ವೀರರುದ್ರಮುನಿ ಜಗದ್ಗುರುಗಳ ಪುಣ್ಯಸ್ಮರಣೆ ಇಂದು

KannadaprabhaNewsNetwork |  
Published : Aug 12, 2024, 12:47 AM IST
೧೧ಬಿಹೆಚ್‌ಆರ್ ೧: ರುದ್ರಮುನಿ ಜಗದ್ಗುರುಗಳು. | Kannada Prabha

ಸಾರಾಂಶ

ಬಾಳೆಹೊನ್ನೂರು, ರಂಭಾಪುರಿ ಪೀಠದ 120ನೇ ಪೀಠಾಧೀಶ ಪ್ರಸನ್ನ ರೇಣುಕ ವೀರರುದ್ರಮುನಿದೇವ ಶಿವಾಚಾರ್ಯ ಜಗದ್ಗುರುಗಳ 32ನೇ ಪುಣ್ಯ ಸ್ಮರಣೋತ್ಸವ ಆ.12ರಂದು (ಸೋಮವಾರ) ರಂಭಾಪುರಿ ಪೀಠದಲ್ಲಿ ವಿಜೃಂಭಣೆಯಿಂದ ನಡೆಯಲಿದೆ ಎಂದು ರಂಭಾಪುರಿ ಡಾ.ವೀರಸೋಮೇಶ್ವರ ಶ್ರೀಗಳು ತಿಳಿಸಿದ್ದಾರೆ.

