್ಲಿ ಅವರ ಕೀರ್ತಿ ಶ್ರವಣ ಬೆಳಗೊಳದಲ್ಲಿ ಶಾಶ್ವತವಾಗಿರಲೆಂದು ವಿಂಧ್ಯಗಿರಿಯ ಪಕ್ಕದಲ್ಲಿರುವ ಮತ್ತೊಂದು ಖಾಲಿ ಬೆಟ್ಟದಲ್ಲಿ ಹತ್ತೂವರೆ ಅಡಿ ಎತ್ತರದ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ ಎಂದರು. ಅಂದು ಬೆಳಗ್ಗೆ 12 ಗಂಟೆಗೆ ಶ್ರೀ ಕ್ಷೇತ್ರದ ಗೊಮ್ಮಟನಗರದ ಬಾಹುಬಲಿ ತಾಂತ್ರಿಕ ಮಹಾ ವಿದ್ಯಾಲಯದ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ 4ನೇ ಬೆಟ್ಟದ ಮೇಲೆ ಆಚಾರ್ಯ ಶ್ರೀ ಶಾಂತಿಸಾಗರ ಮಹಾರಾಜರ ಪ್ರತಿಮೆ ಪ್ರತಿಷ್ಠಾಪನಾ ಚರಣ ಪಾದುಕೆ ಸ್ಥಾಪನೆ ಹಾಗೂ ಬೆಟ್ಟಕ್ಕೆ ಪದನಾಮ ಅನಾವರಣ ಮತ್ತು ಶಾಂತಿಸಾಗರ ಮಹಾರಾಜರ ಜೀವನ ಚರಿತ್ರೆಯ ಬೃಹತ್ ಶಿಲಾಶಾಸನ ಲೋಕಾರ್ಪಣೆ ಆಗಲಿದೆ ಎಂದು ಹೇಳಿದರು.
ಮಧ್ಯಾಹ್ನ 3 ಗಂಟೆಗೆ ಶ್ರೀಮಠದ ಮುಂಭಾಗದಿಂದ ಆಚಾರ್ಯ ಶ್ರೀ ಶಾಂತಿಸಾಗರ ಮಹಾರಾಜರ ಪ್ರತಿಮೆಯೊಂದಿಗೆ ವಿವಿಧ ಮಂಗಳವಾದ್ಯ, ಧರ್ಮಧ್ವಜ, ಮಂಗಳ ಕಳಶಗಳೊಂದಿಗೆ ಬೃಹತ್ ಮೆರವಣಿಗೆ ಹಾಗೂ ಸಂಜೆ 6ಗಂಟೆಗೆ ಮೆರವಣಿಗೆಯಲ್ಲಿ ಸಾಗಿ ನೂತನವಾಗಿ ಸ್ಥಾಪಿತಗೊಂಡಿರುವ ಪ್ರತಿಮೆಯ ಎದುರು ಆರತಿ ಕಾರ್ಯಕ್ರಮ ಇರಲಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ದೇಶದ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅವರ ಘನ ಉಪಸ್ಥಿತಿಯಲ್ಲಿ, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭಾಗಿಯಾಗಿ ವಿವಿಧ ಕಾರ್ಯಕ್ರಮ ಉದ್ಘಾಟಿಸುವರು.
ಇವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಸಚಿವ ಡಿ.ಸುಧಾಕರ್, ಸಂಸದ ಶ್ರೇಯಸ್ ಪಟೇಲ್ ಭಾಗಿಯಾಗುವರು. ಸ್ಥಳೀಯ ಶಾಸಕ ಸಿ.ಎನ್.ಬಾಲಕೃಷ್ಣ ಅಧ್ಯಕ್ಷತೆವಹಿಸುವರು. ಶಾಸಕರಾದ ಅಭಯ್ ಪಾಟೀಲ, ಎಂಎಲ್‌ಸಿ ಡಾ.ಸೂರಜ್ ರೇವಣ್ಣ, ರಾಜ್ಯಸಭಾ ಸದಸ್ಯ ನವೀನ್ ಜೈನ್ ಹಾಗೂ ಮಹರಾಷ್ಟ್ರದ ಶಾಸಕರೂ ಭಾಗಿಯಾಗುವರು ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.