ಧಾರವಾಡ:
ಇಲ್ಲಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ 6ನೇ ಘಟಿಕೋತ್ಸವ ನ. 29ರ ಬೆಳಗ್ಗೆ 11ಕ್ಕೆ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ನಡೆಯಲಿದ್ದು, ರಾಜ್ಯಪಾಲರಾದ ಥಾವರಚಂದ್ ಗೆಹಲೋತ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ. ಬಸವರಾಜು ತಿಳಿಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸುಪ್ರಿಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಧನಂಜಯ ವೈ ಚಂದ್ರಚೂಡ್ ಘಟಿಕೋತ್ಸವ ಭಾಷಣ ಮಾಡಲಿದ್ದು, ಅವರು ಸೇರಿದಂತೆ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ, ನ್ಯಾಯಮೂರ್ತಿ ಅಶೋಕ ಬಿ. ಹಿಂಚಗೇರಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು. ಸಮಾರಂಭದಲ್ಲಿ ಕಾನೂನು ಸಚಿವ ಡಾ. ಎಚ್.ಕೆ. ಪಾಟೀಲ ಭಾಗವಹಿಸಲಿದ್ದಾರೆ ಎಂದರು.
ಘಟಿಕೋತ್ಸವದಲ್ಲಿ 5234 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವದು. ಈ ಪೈಕಿ 2991 ಪುರುಷ ವಿದ್ಯಾರ್ಥಿಗಳು ಮತ್ತು 2243 ಮಹಿಳಾ ವಿದ್ಯಾರ್ಥಿಗಳಿದ್ದಾರೆ. ವಿವಿಧ ಕಾನೂನು ಕೋರ್ಸ್‌ಗಳಲ್ಲಿ ಹೆಚ್ಚಿನ ಅಂಕ ಪಡೆದ ಹತ್ತು ವಿದ್ಯಾರ್ಥಿಗಳಿಗೆ ಸುವರ್ಣ ಪದಕ ಹಾಗೂ ರ್‍ಯಾಂಕ್ ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಲಾಗವುದು. ಜೊತೆಗೆ ಕನ್ನಡ ಮಾಧ್ಯಮದಲ್ಲಿ ಕಾನೂನು ಕಲಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಮೂರು ವರ್ಷದ ಹಾಗೂ ಐದು ವರ್ಷದ ಕಾನೂನು ಪದವಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ರ್‍ಯಾಂಕ್, ಪ್ರಮಾಣ ಪತ್ರ ನೀಡಲಾಗುತ್ತಿದೆ. ಕಾನೂನು ವಿಷಯದಲ್ಲಿ ಸಂಶೋಧನೆ ಮಹಾಪ್ರಬಂಧ ಮಂಡಿಸಿದ ಆರು ಪುರುಷ, 9 ಮಹಿಳಾ ಒಟ್ಟು 15 ಅಭ್ಯರ್ಥಿಗಳಿಗೆ ಪಿಎಚ್.ಡಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.ಇತ್ತೀಚೆಗೆ ಕಾನೂನು ಪದವಿಗೆ ಹೆಚ್ಚಿನ ಬೇಡಿಕೆ ಬಂದಿದ್ದು, ಹೊಸದಾಗಿ ಸ್ನಾತಕೋತ್ತರದಲ್ಲಿ ಅಪರಾಧ ಕಾನೂನು, ಬೌದ್ಧಿಕ ಹಕ್ಕುಗಳು ಪದವಿ ಆರಂಭಿಸಲಾಗಿದೆ. ಆಡಳಿತ ಭವನ, ಆಡಿಟೋರಿಯಂ, ಆಟದ ಮೈದಾನ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಸರ್ಕಾರ ಒದಗಿಸುತ್ತಿದೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿ ಕುಲಪತಿ, 11 ಕಾಯಂ ಶಿಕ್ಷಕರಿದ್ದು ಪೂರ್ಣಾವಧಿ ಹಾಗೂ ಅತಿಥಿ ಶಿಕ್ಷಕರನ್ನು ಬಳಸಿಕೊಂಡು ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಕುಲಸಚಿವರಾದ ಅನುರಾಧ ವಸ್ತ್ರದ, ಪ್ರೊ. ರತ್ನಾ ಆರ್. ಭರಮಗೌಡರ ಇದ್ದರು.