ಪ್ರಸನ್ನ ರೇಣುಕ ವೀರರುದ್ರಮುನಿದೇವ ಶಿವಾಚಾರ್ಯ ಜಗದ್ಗುರುಗಳ 32ನೇ ಪುಣ್ಯ ಸ್ಮರಣೋತ್ಸವ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ರಂಭಾಪುರಿ ಪೀಠದ 120ನೇ ಪೀಠಾಧೀಶ ಪ್ರಸನ್ನ ರೇಣುಕ ವೀರರುದ್ರಮುನಿದೇವ ಶಿವಾಚಾರ್ಯ ಜಗದ್ಗುರುಗಳ 32ನೇ ಪುಣ್ಯ ಸ್ಮರಣೋತ್ಸವ ಆ.12ರಂದು (ಸೋಮವಾರ) ರಂಭಾಪುರಿ ಪೀಠದಲ್ಲಿ ವಿಜೃಂಭಣೆಯಿಂದ ನಡೆಯಲಿದೆ ಎಂದು ರಂಭಾಪುರಿ ಡಾ.ವೀರಸೋಮೇಶ್ವರ ಶ್ರೀಗಳು ತಿಳಿಸಿದ್ದಾರೆ.ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆ ಬಾರ್ಸಿ ತಾಲೂಕಿನ ವೈರಾಗ ಹಿರೇಮಠದ ವೇ. ಬಾಳಲಿಂಗಯ್ಯಸ್ವಾಮಿ ಮತ್ತು ಲಕ್ಷ್ಮಿಬಾಯಿ ಪುತ್ರರಾದ ವೀರರುದ್ರಮುನಿದೇವ ಶ್ರೀಗಳು ವೈರಾಗ ಬಾರ್ಸಿ ಸೋಲ್ಲಾಪುರದಲ್ಲಿ ಶಿಕ್ಷಣ ಪೂರೈಸಿ ಉನ್ನತ ವ್ಯಾಸಂಗಕ್ಕೆ ಶ್ರೀ ಕ್ಷೇತ್ರ ಕಾಶಿಗೆ ತೆರಳಿ ವಿದ್ಯಾ ವಿನಯ ಸಂಪನ್ನರಾಗಿ ಬೆಳೆದು ಹಿರೇಮಠದ ಪಂಚಾಕ್ಷರ ಶಿವಾಚಾರ್ಯರಾಗಿ ಅಧಿಕಾರ ಪಡೆದರು.ಚತುರ್ಭಾಷಾ ಪಂಡಿತರಾದ ಶ್ರೀಗಳು ಮಹಾರಾಷ್ಟ್ರದಲ್ಲಿ ಶ್ರಾವಣ ತಪೋನುಷ್ಠಾನ ನೆರವೇರಿಸಿ ಭಕ್ತ ಸಂಕುಲಕ್ಕೆ ಪ್ರವಚನ ನೀಡುವ ಮೂಲಕ ಜನ ಜಾಗೃತಿ ಉಂಟು ಮಾಡಿದ್ದರು. ಆಚಾರ ವಿಚಾರ ನಿಷ್ಠರಾದ ಪಂಚಾಕ್ಷರ ಶಿವಾಚಾರ್ಯರನ್ನು ರಂಭಾಪುರಿ ವೀರಗಂಗಾಧರ ಜಗದ್ಗುರು ತಮ್ಮ ಉತ್ತರಾಧಿಕಾರಿಯನ್ನಾಗಿ ನಿಯುಕ್ತಿ ಮಾಡಿ 1972 ಮೇ 15ರಂದು ಸಮಾನ ಪೀಠಗಳ ಸಮ್ಮುಖದಲ್ಲಿ ಜಗದ್ಗುರು ಪಟ್ಟಾಭಿಷೇಕ ನೆರವೇರಿಸಿ ಜಗದ್ಗುರು ಪ್ರಸನ್ನ ರೇಣುಕ ವೀರರುದ್ರಮುನಿದೇವ ಶಿವಾಚಾರ್ಯ ಭಗವತ್ಪಾದರು ಎಂಬ ನಾಮಾಂಕಿತದಿಂದ ಶುಭ ಹಾರೈಸಿದರು. ಪೀಠಾರೋಹಣದ ನಂತರ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರದಲ್ಲಿ ಸಂಚರಿಸಿ ಧರ್ಮ ಜಾಗೃತಿ ಕೈಕೊಂಡರು. ಜಗದ್ಗುರು ರೇಣುಕಾಚಾರ್ಯರು ಅಗಸ್ತ್ಯರಿಗೆ ಬೋಧಿಸಿದ ಸಿದ್ಧಾಂತ ಶಿಖಾಮಣಿ 21 ಪರಿಚ್ಛೇದಗಳನ್ನು ಕಂಠಸ್ಥ ಮಾಡಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಬಾಳೆಹೊನ್ನೂರಿನಲ್ಲಿ ಪ್ರೌಢ ಶಾಲೆ ಮತ್ತು ಜಗದ್ಗುರು ರೇಣುಕಾಚಾರ್ಯ ಕೈಗಾರಿಕಾ ತರಬೇತಿ ಕೇಂದ್ರ ಪ್ರಾರಂಭಿಸಿದರು. ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಒಲವು ಹೊಂದಿದ ಜಗದ್ಗುರು ಕಾಫೀ ತೋಟ-ಗದ್ದೆಗಳನ್ನು ಪುನರುಜ್ಜೀವನಗೊಳಿಸಿ ಆರ್ಥಿಕ ಭದ್ರತೆಗೆ ಶ್ರಮಿಸಿದರು. ಹಲವಾರು ರಚನಾತ್ಮಕ ಕಾರ್ಯಗಳ ಮೂಲಕ ಶ್ರೀ ಪೀಠದ ಸರ್ವಾಂಗೀಣ ಪ್ರಗತಿಗೆ ಸದಾ ಶ್ರಮಿಸಿದರು. 19 ವರ್ಷ ಶ್ರೀಪೀಠವನ್ನು ಆರೋಹಣ ಮಾಡಿ ತಮ್ಮ ಉತ್ತರಾಧಿಕಾರಿಯಾಗಿ ಪ್ರಸ್ತುತ ಜಗದ್ಗುರುಗಳನ್ನು ಆಯ್ಕೆ ಮಾಡಿ ಮೃತ್ಯು ಪತ್ರ ಬರೆದಿಟ್ಟು 1991ರ ಶ್ರಾವಣ ಶುದ್ಧ ಅಷ್ಟಮಿಯಂದು ಲಿಂಗೈಕ್ಯರಾದರು. ರುದ್ರಮುನಿ ಜಗದ್ಗುರುಗಳ ಹೆಸರು ಸದಾ ಉಳಿಯಬೇಕೆಂಬ ಉದ್ದೇಶದಿಂದ ಅವರ ಗದ್ದುಗೆಯನ್ನು ಶಿಲಾಮಯವಾಗಿ ನಿರ್ಮಿಸುವ ಜೊತೆಗೆ ಜಗದ್ಗುರು ರುದ್ರಮುನೀಶ್ವರ ವಸತಿ ಪ್ರೌಢಶಾಲೆ ಮತ್ತು ಜಗದ್ಗುರು ರುದ್ರಮುನೀಶ್ವರ ಸಮುದಾಯ ಭವನ ನಿರ್ಮಿಸಿ ಕೃತಜ್ಞತೆ ಸಲ್ಲಿಸಿದ್ದಾರೆ. ಸೋಮವಾರ ನಡೆಯಲಿರುವ ಲಿಂಗೈಕ್ಯ ಜಗದ್ಗುರುಗಳ ಪುಣ್ಯ ಸ್ಮರಣೋತ್ಸವದಲ್ಲಿ ಮಹಾರಾಷ್ಟ್ರ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಭಕ್ತರು ಪಾಲ್ಗೊಳ್ಳಲಿದ್ದಾರೆ.೧೧ಬಿಹೆಚ್‌ಆರ್ ೧: ರುದ್ರಮುನಿ ಜಗದ್ಗುರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